ಯತಿ ಸ್ವಂತೀ -107
17-04-2018
ಟ್ಯಾಲಿ ಸೇರಿ ಒಂದು ವರ್ಷದೊಳಗೆ ರೀಜಿನಲ್ ಆಫೀಸಿಗೆ ರಹೇಜ ಆರ್ಕೇಡ್‍ಗೆ ವರ್ಗವಾಗಿದ್ದೆ. ಇಲ್ಲಿ ಸ್ವಲ್ಪ ದಿನ ನನ್ನ ಪಾತ್ರವೇನೆಂದೇ ತಿಳಿದಿರಲಿಲ್ಲ. ಹಾಯಾಗಿ ಆಫೀಸಿನಲ್ಲಿ ಎಲ್ಲ ಕಾಗದಪತ್ರಗಳನ್ನು ನೋಡುತ್ತಾ, ಟ್ಯಾಲಿ ಉತ್ಪನ್ನದ ಬಗ್ಗೆ ಸ್ಟಡೀ ಮಾಡುತ್ತಾ ಕಾಲ ಕಳೆದೆ. ರತ್ನಗಳಂತಹ ಸಹೋದ್ಯೋಗಿಗಳು. ನನ್ನ ವಯಸ್ಸು ನಲವತ್ತೊಂಬತ್ತು ಆಗಿದ್ದರೂ ಮೂವತ್ತರ ಹರೆಯದ ಅವರೆಲ್ಲರ ಜೊತೆಗೆ ಸೇರಿಸಿಕೊಳ್ಳುತ್ತಿದ್ದರು.
ಶುಕ್ರವಾರ ಮಧ್ಯಾಹ್ನ ಒಂದು ತಮಿಳುನಾಡು ಹೊಟೇಲಿನಲ್ಲಿ ಬಾಳೆ ಎಲೆ ವೆಜ್ ಊಟ. ಅನ್‍ಲಿಮಿಟೆಡ್ ಫುಡ್. ಅದನ್ನು ತಿನ್ನಲು ಅವರೊಂದಿಗೆ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಇಲ್ಲದಿದ್ದರೆ ಸ್ವಲ್ಪ ಹೆಚ್ಚು ದೂರದಲ್ಲಿದ್ದ ವೆಜ್ ಪಂಜಾಬಿ ಧಾಭಾಕ್ಕೆ ಹೋಗುತ್ತಿದ್ದರು. ಎಲ್ಲೆಡೆ ನನ್ನನ್ನು ಕರೆದೊಯ್ಯುತ್ತಿದ್ದರು.
ಕೊನೆಗೂ ಒಬ್ಬ ಪಾರ್ಟ್‍ನರ್ ಜೊತೆ ಕೆಲಸ ಮಾಡಲು ಹೇಳಿದರು. ಇಂದಿರಾನಗರದ ಆಚೆ ದಿನವೂ ಹೋಗುತ್ತಿದ್ದೆ. ಅವರ ಬಳಿ ಲೀಡ್‍ಗಳನ್ನು ಪಡೆದು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿನ ಕಸ್ಟಮರುಗಳಿಗೆ ಟ್ಯಾಲಿ ಮಾರಲು ಯತ್ನಿಸುತ್ತಿದ್ದೆ.
ಆಮೇಲೆ ನಾನು ಮತ್ತೊಬ್ಬ ಪಾರ್ಟ್‍ನರ್ ಬಳಿ ಹೋದೆ. ತಿಪ್ಪಸಂದ್ರದಲ್ಲಿ ಆಫೀಸ್. ಕೋರಮಂಗಲದ ನಮ್ಮಾಫೀಸಿನಿಂದ ತಿಪ್ಪಸಂದ್ರ.
ಆ ಸಮಯದಲ್ಲಿ ಮನೆಯ ಮುಂದೆ ಇದ್ದ ನೀರಿನಲ್ಲಿ ಜಾರಿ ಬಿದ್ದೆ. ಎಡಪಾದ ಭಯಾನಕ ನೋವು. ಈಗಾಗಲೇ ಲಿಗಮೆಂಟ್ ಟೇರ್ ಆಗಿದ್ದ ಪಾದವದು. ಮನೆಯ ಬಳಿ ಇದ್ದ ಆರ್ಥೋಪೆಡಿಕ್ ವೈದ್ಯ ‘ಫ್ರಾಕ್ಚರ್ ಆಗಿದೆ. ಈ ತೈಲ ಹಚ್ಚಿಕೋ’ ಎಂದು ನೀಡಿದ್ದರು.
