ಯತಿ ಸ್ವಂತೀ -106
16-04-2018
ಮತ್ತೊಮ್ಮೆ ಟೆಸ್ಟ್ ತೆಗೆದುಕೊಂಡೆ. ಈ ಸಲ ಬೆಳಗ್ಗೆ ಏಳಕ್ಕೇ ಟೆಸ್ಟ್. ಇಡೀ ಮಸ್ಕತ್‍ನಲ್ಲಿ ಎಲ್ಲರೂ ಆಫೀಸಿಗೆ ಧಾವಿಸುವ ಸಮಯ. ಅಲ್ಲಿ ಸರ್ಕಾರಿ ಕಛೇರಿಗಳು ಏಳಕ್ಕೆ ಶುರು. ನಮಗೆ 8 ಗಂಟೆಗೆ. ಸರ್ಕಾರಿ ಕಛೇರಿಯ ಆ ಜನ ಮಧ್ಯಾಹ್ನದ ಮೇಲೆ ಬೇರೊಂದು ಕೆಲಸ ಮಾಡಲು ಅನುಮತಿ ಇತ್ತೆಂದು ತೋರುತ್ತದೆ. ಕೆಲವರು ಟ್ಯಾಕ್ಸಿ ಓಡಿಸುತ್ತಿದ್ದರು. ಕೆಲವರು ಮಹಮ್ಮದ್‍ನಂತೆ ಕಾರು ಕಲಿಸುತ್ತಿದ್ದರು.
ಹ್ಞಾಂ... ಈಗ ನನಗೆ ಅಲಿ ಎನ್ನುವ ಹೊಸ ಗುರು ಬಂದಿದ್ದ. ಇವನಿಗೆ ಇಂಗ್ಲೀಷ್ ಬರುತ್ತಿತ್ತು. ‘ಯಾಕೀ’ ಎನ್ನುತ್ತಿದ್ದ ನನ್ನನ್ನು. ಅದರ ಅರ್ಥ ಅರಾಬಿಕ್‍ನಲ್ಲಿ ಗೆಳೆಯಾ ಅಂತೆ.
ಟೆಸ್ಟ್ ಶುರುವಾಯಿತು. ಕಾರು ಸಿಗ್ನಲ್‍ನಲ್ಲಿ ನಿಲ್ಲಿಸಿದೆ. ಇಳಿಜಾರಿನ ರಸ್ತೆ. ಈ ಇನ್ಸ್‍ಪೆಕ್ಟರ್ ಮಹಾರಾಯ ಕಣ್ಮುಚ್ಚಿ ಮಲಗಿದ್ದ. ಮುಂದಿನ ಕಾರು ಇದ್ದಕ್ಕಿದ್ದಂತೆ ನನ್ನ ಕಾರಿನೆಡೆಗೆ ಜಾರಿಕೊಂಡಿತು. ಅಯ್ಯಯ್ಯೋ ಮಿನಿಮಮ್ ಡಿಸ್ಟನ್ಸ್ ಇಡಲು ಸಾಧ್ಯವಿಲ್ಲವಲ್ಲಾ ಎಂದು ನಾನು ಹಿಂದಕ್ಕೆ ಹೋಗಲು ನೋಡಿದೆ. ಹಿಂದೆ ಆಗಲೇ ಕಾರುಗಳ ಸಾಲು. ಈಗ ಕಣ್ಬಿಟ್ಟ ಇನ್ಸ್‍ಪೆಕ್ಟರ್, ಡಿಸ್ಟನ್ಸ್ ನಾಟ್ ಮೆಯಿನ್‍ಟೈನ್ಡ್. ಸೋ ಫೆಯ್ಲ್ ಎಂದ.
ಅಲಿ ಬಹಳ ಸೀರಿಯಸ್ಸಾಗಿ ಆ ನಂತರ ಹೇಳಿದ. ಯಾಕೀ, ನಿನಗೆ ಚೆನ್ನಾಗಿ ಕಾರೋಡಿಸಲು ಬರುತ್ತದೆ. ನಿನಗೆ ದುಡ್ಡು ಜಾಸ್ತಿ ಇದೆಯಾ ಎಂದ. ಏನು ಮಾಡಲಿ ಮೆಂಟಲ್‍ಬ್ಲಾಕ್.
ಒಂಬತ್ತು ಟೆಸ್ಟ್ ಆಗಿತ್ತು. ಮತ್ತೊಂದು ಟೆಸ್ಟ್. ಈ ನಡುವೆ ಸಾಕಷ್ಟು ಸಲ ಬಿಸಿಲಲ್ಲಿ ಸುತ್ತಿ ಬಾಡಿದ್ದೆ. ನಮ್ಮ ಸರ್ದಾರ್ಜಿ ಬಾಸ್ ನನ್ನ ಫ್ಲ್ಯಾಟ್‍ಮೇಟನ್ನು ಕರೆದು, ‘ಅರೆ ಪ್ರವೀಣ್ ಯೇ ಧೂಪ್‍ಮೆ ಪೈದಲ್ ಜಾಯೇತೋ ಮರ್‍ಜಾಯೇಗ’ ಎಂದು ಹೇಳಿ ಇವನನ್ನು ದಿನಾಲೂ ಇಲ್ಲಿಗೆ ಬಂದು ಕರೆದೊಯ್ಯಿ. ಮತ್ತೆ ಬಿಟ್ಟು ಹೋಗು ಎಂದಿದ್ದರು. ಪಾಪ ಆ ಹುಡುಗ ಆ ಕೆಲಸವನ್ನು ಚಾಚೂ ತಪ್ಪದೇ ಮಾಡಿದ.
