ಯತಿ ಸ್ವಂತೀ -97


07-04-2018
ಮಸ್ಕತ್‍ನಲ್ಲಿ ನನ್ನ ಡ್ರೈವಿಂಗ್ ಕಲಿಯುವಿಕೆಯೇ ಒಂದು ಗಾಥೆಯಷ್ಟು ದೊಡ್ಡದು. ನನಗೆ ಇಲ್ಲಿ 1992ರಲ್ಲಿ ಲೈಸೆನ್ಸ್ ಸಿಕ್ಕಿತ್ತು.  ಸ್ಟೀರಿಂಗ್ ಚಕ್ರದ ಪಕ್ಕವಿದ್ದ ಹ್ಯಾಂಡ್ ಗೇರ್ ಅಂಬಾಸೆಡರ್‍ನಲ್ಲಿ ನಾನು ಇಲ್ಲಿ ಒಮ್ಮೆ ಫೆಯ್ಲ್ ಆಗಿ ಎರಡನೇ ಸಲ ಒಂದು ವರ್ಷದ ನಂತರ ಲೈಸೆನ್ಸ್ ತಗೊಂಡಿದ್ದೆ. ಆಗ ನನಗೆ ಅಮೆರಿಕದಲ್ಲಿ ಎಂ.ಎಸ್. ಮಾಡಬೇಕೆಂಬ ‘ಹುಚ್ಚು’ ಹಿಡಿದು ಅದಕ್ಕಾಗಿ ಅಪ್ಲೈ ಮಾಡಿದ್ದೆ. ಮರಗಳ ನಡುವೆ ಓದಬೇಕೆಂಬ ಬಲು ಚಿಕ್ಕ ಆಸೆ ನನ್ನದು. ಅದಕ್ಕಾಗಿಯೇ ಡ್ರೈವಿಂಗ್ ಕಲಿತಿದ್ದು. ಇಲ್ಲದಿದ್ದರೆ ಕಾರು ಕೊಂಡುಕೊಳ್ಳಲಾಗದ ಆರ್ಥಿಕ ಸ್ಥಿತಿ ನನ್ನದಾಗಿದ್ದಾಗ ನನಗೇಕೆ ಬೇಕಿತ್ತು ಡ್ರೈವಿಂಗ್ ಕಲಿಕೆ?
ಮಸ್ಕತ್‍ನಲ್ಲಿ ಕೆಲಸ ಸಿಕ್ಕಿತೆಂದೊಡನೆ ಇಲ್ಲಿ ನನ್ನ ಶ್ರೀಮತಿ ಓಡಿಸುತ್ತಿದ್ದ ಮಾರುತಿ ಆಮ್ನಿಯನ್ನು ತೆಗೆದುಕೊಂಡು ಹೊರಟೆ. ಮನೆಯ ಬಳಿ ಒಬ್ಬರು ಅಂಕಲ್ ನನಗೆ ಗುರು! ಲೈಸೆನ್ಸ್ ಇದ್ದವನಲ್ಲವೇ! ಕಾರನ್ನು ಎರಡು ಕಡೆ ಮೋರಿಯೊಳಗಿಳಿಸಿ ಅಂಕಲ್ ಅವರಿಗೂ ಸುಸ್ತು ಹೊಡೆಸಿದ್ದೆ!
ಸರಿ, ವಿಮಾನ ಏರಿ ಮಸ್ಕತ್ ತಲುಪಿದೆ. ರಣಬಿಸಿಲು! ರಾತ್ರಿ ಎಂಟೂವರೆಯಲ್ಲಿ 45 ಡಿಗ್ರೀ ಸೆಲ್ಷಿಯಸ್.
ಕಾರು ಡ್ರೈವಿಂಗ್ ಕಲಿಯದಿದ್ದರೆ ಅಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವ ವಿಷಯ ಅರಿತು ಚಿಂತಿತನಾದೆ. ಮರುದಿನ ಬೆಳಗ್ಗೆ ನಮ್ಮ ಎರಡನೇ ಬಾಸ್ ಭೇಟಿ ಆದಾಗ ಮೊದಲ ಬಾಸ್ ಬರೋವರೆಗೂ ನಾನು ಕಾರು ಕಲಿಯುವಂತಿಲ್ಲ ಎನ್ನುವ ವಿಷಯ ಅರಿತು ನೆಮ್ಮದಿ ಕಂಡೆ! ಏಕೋ ಒಂದು ಮೆಂಟಲ್ ಬ್ಲಾಕ್ ಉಂಟಾಗಿತ್ತು.
