ಯತಿ ಸ್ವಂತೀ -120


30-04-2018
ಅಮ್ಮನನ್ನು ಕಾರಿನಲ್ಲಿ ಕರೆದೊಯ್ದು ಇಂಪ್ರೆಸ್ ಮಾಡಲು ನೋಡಿದೆ. ‘ರಾಜು, ನಿನಗಿಂತ ಉಷಾನೇ ಚೆನ್ನಾಗಿ ಕಾರೋಡಿಸ್ತಾಳೆ’ ಎಂದುಬಿಟ್ಟರು!
ನನ್ನ ಪತ್ನಿ ಉಷಾ ಮಾರುತಿ ಆಮ್ನಿಯನ್ನು ಓಡಿಸುತ್ತಿದ್ದಳು. ಅವಳೊಂದಿಗೆ ಇವರೂ ಎಲ್ಲೆಡೆ ಹೋಗುತ್ತಿದ್ದರು. ಅದಕ್ಕೇ ಅವಳಿಗೆ ಕಾಂಪ್ಲಿಮೆಂಟು! ನನ್ನಮ್ಮನೇ ಹಾಗೆ. ಗುಣಕ್ಕೆ ಮತ್ಸರ ಇಲ್ಲ!
ಅಂತೂ ಇಂತೂ ಎರಡು ತಿಂಗಳು ಇದ್ದರು. ಆರು ತಿಂಗಳಾದರೂ ಇರಲಿ ಎನ್ನುವುದು ನನ್ನ ಇಚ್ಛೆಯಾಗಿತ್ತು. ಆದರೆ ಅಷ್ಟರಲ್ಲಿ ನಮ್ಮ ದೊಡ್ಡಮ್ಮನ ಮೊಮ್ಮಗನ ಮುಂಜಿ ಎನ್ನುವ ಸುದ್ದಿ ಬಂದಿತು.
‘ನಾನು ಹೋಗಬೇಕು. ನಮ್ಮ ಎಲ್ಲ ನೆಂಟರನ್ನೂ ಒಂದು ಕಡೆ ನೋಡಬಹುದು’ ಎಂದು ಹೇಳತೊಡಗಿದರು. ಇನ್ನು ಅವರನ್ನು ಇರು ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಅವರನ್ನು ಕಳಿಸುವ ಏರ್ಪಾಡು ಮಾಡಿದೆ.
ನಾನು ಮಸ್ಕತ್‍ಗೆ ಹೋದ ಹೊಸತರಲ್ಲಿ ಯಾವುದೋ ಒಂದು ಕನ್ನಡದ ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗ ಒಬ್ಬ ತಮಿಳು ಯುವಕನ ಪರಿಚಯವಾಗಿತ್ತು. ಆಗ ನಾನು ಬೆಳ್ಳಗೆ, ಸ್ಥೂಲವಾಗಿ, ಮೀಸೆ ಇಲ್ಲದವನಾಗಿದ್ದೆ. ಒಂದು ವರ್ಷದಲ್ಲಿ ಕಪ್ಪಾಗಿ, ಸಣ್ಣಗಾಗಿ, ಮೀಸೆ ಬಿಟ್ಟಿದ್ದೆ.
ಎರಡನೇ ಅವತಾರದಲ್ಲಿದ್ದಾಗ ದಯಾನಂದ ಅವರ ಕಾಮಿಡಿ ಷೋಗೆ ಹೋಗಿದ್ದೆ. ಆತ ಒಬ್ಬರೇ ಅದೇ ಮೊದಲ ಸಲ ಬಂದಿದ್ದಂತೆ. ಅಬ್ಬಾ, ನಗಿಸಿ ಹೊಟ್ಟೆ ಹುಣ್ಣಾಗಿಸಿದರು.
ಹೊರಗೆ ಬರುತ್ತಿದ್ದಾಗ ‘ಯತಿರಾಜ್’ ಎಂದ ಒಬ್ಬಾತ.
ಅವನೇ! ಹಿಂದೊಮ್ಮೆ ನೋಡಿದ್ದ ತಮಿಳು ಯುವಕ.  ಆದರೆ ಅನುಮಾನದಿಂದ ಕರೆದಿದ್ದ.
ನಾನೇ ಮಾತಾಡಿಸಿ, ಯಾಕೆ ನನ್ನ ಗುರುತು ಸಿಗಲಿಲ್ವಾ ಎಂದೆ. ನನ್ನ ಮಾತು ನನಗೇ ಟೊಳ್ಳಾಗಿ ಕೇಳಿಸಿತ್ತು. ಏಕೆಂದರೆ ಬ್ಯಾಂಕಿಗೆ ಹೋದಾಗ ನನ್ನ ಪಾಸ್‍ಪೋರ್ಟನ ಮೀಸೆ ಇಲ್ಲದ ಬಿಳಿಮುಖದ ಪಟ ನೋಡಿ ಬ್ಯಾಂಕಿನ ಸಿಬ್ಬಂದಿ ಅನುಮಾನದಿಂದ ನೋಡುತ್ತಿದ್ದರು. ನಾನು ನನ್ನ ಮೀಸೆಯ ಮೇಲೆ ಅಡ್ಡ ಬೆರಳಿಟ್ಟುಕೊಂಡಾಗ ನನ್ನ ಗುರುತು ಹಿಡಿಯುತ್ತಿದ್ದರು.
