ಯತಿ ಸ್ವಂತೀ - 93
03-04-2018
ನನ್ನ ಉದ್ಯೋಗವು ನನ್ನನ್ನು ಆಂಧ್ರಪ್ರದೇಶಕ್ಕೆ(ಮತ್ತು ಈಗಿನ ತೆಲಂಗಾಣಕ್ಕೆ) ಒಯ್ದಿತು. ಅದು 2009. ಸರಿಸುಮಾರು 15 ದಿನಗಳಲ್ಲಿ ಹೈದರಾಬಾದ್, ವಾರಂಗಲ್, ಕರೀಂನಗರ್, ಆದಿಲಾಬಾದ್, ವಿಜಯವಾಡ, ಗುಂಟೂರು, ಖಮ್ಮಮ್, ವಿಶಾಖಪಟ್ಟಣಂ ನಗರಗಳಿಗೆ ಹೋದೆ. ವಿಶಾಖಪಟ್ಟಣಂನ ಹೊಟೇಲ್ ದಸಪಲ್ಲದಲ್ಲಿ ಇಳಿದುಕೊಂಡೆ. ಮರುದಿನ ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಹೋದಾಗ ಅಲ್ಲಿ ಕಂಡಿದ್ದರು ಯಂಡಮೂರಿ ಸರ್! ನಮಸ್ಕಾರ ವೀರೇನ್ ಜೀ ಎಂದೆ. ಓ ನೀನಾ ಯಾವಾಗ ಬಂದೆ ಎಲ್ಲಿದ್ದೆ ಎಂದರು. ವಿಪರ್ಯಾಸ ಏನೆಂದರೆ ಹಿಂದಿನ ರಾತ್ರಿ ನಾವಿಬ್ಬರೂ ಪಕ್ಕ ಪಕ್ಕದ ರೂಮಿನಲ್ಲಿ ಒಂಟಿಯಾಗಿದ್ದು ಬೋರ್ ಹೊಡೆಸಿಕೊಂಡಿದ್ದೆವು!
ಬಹಳ ದಿನಗಳ ನಂತರ ಅವರೊಂದಿಗೆ ಮಾತಾಡುತ್ತಾ ಕಾಲ ಕಳೆಯಬಹುದಿತ್ತೆಂಬ ವಿಷಯವೇ ನನಗೆ ದುಃಖ ತಂದಿತ್ತು. ಆದರೆ ಅವರೊಂದಿಗೆ ಕೆಲವು ತಿಂಗಳು ಕಳೆಯುವ ಸಮಯ ಸನ್ನಿಹಿತವಾಗಿದೆಯೆಂದು ನನಗೆ ಆ ಕ್ಷಣದಲ್ಲಿ ತಿಳಿದಿರಲಿಲ್ಲ!
ನಾನೂ ಶ್ರೀಕಾಕುಳಂಗೆ ಹೊರಟಿದ್ದೆ. ಅವರು ಬ್ಯುಸಿ ಇದ್ದರು. ಹೊಸ ಪುಸ್ತಕವನ್ನು ಅನುವಾದ ಮಾಡುವೆಯಾ ಎಂದರು. ನಾನು ಶ್ರೀಕಾಕುಳಂನಲ್ಲಿದ್ದಾಗ ಫೋನ್ ಮಾಡಿ ತೆಲುಗು ಟು ಕನ್ನಡ ಕಷ್ಟ ಇಲ್ವಾ ಎಂದು ಕೇಳಿದರು. ಇಂಗ್ಲಿಷ್ ಭಾಷೆಯ ಅನುವಾದ ಹೆಚ್ಚು ಕಡಿಮೆ ಮೂರು ಸಲ ಮಾಡಿ ಕನ್ನಡ ಭಾಷೆಗೆ ತರಬೇಕು. ತೆಲುಗು ಮತ್ತು ಕನ್ನಡ ವಾಕ್ಯ ರಚನೆ ಒಂದೇ ರೀತಿ ಇವೆ ಎಂದೆ.
