ಯತಿ ಸ್ವಂತೀ -289
17-10-2018
ನಾನು ಈಗ ಓಡಿಸುತ್ತಿದ್ದ ಕಾರಿನ ಮೊದಲ ಡ್ರೈವರ್ ನನ್ನ ಮಾಜಿ ಸಹೋದ್ಯೋಗಿ ಮಿ. ಜೋಶಿಯೊಂದಿಗೆ ನನ್ನ ