ಯತಿ ಸ್ವಂತೀ -287


16-10-2018
ಅಂದು ಸುಮೈಲ್‌ಗೆ ಹೋಗಿ ಮರಳುತ್ತಿದ್ದೆ. ಸುಮಾರು 180 ಕಿಮೀ ದೂರ ಕಾರು ಓಡಿಸಿ ಆಗಿತ್ತು. ಇಜ್ಕಿಯಲ್ಲಿ  ಡೆಲಿವರಿ ಕೊಡಬೇಕಿತ್ತು. ಗಾಡಿಯನ್ನು ಬಲಗಡೆಗೆ ತಿರುಗಿಸಿದೆ. ಒಂದು ಚಿಕ್ಕ ಡೀವಿಯೇಶನ್. ಕಸ್ಟಮರ್ ನೋಡಿ ವಾಪಸ್ ಹೊರಟೆ. ಅಲ್ಲಿ ಎಡಗಡೆಗೆ ಒಂದು ರಸ್ತೆ ಇದೆ. ಆದರೆ ಅದು ಸಿಂಗಲ್ ಟ್ರ್ಯಾಕ್. ಬಹಳ ಅಪಘಾತಗಳಾಗುವುದರಿಂದ ಆ ಕಡೆ ಹೋಗಬೇಡ ಎಂದು ನನಗೆ ಹೇಳಿದ್ದರು ಪೈ ಮಾಮ್. ಸಿಂಗಲ್ ಟ್ರ್ಯಾಕ್‍ನಲ್ಲಿ ವಾಹನಗಳು ನಮ್ಮ ರಸ್ತೆಗೆ  ಬಂದು ವೇಗವಾಗಿ ಹೋಗಿ ಅವರ ಕಡೆಯ ವಾಹನಗಳನ್ನು ದಾಟಿ ಅವರ ರಸ್ತೆಗೆ ಮರಳಿ ಮುಂದೆ ವೇಗವಾಗಿ ಹೋಗುತ್ತವೆ. ವಿರುದ್ಧ ದಿಕ್ಕಿನಲ್ಲಿ ಗಾಡಿ ನಡೆಸುವ ನಮ್ಮ ಹೃದಯ ನಮ್ಮ ಬಾಯಿಗೆ ಬರುತ್ತದೆ. ಅದಕ್ಕೇ ಬಂದ ದಾರಿಯಲ್ಲಿ ವಾಪಸ್ ಹೋಗಿ ಮತ್ತೆ ಬಲಕ್ಕೆ ತಿರುಗಿದರೆ ನಿಜ್ವಾ ಕಡೆಗೆ ಡಬಲ್ ರೋಡ್ ಇದೆ. ಸರಿ, ಬಲಕ್ಕೆ ತಿರುಗಲು ಸನ್ನದ್ಧನಾಗುತ್ತಿದ್ದಂತೆ ಟ್ಯಾಕ್ಸಿಯೊಂದು ಇದ್ದಕ್ಕಿದ್ದಂತೆ ನನ್ನ ಕಡೆಗೆ ತಿರುಗಿತು. ನನ್ನ ಬುದ್ಧಿಗೆ ಕ್ಷಣಕಾಲ ಮಂಕು ಕವಿಯಿತು. ಅಬ್ಬಾ ಈ ಊರಲ್ಲಿ ಕೂಡ ಟ್ಯಾಕ್ಸಿಗಳು ನಮ್ಮೂರ ಆಟೋಗಳಂತೆ ಟಕ್ಕನೆ ತಿರುಗುತ್ತವಲ್ಲಾ ಎಂದುಕೊಳ್ಳುತ್ತಾ ಬಲಕ್ಕೆ ತಿರುಗಿಸಿದೆ. ರೇರ್ ವ್ಯೂ ಮಿರರ್‍ನಲ್ಲಿ ಒಂದು ದೊಡ್ಡ ಬಸ್  ವೇಗವಾಗಿ ಬರುವುದು ಕಂಡಿತು. ಬಸ್‍ನ ಹೆಡ್ ಲೈಟ್ ಆನ್ ಆಯಿತು. ನಮ್ಮ ಊರಲ್ಲಿ ಲೈಟ್ ಡಿಪ್ ಡಿಮ್ ಮಾಡಿದರೆ ನಾನು ಹೋಗುವೆ ಎಂದರ್ಥ. ಆ ಊರಲ್ಲಿ ನೀನು ಹೋಗೆಂದು ಅರ್ಥ. ತಪ್ಪಾಗಿ ದೀಪ ಓದಿದ ನಾನು ಬಲಕ್ಕೆ ತಿರುಗಿದೆ. ಅದೇ ನಾನು ಮಾಡಿದ ತಪ್ಪು! ಬಸ್ ವೇಗವಾಗಿ ನನ್ನ ಕಾರಿಗೆ ಬಹಳ ಹತ್ತಿರ ಬಂದಿತ್ತು. ನನ್ನ ಕಾರನ್ನು ದಾಟಿಕೊಂಡು ಮುಂದೆ ಹೋಗುತ್ತಿದ್ದಂತೆ ಬಸ್ಸಿನ ಹಿಂಭಾಗ ನನ್ನ ಕಡೆಯ ಕನ್ನಡಿಯನ್ನು ಠಕ್ ಎಂದು ಒಡೆಯಿತು. ನನ್ನ ಹಾರ್ಟ್ ಒನ್ ಸೆಕೆಂಡ್ ಸ್ಟಾಪ್ ಆಯಿತು. ಬಸ್ ನಿಂತಿತು. ನನ್ನನ್ನು ನಿಲ್ಲಿಸೆಂದು ಸನ್ನೆ ಮಾಡಿದ ಬಸ್ ಡ್ರೈವರ್. ಕಂಪಿಸುವ ಕಾಲುಗಳೊಂದಿಗೆ ಇಳಿದೆ. ಆಹಾ.. ಡ್ರೈವರ್ ಪಾಕಿಸ್ತಾನಿ. ನನ್ನ ಹಾಗೆ ಎಕ್ಸ್ ಪ್ಯಾಟ್. ಈಗ ನಿರಾಳವಾಗಿ ಆತನನ್ನು ಸಮೀಪಿಸಿದೆ. 'ನನಗೆ ಹೋಗಲು ಲೈಟ್ ಹಾಕಿದೆ ನೀನು' ಎಂದೆ. ಪಾಪ ಅವನು ಕತ್ತಲೆ ಆಯಿತೆಂದು ಲೈಟು ಹಾಕಿದ್ದ. ನಾನೇ ತಪ್ಪಾಗಿ ಓದಿದ್ದೆ. ಆತನಿಗೆ ಕೂಡ ನನಗೆ ಜೀವಾಪಾಯ ಆಗದಿದ್ದುದು ನೆಮ್ಮದಿ ತಂದಿದ್ದಿರಬೇಕು. 'ಪಾಗಲ್ ಆದ್ಮಿ' ಎಂದು ಗೊಣಗಿದ ಎನಿಸುತ್ತದೆ! ನನ್ನ ಕಾರಿನ ಕನ್ನಡಿ... ಪಾಪ... ಜೋತಾಡುತ್ತಿತ್ತು. ನಂತರ ಹೆಡ್ಡಾಫೀಸ್ ಅನುಮತಿ ಪಡೆದು ಕನ್ನಡಿ ಬದಲಾಯಿಸಿದೆ. ನನ್ನ ನಿಜ್ವಾ ವಾಸ ಕೊನೆಗೆ ಬಂದಿತ್ತು. ಜೊತೆಗೆ ನನ್ನ ಒಮಾನ್ ಜೀವನ ಕೂಡ...

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102