ಯತಿ ಸ್ವಂತೀ -96
06-04-2018
ಮಸ್ಕತ್‍ನಲ್ಲಿ ಒಂದು ವರ್ಷವಿದ್ದು ಮರಳಿದೆ. ಸಿಕ್ಕಾಪಟ್ಟೆ ಬಿಸಿಲಲ್ಲಿ ನಡೆದು ಬೆಣ್ಣೆಯಂತೆ ಕರಗಿಹೋದೆ. 2002ರ ಮೇ ತಿಂಗಳಲ್ಲಿ 78 ಕೆ.ಜಿ. ಇದ್ದೆ. ಮನೆಯವರನ್ನು ಬಿಟ್ಟು ಹೋಗಬೇಕಲ್ಲ ಎನ್ನುವ ಕೊರಗು ನನ್ನ ತೂಕವನ್ನು 74ಕ್ಕೆ ಇಳಿಸಿತು. ಜೂನ್ 20ಕ್ಕೆ ನಾನು ಮಸ್ಕತ್‍ಗೆ ಹೊರಟಾಗ ನನ್ನ ತೂಕ ಅಷ್ಟಿತ್ತು. ಅಲ್ಲಿ ಒಂದು ವರ್ಷ ರಜೆ ಇರಲಿಲ್ಲ. ಜೂನ್ ಕೊನೆಯಲ್ಲಿ ಹೊರಟಾಗ ನನ್ನ ತೂಕ 64 ಕೆ.ಜಿ. ಆಗಿತ್ತು. ಮನೆಯವರನ್ನು ಬಿಟ್ಟು ಇತರರು ಯಾರೂ ನನ್ನನ್ನು ಗುರುತಿಸಲಿಲ್ಲ. ಎಲ್ಲ ಪ್ಯಾಂಟುಗಳೂ ದೊಗಳೆ ಆಗಿದ್ದವು!
ಬಂದೆ, ಮನೆಯವರ ನಡುವೆ ಇದ್ದೆ. ಅವರ ಪ್ರೀತಿ ಆದರಗಳು, ಆರೈಕೆಗಳಿಂದ ನನ್ನ ತೂಕ 70ಕ್ಕೆ ಏರಿತ್ತು.
ಈ ಸಲ ನಾನೇ ಅಡುಗೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿ ಕೆಲವು ವಸ್ತುಗಳನ್ನು ಇಲ್ಲಿಂದ ಸಾಗಿಸಿದೆ. ವಿಶೇಷವಾಗಿ ಸಾಂಬಾರ್ ಪುಡಿ, ಸಾರಿನ ಪುಡಿ, ವಾಂಗಿಭಾತ್ ಪುಡಿಗಳನ್ನು ಮಾಡಿಸಿಕೊಂಡು ತೆಗೆದುಕೊಂಡು ಹೊರಟೆ.
ಅಡುಗೆ ತರಬೇತಿಯನ್ನು ನನ್ನ ಶ್ರೀಮತಿ ಮತ್ತು ಅಮ್ಮ ಇಬ್ಬರೂ ಕೊಟ್ಟರು!
ಸರಿ, ಶುರುವಾಯಿತು ನನ್ನ ನಳಪಾಕ! ಅಥವಾ ಭೀಮಪಾಕ!!
ಅನ್ನವನ್ನು ಪ್ರೆಷರ್ ಕುಕ್ಕರ್‍ನಲ್ಲಿ ಮಾಡತೊಡಗಿದೆ. ರೂಮಿನಲ್ಲಿ ಪುಟ್ಟ ಟಿವಿಯೊಂದನ್ನು ಇಟ್ಟುಕೊಂಡಿದ್ದೆ. ಅದನ್ನು ನೋಡುತ್ತಾ ತರಕಾರಿ ಹೆಚ್ಚುವುದು ಮಾಡುತ್ತಿದ್ದೆ. ನನ್ನ ಟಿವಿ ಶಬ್ದದ ನಡುವೆಯೂ ಕುಕ್ಕರ್ ಮೂರು ಸಲ ಕೂಗೋದನ್ನ ಕೇಳಿಸಿಕೊಳ್ಳಬೇಕಿತ್ತು.