ನನಗೆ ಷೂ ಧರಿಸಲು ಆಗುತ್ತಿರಲಿಲ್ಲ. ಸಾಕ್ಸ್ ಧರಿಸಿ ಬಕಲ್ ಷೂ ಧರಿಸುತ್ತಿದ್ದೆ. ಕುಂಟುತ್ತಾ ನಡೆಯುತ್ತಿದ್ದೆ.
ಒಂದು ದಿನ ಪಾರ್ಟ್‍ನರ್ ಆಫೀಸ್ ಬಾಸ್ ನನ್ನ ಕಾಲಿಗೇನಾಗಿದೆ ಎಂದರು. ಹೇಳಿದೆ. ಅಂದು ಬುಧವಾರ. ನಾಳೆ ಸಂಜೆ ನಿನ್ನನ್ನು ಎಲ್ಲೋ ಒಂದೆಡೆ ಕರೆದೊಯ್ಯುತ್ತೇನೆಂದರು.
ಗುರುವಾರ ಏನಪ್ಪಾ ಸ್ಪೆಷಲ್ಲು ಎಂದುಕೊಂಡೆ. ತಿಪ್ಪಸಂದ್ರದಿಂದ ಆತನೊಂದಿಗೆ ಬೈಕ್‍ನಲ್ಲಿ ಹೋದೆ. ಲಿಂಗರಾಜಪುರ ಸ್ಟೇಷನ್ ನೋಡಿದ್ದೆ ಹಿಂದೆ. ಅದನ್ನೂ ದಾಟಿ ಬೈಕ್ ಹೋಯಿತು ಹೋಯಿತು ಹೋಯಿತು.
ಕೊನೆಗೆ ಒಂದು ಮನೆಗೆ ಕರೆತಂದು ಅಲ್ಲಿದ್ದ ವೃದ್ಧರನ್ನು ನನ್ನ ತಂದೆ ಎಂದರು. ಇಲ್ಲಿಗೇಕೆ ಕರೆತಂದರೆಂದು ಅಚ್ಚರಿ ಪಡುವ ವೇಳೆಗೆ ಅಲ್ಲಿ ಕಾಫಿ ಕುಡಿದು ಅವರ ಮನೆಯಿಂದ ಎರಡನೆಯ ಮನೆಗೆ ಹೋದೆವು.
ಅಲ್ಲಿ ಸಾಲಾಗಿ ಜನ ಕೂತಿದ್ದರು. ಓ ಇದ್ಯಾವುದೋ ಕ್ಲಿನಿಕ್ ಎಂದು ಬಗೆದೆ. ಆಮೇಲೆ ತಿಳಿಯಿತು ಅಲ್ಲಿ ಬಂದಿದ್ದವರು ಭಟ್ರಳ್ಳಿಯವರೆಂದು. ಒಂದಿಷ್ಟು ಸಂಗತಿ ಅವರ ಬಗ್ಗೆ ಕೇಳಿದ್ದೆ. ಸ್ವಲ್ಪವೇ ಕಂಪನ ಉಂಟಾಯಿತು. ಇದು ರಣವೈದ್ಯ ಎಂಬ ನಂಬಿಕೆ ನನಗೆ ಇತರರಿಂದ ಕೇಳಿದಾಗ ಉಂಟಾಗಿತ್ತು. ಈಗ ನನಗೇ ಆ ಶಿಕ್ಷೆ!
ನನ್ನ ಸರದಿ ಬಂದಿತು. ಆತ ಕೆಳಗೆ ಕುಳಿತಿದ್ದ. ನನ್ನನ್ನೂ ಕೆಳಗೆ ಕೂರೆಂದ. ಕಾಲನ್ನು ತನ್ನ ಕೈಗೆತ್ತಿಕೊಂಡು ಪಾದವನ್ನು ಕಿವಿಗಿಟ್ಟುಕೊಂಡ. ನಂತರ ನಾನು ಏನು ಮಾಡುವನೋ ಎಂದುಕೊಳ್ಳುವಷ್ಟರಲ್ಲಿ ಪಟಕ್ಕನೆ ನನ್ನ ಪಾದವನ್ನು ತಿರುಚಿದ. ನನಗೆ ಲಬೋ ಲಬೋ ಎನ್ನುವಂತೆ ನೋವಾಯಿತು.
Comments
Post a Comment