ಯತಿ ಸ್ವಂತೀ -119
29-04-2018
ಅಮ್ಮನನ್ನು ನೋಡಿ ಸ್ವಲ್ಪ ಗಾಬರಿಯಾಯಿತು. ಬಹಳ ನಿಧಾನವಾಗಿ ನಡೆಯುತ್ತಿದ್ದರು. ಪಾದರಸದಂತೆ ಇರುತ್ತಿದ್ದ ನನ್ನ ಅಮ್ಮ ಇವರೇನಾ? ಎಂದುಕೊಂಡೆ.
ಅಂದ ಹಾಗೆ ನಾನು ಆಫೀಸಿನ ಮೇಲಿನ ರೂಮಿನಿಂದ ಹತ್ತಿರದ ಸ್ಟಾರ್ ಸಿನಿಮಾ ಥಿಯೇಟರ್ ಪಕ್ಕದ ಫ್ಲ್ಯಾಟ್‍ನಲ್ಲಿ ಒಂದು ರೂಮು ಬಾಡಿಗೆಗೆ ಪಡೆದೆ. ನನಗೆ 80 ರಿಯಾಲ್ ಸಂಬಳ ಇದಕ್ಕೆಂದೇ ಹೆಚ್ಚು ಕೊಟ್ಟರು.
ಅದೊಂದು ನಾಲ್ಕು ರೂಮುಗಳ ಒಂದು ಬಾತ್‍ರೂಮ್, ಒಂದು ಕಿಚೆನ್ ಇದ್ದ ಪ್ಲ್ಯಾಟ್. ನಾಲ್ಕನೇ ಮಹಡಿ ಎಂದು ನೆನಪು.
ಆ ಫ್ಲ್ಯಾಟ್ ಒಳಗೆ ಕಾಲಿಡುತ್ತಿದ್ದಂತೆ ಒಂದು ರೂಮು. ಅದು ಕೇರಳದ ಶಂಶುದ್ದೀನ್ ರೂಮ್. ಅದರ ಪಕ್ಕದ್ದು ಉತ್ತರ ಭಾರತದ ಅಷ್ಫಾಕ್‍ನ ರೂಮು. ನಡುವೆ ಒಂದು ಕಿಚೆನ್. ಆಮೇಲೆ ಬಾತ್‍ರೂಮ್. ಅದರ ಎದುರಿಗೆ ನನ್ನ ರೂಮು. ನನ್ನ ರೂಮಿನ ಬಾಗಿಲ ಪಕ್ಕದಲ್ಲಿದ್ದ ರೂಮು ಮುಂಬೈನ ರಾಜ್‍ಶೆಟ್ಟಿಯದು.
ಮೊದಲೇ ಹೋಗಿ ‘ನನ್ನ ತಾಯಿ ಬರುತ್ತಿದ್ದಾರೆ. ಇಲ್ಲಿದ್ದರೆ ಪರವಾಗಿಲ್ವಾ?’ ಎಂದು ಕೇಳಿದೆ.
ಎಲ್ಲರೂ ಕೆಲಸಕ್ಕೆ ಹೋಗುವವರು. ಇದ್ದಿದ್ದು ಒಂದು ಬಾತ್‍ರೂಮ್. ಪಾಪ ಅಮ್ಮ ಅಡ್ಜೆಸ್ಟ್ ಮಾಡಿಕೊಂಡರು. ಎಂಟೂವರೆ ಹೊತ್ತಿಗೆ ಎಲ್ಲರೂ ಹೊರಟುಬಿಡುತ್ತಿದ್ದೆವು. ಆಮೇಲೆ ಕೇವಲ ಅಮ್ಮ ಮಾತ್ರ ಆ ಫ್ಲ್ಯಾಟ್‍ನಲ್ಲಿ.
ಊಟ ತರಿಸುತ್ತೇನೆಂದೆ. ನನಗೆ ಬೋರಾಗುತ್ತೆ. ಅಡಿಗೆ ಮಾಡ್ತೀನಿ ಎಂದರು.
ಕಿಚೆನ್ ಕ್ಲೀನ್ ಮಾಡಿ ಸಾಮಾನುಗಳನ್ನು ತಂದೆ. ಈ ನಡುವೆ ನನಗೆ ಲೈಟಿಂಗ್ ಷೋ ರೂಮ್‍ನಿಂದ ಹೆಡ್ ಆಫೀಸ್‍ಗೆ ವರ್ಗ ಆಗಿತ್ತು.
