ಯತಿ ಸ್ವಂತೀ -103
13-04-2018
1987ರ ಫೆಬ್ರವರಿಯಲ್ಲಿ ನನಗೆ ಮದುವೆಯಾಯಿತು. ಡಿಸೆಂಬರ್ 1986ಕ್ಕೆ ನಮಗೆ ಹೊಸ ಬಾಸ್ ಬಂದರು. ಅವರು ನನ್ನಿಂದ ಮಾಡಿಸಿದ ಕೆಲಸ ಏನು ಗೊತ್ತೇ?
ಬೆಳಗ್ಗೆ ಎಂಟಕ್ಕೆ ನನ್ನನ್ನು ಅವರ ಛೇಂಬರ್‍ಗೆ ಕರೆಸಿಕೊಳ್ಳುತ್ತಿದ್ದರು. ಆ ದಿನದ ಗ್ರಾಹಕರ ಪತ್ರಗಳು, ಇಂಟರ್‍ನಲ್ ಮೆಮೋಗಳು ಎಲ್ಲವನ್ನೂ ನಮ್ಮ ಆಫೀಸ್‍ಬಾಯ್ ತಂದು ಅವರ ಟೇಬಲ್ ಮೇಲಿಡುತ್ತಿದ್ದ. ನನಗೆ ಪ್ರತಿಯೊಂದು ಪತ್ರವನ್ನೂ ತೋರಿಸಿ ಇದು ಎಲ್ಲಿಗೆ ಹೋಗಬೇಕು? ಇದು ಯಾರಿಗೆ ಮಾರ್ಕ್ ಮಾಡಬೇಕು? ಹೀಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ನಾನು ಅಷ್ಟು ಹೊತ್ತಿಗೆ ಆ ಡಿಪಾರ್ಟ್‍ಮೆಂಟಿನಲ್ಲಿ ವೆಟೆರನ್. ಅಂದರೆ ನಾನು ಅಲ್ಲಿಗೆ ಮಾರ್ಚ್ 1983ರಲ್ಲಿ ಸೇರಿದ್ದೆ. ಸೋ, ನನಗೆ ಹೆಚ್ಚು ಕಡಿಮೆ ಎಲ್ಲ ವಿಷಯಗಳೂ ಗೊತ್ತಿದ್ದವು!
ಅವರು ನಮ್ಮ ಮೂರನೆಯ ಯೂನಿಟ್ಟಿನಿಂದ ಬಂದವರು. ಇಲ್ಲಿನ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಲು ನನ್ನನ್ನು ನೇಮಿಸಿಕೊಂಡರು! ಇದು ಇವರಿಗೆ ಹೋಗಬೇಕು, ಇದು ಅವರಿಗೆ ಹೋಗಬೇಕು... ಹೀಗೆ ಬಹಳ ಖುಷಿಯಿಂದ ಹೇಳುತ್ತಾ ಹೋದೆ.
ನಾನು ಬಂದ ಹೊಸತರಲ್ಲಿ ನಮ್ಮ ಇಬ್ಬರು ಬಾಸ್‍ಗಳು ತಮ್ಮ ಸೀಟ್‍ನಲ್ಲಿ ಕುಳಿತೇ ಸಿಗರೇಟ್ ಹೊಡೆಯುತ್ತಿದ್ದರು. ಆಮೇಲೆ ಸ್ವಲ್ಪ ದಿನಕ್ಕೆ ಯಾರೇನು ದೂರಿದರೋ ಎಲ್ಲರೂ ಕೆಳಗೆ ಟಾಯ್ಲೆಟ್‍ಗೆ ಬಂದು ಅಲ್ಲಿ ಒಟ್ಟಿಗೇ ಸೇದಿ ಹೊಗೆ ಬಿಡುತ್ತಿದ್ದರು.
ಈ ಹೊಸ ಬಾಸ್ ಸ್ವಲ್ಪ ಈ ವಿಷಯದಲ್ಲಿ ಸ್ಟ್ರಿಕ್ಟ್. ಈತ ತಾನು ಸಿಗರೇಟ್ ಸೇದುವುದು, ಗುಂಡು ಹಾಕುವುದು ಏನೂ ಇರಲಿಲ್ಲ. ಬಹಳ ಚಿಕ್ಕ ಕೆಲಸದಿಂದ ಮೇಲೆ ಬಂದಿದ್ದವರು. ಡಿಪ್ಲೊಮ ಓದಿ ಕೆಲಸಕ್ಕೆ ಸೇರಿ ಸಂಜೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ಎಂ.ಬಿ.ಎ. ಮಾಡಿ ಕೊನೆಗೆ ಡಾಕ್ಟರೇಟ್ ಪಡೆದಾತ.
ಆದರೆ ಮಹಾ ಮಾನ್ಯುಪ್ಯುಲೇಟರ್, ಮೆನುವರರ್. ಕ್ಷಮಿಸಿ, ಇವಕ್ಕೆ ಕನ್ನಡ ಪದಗಳು ನನ್ನಲ್ಲಿ ಇಲ್ಲ. ಏನು ಮಾಡಿದರೂ ಡಿಪಾರ್ಟ್‍ಮೆಂಟ್ ಹೊಳೆಯಬೇಕು, ಯಾರ ಎದುರಿಗೂ ತಲೆ ತಗ್ಗಿಸುವಂತಾಗಬಾರದು ಎನ್ನುವಂತಹ ಸ್ವಭಾವ.
ಸರಿ, ನಾನು ಅವರಿಗೆ ಎಲ್ಲವನ್ನೂ ವಿವರಿಸಿ ಹೇಳುತ್ತಿದ್ದೆ. ನನ್ನ ಮದುವೆಗೆ ಇನ್ನೂ ಒಂದು ತಿಂಗಳಿತ್ತು. ಬಹಳ ಚೆನ್ನಾಗಿ ನಡೆಸಿಕೊಂಡರು ನನ್ನನ್ನು.
ಒಂದು ದಿನ ಮೆಲ್ಲನೆ ‘ಇವರ ಸ್ವಭಾವ ಹೇಗೆ? ಅವರ ಸ್ವಭಾವ ಹೇಗೆ?’ ಎಂದು ಕೇಳಿದರು. ಒಂದು ಪರಸ್ಪರ ವರ್ಗಾವಣೆ ಇವರು ಬರುವ ಮೊದಲು ನಡೆದಿತ್ತು.
ಈಗ ಇವರು ನನ್ನನ್ನು ಹೊಗಳುತ್ತಿದ್ದಾರೆ. ನನ್ನ ಅಹವಾಲನ್ನು ಹೇಳಬೇಕು ಎಂದುಕೊಂಡೆ. ಈಗ ಪಕ್ಕದ ಡಿಪಾರ್ಟ್‍ಮೆಂಟಿನಿಂದ ಬಂದಾತ ನನ್ನನ್ನು ಆತನ ಕೆಲಸಕ್ಕೆ ಬಳಸಿಕೊಳ್ಳಲು ನೋಡಿದ. ‘ನಾನು 50 ಹಟ್ರ್ಜ್, 60 ಹಟ್ರ್ಜ್‍ನಲ್ಲಿ ಕೆಲಸ ಮಾಡಬಲ್ಲೆ. 25 ಹಟ್ರ್ಜ್‍ನಲ್ಲಿ ಕೂಡ ಕೆಲಸ ಮಾಡಲಾರೆ’ ಎಂದುಬಿಟ್ಟೆ. ಈಗಾಗಲೇ ನನಗೆ ಇಬ್ಬರು ಬಾಸ್‍ಗಳ ಕೆಲಸ ಹೇಳುತ್ತಿದ್ದರು. ಈ ಮೂರನೆಯವರು ಯಾರು ನನಗೆ ಕೆಲಸ ಹೇಳೋಕ್ಕೆ ಎನ್ನುವ ಘಮಂಡ್ ನನ್ನದು. ಕ್ಯಾಂಟೀನಿನಲ್ಲಿ ಎಲ್ಲರ ಎದುರಿಗೆ ಅವರಿಗೆ ಎದುರುತ್ತರ ಕೊಟ್ಟು ಅವಮಾನ ಮಾಡಿಬಿಟ್ಟೆ.
‘ನಿನಗೆ ಸರಿಯಾಗಿ ಮಾಡ್ತೀನಿ’ ಎಂದರು ಅವರು. ಈಗ ನನಗೆ ಹೊಸ ಬಾಸ್ ಎಲ್ಲರ ಸ್ವಭಾವ ಕೇಳಿದಾಗ, ‘ಇಂತಹವರು ಸರಿಯಿಲ್ಲ. ಅವರೇ ಬೆಸ್ಟು’ ಅಂದುಬಿಟ್ಟೆ. ಅಷ್ಟೇ, ಇವರು ಅಲ್ಲಿಗೆ ಹೋದರು. ಅವರು ಇಲ್ಲಿಗೆ ಬಂದರು.
ಅದು ಮತ್ತೊಂದು ಫಜೀತಿಗೆ ಮುಂದೆ ಕಾರಣವಾಗಿತ್ತು!
Comments
Post a Comment