ಅದು ನನಗೆ ಸಿಗಲಿಲ್ಲ ಅನ್ನೋದು ಬೇರೆ ವಿಷಯ. ವಿಜಯನಗರಂ ಭೇಟಿ ಮುಗಿಸಿ ಬರುವ ವೇಳೆಗೆ ಅವರು ಹೈದರಾಬಾದ್‌ಗೆ ಮರಳಿದ್ದರು. ನಾನು ಕಾಕಿನಾಡ ಹೋಗುವವನಿದ್ದೆ. ಸಾಮರ್ಲಕೋಟದಿಂದ ಕಾಕಿನಾಡಕ್ಕೆ ಹೋಗುವ ಹಾದಿಯಲ್ಲಿರುವ ಅವರ ಸರಸ್ವತಿ ವಿದ್ಯಾಪೀಠಂ ನೋಡಿ ಹೋಗೆಂದರು. ಸಾಮರ್ಲಕೋಟದಲ್ಲಿ ಇಳಿದು ಟ್ಯಾಕ್ಸಿ ಹಿಡಿದು ಕಾಕಿನಾಡಕ್ಕೆ ಹೋಗುವಾಗ ಸರಸ್ವತಿ ವಿದ್ಯಾಪೀಠಂ ಕಂಡಿತು. ಕೆಲವು ಫೋಟೋ ತೆಗೆದೆ. ಮಕ್ಕಳಿಗೆ ಒಂದು ದಿನದ ಜೀವನಪಾಠ ಕಲಿಸುತ್ತಾರೆ ಯಂಡಮೂರಿ. ಭವಿಷ್ಯದ ಜನಾಂಗದ ಬಗ್ಗೆ ಮಹಾ ಕಾಳಜಿ ಅವರಿಗೆ.
ಪ್ರತಿ ವರ್ಷ ಜನವರಿ, ಫೆಬ್ರವರಿ ತಿಂಗಳುಗಳಲ್ಲಿ ಶಾಲಾ ಕಾಲೇಜುಗಳಿಗೆ ಹೋಗಿ ಮಕ್ಕಳ ಪರೀಕ್ಷಾ ಭಯ ಹೋಗಲಾಡಿಸುವ ಪ್ರಯತ್ನ ಮಾಡುತ್ತಾರೆ. ಇತ್ತೀಚೆಗೆ ಯೂ ಟ್ಯೂಬ್‌ನಲ್ಲಿ ಹತ್ತು ಹನ್ನೆರಡು ನಿಮಿಷಗಳ ವೀಡಿಯೋಗಳನ್ನು ವಿದ್ಯಾರ್ಥಿಗಳಿಗಾಗಿ ಅಪ್‌ಲೋಡ್ ಮಾಡುತ್ತಿದ್ದಾರೆ.
ಅವರು ಮಕ್ಕಳಿಂದ 'ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ತೇನೆ' ಎಂದು ಸರಸ್ವತಿ ವಿಗ್ರಹದ ಎದುರಿಗೆ ಪ್ರಮಾಣ ಮಾಡಿಸಿ, ಈ ಪ್ರಮಾಣಭಂಗವಾದರೆ ಏನಾದೀತೋ ಎಂಬ ಭಯದಿಂದಲಾದರೂ ತಮ್ಮ ತಾಯ್ತಂದೆಯರನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳಲಿ ಎನ್ನುವ ಅಭಿಲಾಷೆ ಯಂಡಮೂರಿ ಅವರದು... ಫೇಸ್ ಬುಕ್‌ನಲ್ಲಿ ಅವರು ನನ್ನ ಮೊದಲ (ಮತ್ತು ಅಖೈರು) ತೆಲುಗು ಕಥೆಯನ್ನು ఆంధ్రజ్యోతి ವಾರಪತ್ರಿಕೆಯಲ್ಲಿ ಪ್ರಕಟಿಸಿದ್ದರ ಬಗ್ಗೆ ಬರೆದು ಅವರಿಗೆ ಕೃತಜ್ಞತೆಗಳನ್ನು ಅರ್ಪಿಸಿದೆ. ಆಗ ಟ್ಯಾಗ್ ಆಗುವುದೆಂಬ ಅರಿವು ನನಗೆ ಇರದ ಸಮಯ! ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಲ್ಲದೇ ಫೋನ್ ಮಾಡು ಎಂದು ಬರೆದಿದ್ದರು! ಏನಿರಬಹುದು ಎಂಬ ಕುತೂಹಲಭರಿತ ತವಕ ನನಗೆ... ಕಂಪಿಸುವ ಬೆರಳುಗಳಿಂದ ಡಯಲ್ ಮಾಡಿದೆ!
Comments
Post a Comment