ಆದರೆ ಆ ಬಿಸಿಲಿನ ಝಳವನ್ನು ತಡೆಯಲಾಗುತ್ತಿರಲಿಲ್ಲ. ಕ್ಯಾಬ್‍ಗೆ ಹಣವನ್ನು ಬರೀ ಮುಖ್ಯರಸ್ತೆಗೆ ಹೋಗಲು ನೀಡುತ್ತಿದ್ದರು ಆಫೀಸಿನವರು. ಅಂದರೆ ಈಗ ಮೈಸೂರು ರಸ್ತೆಯಲ್ಲಿ ಆಟೋದಲ್ಲಿ ಹೋದರೆ ಕೇವಲ ಆ ರಸ್ತೆಯಲ್ಲೇ ಇಳಿಯಬೇಕು. ಗುಡ್ಡದಹಳ್ಳಿ, ಗೋರಿಪಾಳ್ಯ ಒಳಗೆಲ್ಲ ಹೋಗುವ ಹಾಗಿಲ್ಲ. ಹಾಗಾಗಿ ಅನೇಕ ಸಲ ಎರಡು ಮೂರು ಕಿಮೀ ಬಿರುಬಿಸಿಲಿನಲ್ಲಿ ನಡೆದು, ಬಸವಳಿದು, ಗ್ರಾಹಕರ ಕಛೇರಿ ತಲುಪಿದೊಡನೆ ಅವರಿಂದ ನೀರು ಪಡೆದು ಕುಡಿಯುತ್ತಿದ್ದೆ. ನನ್ನ ಕಷ್ಟದ ಪರಿಸ್ಥಿತಿ ನೋಡಿ ಅವರು ನನಗೆ ಆರ್ಡರ್ ಕೊಟ್ಟಿರಲೂಬಹುದು! ಅಡ್ವಾಂಟೇಜ್ ಯತಿ, ಟ್ರೇಡ್‍ಲಿಂಕ್ಸ್ (ನನ್ನ ಕಂಪೆನಿ!)
ನನ್ನ ಮನೆಯಿಂದ ನಮ್ಮ ಆಫೀಸ್ ಸುಮಾರು ನಾಲ್ಕು ಕಿಮೀ ದೂರದಲ್ಲಿತ್ತು. ಬೆಳಗ್ಗೆ ಏಳು ಗಂಟೆಗೆ ಹೊರಟು, ಆಫೀಸ್‍ಗೆ ಬಹಳವೇ ಹತ್ತಿರದಲ್ಲಿದ್ದ ಒಮಾನ್ ಎಕ್ಸ್‍ಪ್ರೆಸ್ ಹೊಟೇಲ್‍ನಲ್ಲಿ ತಿಂಡಿ ತಿಂದು ಅಲ್ಲಿಂದ ಆಫೀಸ್ ತಲುಪುತ್ತಿದ್ದೆ. ನನ್ನದು ಲೈಟಿಂಗ್ ಷೋ ರೂಂ.
ಗಿರಾಕಿಗಳು ಒಳಗೆ ಬಂದಾಗ ಸಲಾಂ ವಾಲೇಕುಂ ಎನ್ನುತ್ತಿದ್ದರು. ವಾಲೇಕುಂ ಸಲಾಂ ಎನ್ನುವ ಉತ್ತರ ನನ್ನಿಂದ ಹೋಗುತ್ತಿತ್ತು.
ಮಧ್ಯಾಹ್ನ ಒಂದು ಗಂಟೆಗೆ ಮನೆಗೆ ಹೋಗಬೇಕಿತ್ತು. ಇದೇ ಒಮಾನ್ ಎಕ್ಸ್‍ಪ್ರೆಸ್‍ನಿಂದ ಮನೆಗೆ ಬೇರೆ ಬೇರೆ ಪ್ಲಾಸ್ಟಿಕ್ ಕವರುಗಳಲ್ಲಿ ಊಟ ಬರುತ್ತಿತ್ತು. ಅನ್ನ, ಸಾರು, ಸಾಂಬಾರ್, ಹಪ್ಪಳ, ಉಪ್ಪಿನಕಾಯಿ, ಪಲ್ಯ, ಮೊಸರು. ಅರ್ಧ ತಿಂದು ಉಳಿದರ್ಧವನ್ನು ಮತ್ತೆ ಅದೇ ಕವರುಗಳಲ್ಲಿ ಕಟ್ಟಿ ಫ್ರಿಜ್‍ನಲ್ಲಿಟ್ಟರೆ ಯಾರು ಮೊದಲು ಬರುತ್ತಿದ್ದರೋ ಅವರು ಆ ಕವರುಗಳಿದ್ದ ನಂನಮ್ಮ ತಟ್ಟೆಗಳನ್ನು ಹೊರಗಿಡುತ್ತಿದ್ದರು. ನಾವು ಉಣ್ಣುವ ವೇಳೆಗೆ ತಂಗಳ ಪೆಟ್ಟಿಗೆಯ ಕೋಲ್ಡ್ ಹೋಗಿರುತ್ತಿತ್ತು.


Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102