ಸಾಂಬಾರು ಅಥವಾ ಕೊಳಂಬು (ನಮ್ಮ ಅಯ್ಯಂಗಾರ್ ಭಾಷೆಯಲ್ಲಿ!) ಮಾಡುವ ವಿಧಾನ ಚೆನ್ನಾಗಿತ್ತು. ಬೆಂದ ಬೇಳೆಯನ್ನು ನೀರಿಗೆ ಹಾಕಿ, ಖಾರಾ ಪುಡಿ, ಉಪ್ಪು, ಅರಿಶಿಣ ಹಾಕಿ ಅದು ಕುದ್ದ ಮೇಲೆ ಬೆಂದ ತರಕಾರಿ ಹಾಕಿ, ಕೊನೆಗೆ ಹುಣಿಸೇಹಣ್ಣು ಕಿವಿಚಿ ಅದರ ರಸ ಹಾಕಿ ಒಂದು ಕುದಿ ಕುದ್ದ ಮೇಲೆ ಕೊಳಂಬು ರೆಡಿ. ದಿನವೂ ಯಾವುದೇ ತರಕಾರಿ ಇರಲಿ, ಜೊತೆಗೆ ಒಂದು ಹಿಡಿ ಕಡಲೇಕಾಯಿ ಬೀಜವೂ ಕೊಳಂಬಿಗೆ ಹಾಕುತ್ತಿದ್ದೆ.
ನಾನು ಬೆಳಗ್ಗೆ ಹೊತ್ತು ಅಡುಗೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೇ ರಾತ್ರಿ ಎಂಟಕ್ಕೆ ಆಫೀಸಿನಿಂದ ಹೊರಟು ಮನೆಗೆ ಬಂದ ಮೇಲೆ ಅಡುಗೆ ಶುರು. ಬೆಳಗ್ಗೆ ಹೊತ್ತು ಅಲ್ಲಿನ ಗುಜರಾತಿ ಸ್ಟೋರ್‍ನಿಂದ ತೇಪ್ಲಾ ಎನ್ನುವ ಚಪಾತಿಯ ಕಸಿನ್ ಕೊಂಡು ತಂದು ತಿನ್ನುತ್ತಿದ್ದೆ. ಅರಿಶಿಣ, ನಿಂಬೆ, ಶುಂಠಿ, ಜೀರಿಗೆ ಹಾಕಿದ ಅತ್ಯಂತ ತೆಳ್ಳಗಿನ (ಈರುಳ್ಳಿ ಸಿಪ್ಪೆಯಷ್ಟು) ತೇಪ್ಲಾವನ್ನು ಖಾಲಿ ತವಾ ಮೇಲೆ ಬಿಸಿ ಮಾಡಿ ಗಬಗಬನೆ ತಿಂದು ಆಫೀಸಿಗೆ ರೆಡಿ ಆಗುತ್ತಿದ್ದೆ.
ಕೆಲವೊಮ್ಮೆ ಸಾಂಬಾರು ಪುಡಿ, ಮತ್ತೆ ಕೆಲವು ಸಲ ವಾಂಗಿಭಾತ್ ಪುಡಿಯನ್ನೇ ಕೊಳಂಬ್‍ಗೆ ಹಾಕುತ್ತಿದ್ದೆ. ಕ್ಯಾಪ್ಸಿಕಂ, ಆಲೂ, ಬದನೇಕಾಯಿ ಇತ್ಯಾದಿಗಳ ಪಲ್ಯವನ್ನೂ ಮಾಡಿಕೊಳ್ಳುತ್ತಿದ್ದೆ. ಕ್ಯಾಪ್ಸಿಕಂ ಫ್ರೈ ಮಾಡಿದಾಗ ಸುತ್ತ ಮುತ್ತಲ ರೂಮಿನ ನನ್ನ ಸಹೋದ್ಯೋಗಿಗಳು ಆಹಾ... ಘಂ ಎನ್ನುತ್ತಿದೆ ಎನ್ನುತ್ತಿದ್ದರು.
ಕೆಲವು ದಿನಗಳ ನಂತರ ತೇಪ್ಲಾ ಬೋರ್ ಆಯಿತು. ಆಗ ಬ್ರೆಡ್ ತಿನ್ನಲಾರಂಭಿಸಿದೆ. ಟೋಸ್ಟರ್ ಒಂದನ್ನು ಕೊಂಡು ತಂದೆ.
Comments
Post a Comment