ಸಂಜೆ ಮನೆಗೆ ಬರುವಾಗ ತರಕಾರಿ, ದಿನಸಿ ಎಲ್ಲ ತರುತ್ತಿದ್ದೆ. ಅಮ್ಮ ಬಿಸಿ ಬಿಸಿ ಅಡುಗೆ ಮಾಡುತ್ತಿದ್ದರು.
ಸುಮಾರು ಎರಡು ತಿಂಗಳು ಅಮ್ಮನ ಕೈಯಡುಗೆ ತಿಂದು ಖುಷಿಯಾಯಿತು.
ಆದರೆ ಅವರನ್ನು ಯಾವ ಮಾರ್ಕೆಟ್‍ಗೂ ಕರೆದೊಯ್ಯಲಾಗಲಿಲ್ಲ. ಏಕೆಂದರೆ ಅವರು ನಾನು ನಡೆಯಲಾರೆ ಎಂದುಬಿಟ್ಟಿದ್ದರು.
ಆದರೆ ನನ್ನ ಸಹೋದ್ಯೋಗಿಗಳು ಕೆಲವರು ನನ್ನನ್ನೂ, ಅಮ್ಮನನ್ನೂ ಅವರುಗಳ ಮನೆಗೆ ಊಟಕ್ಕೆ ಕರೆದಿದ್ದರು. ಸಂತೋಷವಾಗಿ ಬಂದರು. ಎಲ್ಲರೊಂದಿಗೆ ಬೆರೆಯುವ ಸ್ವಭಾವ ಅಮ್ಮನದು. ನನಗೆ ಎಲ್ಲಿಂದ ಈ ಸ್ವಭಾವ ಬಂದಿದೆ ಎಂದು ಊಹಿಸಲು ಯಾವ ರಾಕೆಟ್ ಸೈನ್ಸೂ ಬೇಕಾಗಿಲ್ಲ ಅಲ್ವೇ?
ಅಂದ ಹಾಗೆ ಪ್ರವೀಣ ಬಂದೊಡನೆ ಅವನಿಗೆ ಅವನ ಕಾರನ್ನು ಹಿಂದಿರುಗಿಸಿದೆ. ನನ್ನ ಅಮ್ಮ ಬಂದಿದ್ದಾರೆ. ನನಗೊಂದು ಕಾರು ಬೇಕು ಎಂದುಕೊಂಡು ಆಫೀಸಿನವರು ಮಾಜ್ದಾ 6 ಎನ್ನುವ ಹಳೆಯ ಕಾರನ್ನು ಕೊಟ್ಟರು. ಅದರಲ್ಲೇ ಎಲ್ಲ ಕಡೆ ಅಮ್ಮನನ್ನು ಕರೆದೊಯ್ದೆ.
ಒಮ್ಮೆ ನನ್ನ ಕಾರಿನ ಟಯರ್ ಪಂಕ್ಚರ್ ಆಯಿತು. ಟಯರ್ ಬದಲಾಯಿಸಲು ಯಾರೂ ಬರಲಿಲ್ಲ. ಒಬ್ಬನೇ ಟಯರ್ ಬದಲಾಯಿಸಿದ್ದೆ.
ಇದೊಂದು ಅನುಭವ.
ಒಂದು ದಿನ ಸ್ವಲ್ಪ ಬೇಗ ಬಂದೆ. ಮನೆಗೆ ಬಂದು ಬಾಗಿಲು ತಟ್ಟಿದರೆ ಅಮ್ಮ ಇರಲಿಲ್ಲ! ಎಲ್ಲಿ ಎಂದು ಹುಡುಕುವುದು? ಗೊತ್ತಿಲ್ಲ. ಹುಚ್ಚನಂತೆ ಅಲ್ಲೆಲ್ಲಾ ಅಲೆದೆ. ಕೊನೆಗೆ ನಾಲ್ಕನೇ ಮಹಡಿಯಿಂದ ನಮ್ಮ ಬಿಲ್ಡಿಂಗ್‍ನ ಹಿಂದೆ ನೋಡಿದರೆ ಅಲ್ಲಿ ಮೆಲ್ಲನೆ ಓಡಾಡುತ್ತಿದ್ದರು. ವಾಕಿಂಗ್ ಮಾಡ್ತಿದ್ದೆ ಕಣೋ ಎಂದರು.
ಇನ್ನು ಮೇಲೆ ನಾನು ಇಲ್ಲದೇ ನೀನು ಕೆಳಗೆ ಬರಕೂಡದು. ಫ್ಲ್ಯಾಟ್ ಮುಂದಿನ ಮೊಗಸಾಲೆಯಲ್ಲಿಯೇ ವಾಕ್ ಮಾಡು ಎಂದು ತಾಕೀತು ಮಾಡಿದೆ.
Comments
Post a Comment