ಯತಿ ಸ್ವಂತೀ -101


11-04-2018
ನಾವು ನಾಲ್ಕರಲ್ಲೋ ಮೂರರಲ್ಲೋ ಇದ್ದಾಗ ಒಂದು ಪಾಠವಿತ್ತು. ಅದರಲ್ಲಿ ಹುಡುಗರೆಲ್ಲ ಪಿಕ್‍ನಿಕ್‍ಗೆ ಹೋಗುವ ಪಾಠವೊಂದಿತ್ತು. ನಮ್ಮ ಮೇಡಂ ಇದನ್ನು ಶಾಲೆಯಲ್ಲಿ ಅಭಿನಯಿಸೋಣವೆಂದರು.
ಎಲ್ಲರೂ ಅವರವರ ಮನೆಯಿಂದ ತಿಂಡಿಗಳನ್ನು ತೆಗೆದುಕೊಂಡು ಹೋದೆವು. ಕೃಷ್ಣಮೂರ್ತಿ ಎನ್ನುವ ಹುಡುಗ ಹದ್ದಿನ ಪಾತ್ರ ವಹಿಸಿದ್ದ. ‘ರಾಮನ ದೋಸೆಯನ್ನು ಹದ್ದು ಹಾರಿಸಿಕೊಂಡು ಹೋಯಿತು’ ಎಂದೋ ಏನೋ ಒಂದು ವಾಕ್ಯವಿತ್ತು. ಅದಕ್ಕೇ ಅವನು ದೋಸೆಯನ್ನು ಎತ್ತಿಕೊಂಡು ಹೋಗುವ ದೃಶ್ಯವನ್ನು ಮೇಡಂ ಅಳವಡಿಸಿದ್ದರು!
ಸರತಿಯ ಸಾಲು ಎನ್ನುವ ಪಾಠ ಬಂದಾಗ ಅದರಲ್ಲಿ ‘ಸಾಕಪ್ಪಾ ಸಾಕು, ಸಿನಿಮಾ ನೋಡುವುದೇ ಬೇಡ’ ಎನ್ನುವ ವಾಕ್ಯ ಇಂದಿಗೂ ನೆನಪಿದೆ.
ನಮ್ಮ ಮನೆಯಂತೂ ಶಾಲೆಯಿಂದ ಕೇವಲ ಎರಡು ಫರ್ಲಾಂಗ್ ದೂರ. ದಿನವೂ ಮನೆಗೆ ಓಡಿ ಬಂದು ಸರಸರನೆ ಉಂಡು ಮತ್ತೆ ಶಾಲೆಗೆ ಓಡುತ್ತಿದ್ದೆವು. ಒಂದು ದಿನ ಅಮ್ಮನಿಗೆ ದುಂಬಾಲು ಬಿದ್ದು, ‘ಅಮ್ಮ ಅಮ್ಮ, ನಮಗೂ ಟಿಫನ್ ಕ್ಯಾರಿಯರ್ ಕೊಡು’ ಎಂದು ನಾನು ನನ್ನ ತಂಗಿ ಹೇಳಿದಾಗ, ಅಮ್ಮ ‘ನಾನೇ ತರುತ್ತೇನೆ’ ಎಂದು ಹೇಳಿ ಊಟದ ಬುತ್ತಿಯನ್ನು ಶಾಲೆಗೆ ತಂದರು. ಎಂತಹ ಖುಷಿ ಅಂತೀರಿ ನಮಗೆ! ಶಾಲೆಯಲ್ಲಿ ಕುಳಿತು ಊಟ ಮಾಡುವುದು!
ಶಾಲೆಯ ಮುಂದೆಯೇ ರೈಲ್ವೇ ಕಂಬಿಗಳು. ಆಗೆಲ್ಲಾ ಸ್ಟೀಮ್ ಎಂಜಿನ್. ಕೂ, ಝುಗ್ ಝುಗ್ ಎನ್ನುತ್ತಾ ಅನೇಕ ರೈಲುಗಳು ಓಡಾಡುತ್ತಿದ್ದವು. ಅರಸೀಕೆರೆ ಮತ್ತು ಬೆಂಗಳೂರಿಗೆ ರೈಲುಗಳು ನಮ್ಮ ಶಾಲೆಯ ಮುಂದೆಯೇ ಹೋಗುತ್ತಿದ್ದವು. ಅದರಲ್ಲೂ ಅರಸೀಕೆರೆಯ ರೈಲು ನಮ್ಮ ಶಾಲೆಗೆ ಹತ್ತಿರವಾಗಿ ಹೋಗುತ್ತಿದ್ದವು.
