ಯತಿ ಸ್ವಂತೀ -281


10-10-2018
ಕಾರು ಓಡಿಸುತ್ತಿದ್ದ ಹೊಸತರಲ್ಲಿ ಕೆಲವು ಟೆನ್ಶನ್ ಆಗಿರುವುದುಂಟು. ಒಮ್ಮೆ ಓನೆಕ್ ಅನ್ನೋ ಕಂಪೆನಿಗೆ ಹೋಗಿ ಅದರ ಎದುರಿಗೆ ಫುಟ್‌ಪಾತ್‍ನಲ್ಲಿ ಕಾರು ಪಾರ್ಕಿಂಗ್ ಮಾಡಿ ಒಳಗೆ ಹೋಗಿ ಮರಳಿ ಕಾರಿನ ಬಳಿ ಬಂದಾಗ ಎದೆ ಧಸಕ್ಕೆಂದಿತು. ಯಾರೋ ಪುಣ್ಯಾತ್ಮ ನನ್ನ ಕಾರಿಗೆ ಅದೆಷ್ಟು ಹತ್ತಿರವಾಗಿ ಅವನ ಕಾರು ನಿಲ್ಲಿಸಿ ಹೋಗಿದ್ದನೆಂದರೆ ನನಗೆ ನನ್ನ ಕಾರನ್ನು ಪಕ್ಕದ ಕಾರಿಗೆ ಡ್ಯಾಮೇಜ್ ಮಾಡದೇ ತೆಗೆಯಲಾಗುತ್ತಿರಲಿಲ್ಲ. ಏನು ಮಾಡುವುದು ಎಂದು ಆಲೋಚಿಸುತ್ತಾ ಇದ್ದಾಗ ಅಲ್ಲಿ ಮೂವರು ಭಾರತೀಯ ವೃದ್ಧರು ವಾಕಿಂಗ್ ಹೋಗುತ್ತಿದ್ದರು. ಅವರಲ್ಲಿ ವಿನಂತಿ ಮಾಡಿದೆ. ಒಬ್ಬಾತ ಕಾರನ್ನು ನಾಜೂಕಾಗಿ ತೆಗೆದು ಕೊಟ್ಟರು. ಇನ್ನೂ ಒಂದು ಸಲ ನನ್ನ ಕಾರಿನ ಬಾಗಿಲು ತೆರೆದು ಒಳ ಹೋಗಲು ಎಷ್ಟು ಕಷ್ಟ ಆಯಿತೆಂದರೆ ಸ್ವಲ್ಪ ನಡೆದರೂ ಓಕೆ ಎಂದು ಅನತಿ ದೂರದ ಪಾರ್ಕಿಂಗ್ ಬಳಸುತ್ತಿದ್ದೆ. ಸಹೋದ್ಯೋಗಿಗಳ ಲ್ಯಾನ್ಸರ್, ಎಕ್ಕೊ ಕಾರುಗಳನ್ನು ಒಮ್ಮೊಮ್ಮೆ ಓಡಿಸಿದ್ದೆ. ಆದರೂ ನನ್ನ ಕಾರು ನನ್ನ ಕಾರೇ. ಹಿಂದೆ ಮಾಜ್ದಾ 6 ಇದ್ದಾಗ ಅದರ ಟೈರ್ ಪಂಕ್ಚರ್ ಆದಾಗ ನಮ್ಮ ಆಫೀಸ್ ಬಾಯ್‍ನ ಕರೆದರೆ ಅವ ಬೇರೇನೋ ಕೆಲಸವಿತ್ತೆಂದು ಬರಲಿಲ್ಲ. ಬೆಂಗಳೂರಲ್ಲಿ ಎಂದೂ ಮಾಡದ ಕೆಲಸ - ಟೈರ್ ಬದಲಾವಣೆ... ಅಲ್ಲಿ ಒಬ್ಬನೇ ಬದಲಾಯಿಸಿದ್ದೆ! ಕೆಲವು ಸಹೋದ್ಯೋಗಿಗಳ ಜೊತೆ ಸ್ನೇಹ ಏರ್ಪಟ್ಟಿತು. ನಮ್ಮ ಹಣಕಾಸು ಅಧಿಕಾರಿ ಇಲ್ಲಿ ನಮ್ಮ ಮನೆಗೆ ಬಂದಿದ್ದರು. ನಾನು ಬೆಂಗಳೂರಿನಲ್ಲಿ ನನ್ನ ಮುಂದಿನ ಉದ್ಯೋಗ ಮಾಡುತ್ತಿದ್ದಾಗ ಒಮ್ಮೆ ವಿಜಯವಾಡದಿಂದ ಚೆನ್ನೈನ ಅವರ ಮನೆಗೆ ಹೋಗಿ ಹರಟಿ, ಉಂಡು ನಂತರ ಅವರಿಂದ ಚೆನ್ನೈ ಸೆಂಟ್ರಲ್‌ಗೆ ಡ್ರಾಪ್ ತೆಗೆದುಕೊಂಡು ತ್ರಿಶೂರಿಗೆ ರೈಲು ಹತ್ತಿದ್ದೆ. ಅವರೀಗ ಮತ್ತೆ ಮಸ್ಕತ್‌ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ನನ್ನ ಸಹೋದ್ಯೋಗಿಗಳ ಜೊತೆ ಕಾರುಗಳಲ್ಲಿ ಸುತ್ತಾಡಿರುವುದೂ ಉಂಟು. ನಮ್ಮ ಪಿ ಆರ್ ಓ ಅಸಿಸ್ಟೆಂಟ್ ಖಾಲಿದ್ ಎಂಬ ಒಬ್ಬ ಒಮಾನಿ ಇದ್ದ. ಅವನ ಪಕ್ಕದಲ್ಲಿ ಕೂತರೆ ಆ ಹುಡುಗ ಹೋಗುತ್ತಿದ್ದ ಒರಟು ವೇಗಕ್ಕೆ ನನ್ನ ಕಾಲು ನಾನು ಕೂತ ಪ್ಯಾಸೆಂಜರ್ ಸೀಟಿನಡಿಯಲ್ಲಿ ಇಲ್ಲದ ಬ್ರೇಕ್ ನುಡಿದರು ಪ್ರತಿ ಬಾರಿ ಒತ್ತುತ್ತಿದ್ದುದು ಆ ಹುಡುಗನಿಗೆ ನಗೆ ಬರಿಸುತ್ತಿತ್ತು. 
ಪೂರ್ವ ಮತ್ತು ಪಶ್ಚಿಮ ಪ್ರಪಂಚದ ಅತ್ಯುತ್ತಮ ವಸ್ತುಗಳು ಒಮಾನ್ ದೇಶದಲ್ಲಿ ಸಿಗುತ್ತಿದ್ದವು. ಯಾವುದೇ ದೇಶದ ಜನರಿಗೂ, ಅವರು ಕಾನೂನು ಮುರಿಯದಿದ್ದಲ್ಲಿ ಸುರಕ್ಷಿತ ಮತ್ತು ಹಣ ಸಂಪಾದನೆಯ ದೇಶ ಸಲ್ತನತ್ ಆಫ್ ಒಮಾನ್.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102