ಮತ್ತೆ ನನ್ನನ್ನು ಹೇಗೆ ಕಂಡು ಹಿಡಿದೆ? ಎಂದೆ.
ನಿನ್ನ ವಿಚಿತ್ರವಾದ ಬಣ್ಣದ ಟೀ ಷರ್ಟ್‍ನಿಂದ ಎಂದ. ಅಬ್ಬಾ! ಎಂದು ನಕ್ಕೆ.
ಅಮ್ಮನನ್ನು ಏರ್‍ಪೋರ್ಟ್‍ಗೆ ಕರೆದೊಯ್ದಾಗ ಅಲ್ಲಿ ಯಾರಿದ್ದಾರೆ? ಈ ತಮಿಳು ಯುವಕ! ಸಂಸಾರ ಸಮೇತ ಬೆಂಗಳೂರಿಗೆ ಹೊರಟಿದ್ದ. ಅಮ್ಮನನ್ನು ನೋಡಿಕೊಂಡು, ಬೆಂಗಳೂರು ತಲುಪಿಸುವ ಭಾರ ಅವನಿಗೆ ಒಪ್ಪಿಸಿದೆ.
ಆದರೆ ಅಂದು ಅವನು ಜೊತೆಯಲ್ಲಿದ್ದುದು ಎಷ್ಟು ಒಳ್ಳೆಯದಾಯಿತೆನ್ನುತ್ತೀರಿ! ಅಂದು ವಿಮಾನ ನೇರವಾಗಿ ಬೆಂಗಳೂರು ತಲುಪದೇ ತಕ್ನೀಕೀ ಖರಾಬಿ ಕೆ ಕಾರಣ್ ಮುಂಬೈ ತಲುಪಿ, ಬೇರೆ ವಿಮಾನವನ್ನು ಬೆಂಗಳೂರಿಗೆ ಕಳಿಸಿದ್ದರು. ಅಮ್ಮ ಒಬ್ಬರೇ ಮ್ಯಾನೇಜ್ ಮಾಡುತ್ತಿದ್ದರೇ? ತಿಳಿಯದು.
ಒಟ್ಟಿನಲ್ಲಿ ಅಮ್ಮ ಬೆಂಗಳೂರಿಗೆ ತಲುಪಿ, ನನ್ನ ಪತ್ನಿ ಅವರನ್ನು ರಿಸೀವ್ ಮಾಡಿಕೊಂಡ ಮೇಲೆ ನನಗೆ ಈ ವಿಷಯಗಳು ತಿಳಿದವು.
ಅಮ್ಮನಿಗೆ ವಿಮಾನ ಎಂದರೆ ಬಹಳ ಇಷ್ಟ. ಬಿಳೀ ಹೆಂಡ್ತಿ ಚಿತ್ರದಲ್ಲಿ ಉಮಾ ಶಿವಕುಮಾರ್ ಏರೋಪ್ಲೇನ್ ಶಬ್ದ ಕೇಳಿದೊಡನೆ ಕೈಲಿದ್ದ ಸೌಟಿನೊಂದಿಗೆ ಹೊರಬಂದು ವಿಮಾನ ನೋಡುತ್ತಿದ್ದ ದೃಶ್ಯವನ್ನು ಪುಟ್ಟಣ್ಣ ಕಣಗಾಲ್ ಚಿತ್ರಿಸಿದ್ದರು. ಪತಿ ಶಿವರಾಂ ‘ನಡಿ, ಬಡಿ’ ಎಂದು ಎಳೆದೊಯ್ಯುತ್ತಿದ್ದರು ಊಟ ಬಡಿಸಲು ಉಮಾರನ್ನು.
ಅಮ್ಮನೂ ಹಾಗೆಯೇ ನೋಡುತ್ತಿದ್ದರು. ಅದಕ್ಕೇ 1989ರಲ್ಲಿ ಮುಂಬೈಗೆ ನನ್ನ ಕಸಿನ್ ಜೊತೆ ರೈಲಿನಲ್ಲಿ ಹೋಗಿದ್ದ ಅಮ್ಮನನ್ನು ಬರುವಾಗ ವಿಮಾನದಲ್ಲಿ ಬರುವ ಏರ್ಪಾಡು ಮಾಡಿದ್ದೆ. ಅದೆಷ್ಟು ಖುಷಿಯಾಗಿ ಹೊರಬಂದರು ಅಮ್ಮ! ಸಾರ್ಥಕವಾಗಿತ್ತು ಹಾಗೆ ಕಳಿಸಿದ್ದು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102