ಅದಲ್ಲದೇ ಶಂಟಿಂಗ್ ಅಂತ ಟ್ರೈನುಗಳನ್ನು ಸ್ಟೇಷನ್ನಿನ ಒಂದು ಕಂಬಿಯಿಂದ ಮತ್ತೊಂದಕ್ಕೆ ಬದಲಾಯಿಸಲು ಮುಂದಕ್ಕೆ ತರುತ್ತಿದ್ದರು. ಸ್ಟೀಂ ಎಂಜಿನ್ ತನ್ನೊಳಗೆ ಸೇರಿರಬಹುದಾದ ಕೊಳೆಯನ್ನು ಹೊರಹಾಕಲು ಬ್ಲೋಡೌನ್ ಮಾಡುತ್ತಿತ್ತು. ಕೂ ಝಗ್ ಝಗ್ ಡಬಾರ್ ಎನ್ನುವ ಶಬ್ದ ಬರುತ್ತಿತ್ತು.
ಕಮಲಹಾಸನ್ ಅಭಿನಯದ ಪುಷ್ಪಕವಿಮಾನ ನೋಡಿರುವಿರಾ? ಅವನ ಮನೆಯ ಪಕ್ಕದ ಥೇಟರಿನಲ್ಲಿನ ಶಬ್ದವಿದ್ದರೆ ಮಾತ್ರ ಅವನಿಗೆ ನಿದ್ರೆ ಬರುತ್ತಿರುತ್ತದೆ. ಅದಕ್ಕೇ ಅವನು ಹೊಟೇಲ್‍ನಲ್ಲಿ ಮಲಗಲು ಬಂದಾಗ ಹಂಸತೂಲಿಕಾ ತಲ್ಪದಂತಹ ಹಾಸಿಗೆಯ ಮೇಲೆ ನಿದ್ರೆ ಬರದೇ ತನ್ನ ಮನೆಗೆ ಹೋಗಿ ಆ ಥೇಟರ್‍ನಿಂದ ಹೊರಬರುತ್ತಿದ್ದ ಡಬಡಬ ಸದ್ದನ್ನು ಟೇಪ್ ರೆಕಾರ್ಡ್ ಮಾಡಿಕೊಂಡು ಬಂದು ಅದನ್ನು ಹಾಕಿಕೊಂಡು ಮಲಗುತ್ತಾನೆ. ನಗೆ ಬರುವುದು ಯಾವಾಗೆಂದರೆ ಕ್ಯಾಸೆಟ್ ಮುಗಿದಾಗ ಅದನ್ನು ತಿರುಗಿಸಿ ಹಾಕಿ ಮಲಗುತ್ತಾನೆ!
ನನಗೆ ಬುದ್ಧಿ ತಿಳಿದಾಗಿನಿಂದ ಇದ್ದ ಮನೆ ಮೈಸೂರು ರೈಲ್ವೇ ಕಾಲೋನಿಯದು. ಆ ಸದ್ದುಗಳಲ್ಲೇ ಬೆಳೆದವನು. ಪಿಯುಸಿ ಓದಲು ಬೆಂಗಳೂರು ಜಯನಗರಕ್ಕೆ ಬಂದೆ. ಟಿ ಬ್ಲಾಕ್ ಹದಿನಾರನೇ ಮೆಯ್ನ್‍ನಲ್ಲಿ ನನ್ನ ಸೋದರತ್ತೆಯ ಮನೆ. ನಿದ್ರೆ ಬರುವುದು ಬಹಳ ಕಷ್ಟವಾಗಿತ್ತು ಮೊದಮೊದಲು ರೈಲಿನ ಸದ್ದಿಲ್ಲದೇ. ಆದರೂ ಆ ರಸ್ತೆಯಲ್ಲಿ ಆಗ ಎರಡೂ ಕಡೆ ಬಸ್ಸುಗಳು ಓಡಾಡುತ್ತಿದ್ದವು. ಅದನ್ನೇ ಅಡ್ಜೆಸ್ಟ್ ಮಾಡಿಕೊಂಡೆ!
ನಂತರ ಹದಿನೆಂಟನೇ ಮೆಯ್ನ್‍ನಲ್ಲಿ ಹೋಗುವುದು, ಹದಿನಾರರಲ್ಲಿ ಬರುವುದು ಮಾಡತೊಡಗಿದವು ಬಸ್‍ಗಳು.


Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102