ಈ ಸಲ ಟೆಸ್ಟ್‍ಗೆ ಹೋಗುವ ಮುಂಚೆ ‘ಐ ಕ್ಯಾನ್, ಐ ಷಲ್, ಐ ವಿಲ್’ ಎಂದುಕೊಂಡೆ. ಕಾರನ್ನು ರಿವರ್ಸ್‍ನಲ್ಲಿ ಹಾಕೆಂದೆ. ಒಬ್ಬ ವಯಸ್ಸಾದ ಪೊಲೀಸ್ ಇನ್ಸ್‍ಪೆಕ್ಟರ್ ಬಂದಿದ್ದ. ಕಾರನ್ನು ಹತ್ತಿದ. ಸುಲಭವಾಗಿ ತೆಗೆದುಕೊಂಡು ಹೋದೆ. ಕೆಲವು ನಿಷಿದ್ಧ ಸ್ಥಳದಲ್ಲಿ ತಿರುಗೆಂದ. ಇಲ್ಲವೆಂದು ತಲೆಯಾಡಿಸಿದೆ. ಮನಸ್ಸಿನಲ್ಲಿ ‘ಇಂದಿನ ದಿನವೇ ಶುಭದಿನವು’ ಎಂದು ಹಾಡಿಕೊಳ್ಳುತ್ತಿದ್ದೆ. ಪಾಜ್ಹಿಟಿವ್ ಥಿಂಕಿಂಗ್!
ವಾಪಸ್ ಹೋಗೋಣವೆಂದ. ಮತ್ತೆ ಟೆಸ್ಟ್‍ಫೀಲ್ಡ್‍ಗೆ ಬಂದು ಕಾರನ್ನು ಪಾರ್ಕ್ ಮಾಡಿದ ನಂತರ ಪಾರ್ಕಿಂಗ್ ಕೂಡ ನೋಡಿ ಆತ ಇಳಿಯಬೇಕಿತ್ತು. ಪಾರ್ಕಿಂಗ್ ಅಷ್ಟು ದೂರದಲ್ಲಿದ್ದಾಗ ಯಾವುದೋ ಕಾರು ಅಡ್ಡವಿತ್ತು. ವಿಧಿಯಿಲ್ಲದೇ ನಿಲ್ಲಿಸಿದೆ. ಟಕ್ಕೆಂದು ಇಳಿದು ಹೊರಟುಹೋದ ಇನ್ಸ್‍ಪೆಕ್ಟರ್. ಒಂದು ರೀತಿ ನಿರಾಸೆಯಾಯಿತು. ಇನ್ನೂ ಒಂದು ಟೆಸ್ಟಾ? ಎಂದುಕೊಂಡೆ.
ನಂತರ ಪಾರ್ಕಿಂಗ್ ಮಾಡಿದೆ. ಪರ್ಫೆಕ್ಟ್ ಪಾರ್ಕಿಂಗ್. ಅಲಿ ಇಳಿದು ಹೋದ. ಕೇಳಿ ಬರ್ತೇನೆ ರಿಜಲ್ಟ್ ಅಂತ.
ಮರಳಿ ಬಂದು ‘ಯಾಕಿ, ವ್ಹಾಟ್ ಯು ಹ್ಯಾವ್ ಡನ್?’ ಎಂದ. ಪ್ರಶ್ನಾರ್ಥಕವಾಗಿ ನೋಡಿದೆ. ‘ಯೂ ಪಾಸ್’ ಎಂದ ಮೆಲ್ಲನೆ.
ಕಿವಿಗಳನ್ನು ನಂಬಲಾಗಲಿಲ್ಲ. ಅವನ ಮಾತು ಅರ್ಥವಾದೊಡನೆ ಎಗರಿ ಅವನನ್ನು ತಬ್ಬಿಕೊಳ್ಳಲು ಯತ್ನಿಸಿದೆ. ಅವನು ನನಗಿಂತ ಎತ್ತರ ಮತ್ತು ದಪ್ಪವಿದ್ದ. ಅದಕ್ಕೇ ಪೂರ್ತಿ ನನ್ನ ಅಪ್ಪುಗೆಗೆ ಸಿಗಲಿಲ್ಲ ಅವನು. ನನ್ನ ಆ ಚರ್ಯೆ ಅಲ್ಲಿದ್ದ ಎಲ್ಲರ ಮುಖದಲ್ಲೂ ನಗೆಯನ್ನು ಉಂಟುಮಾಡಿತ್ತು!
Comments
Post a Comment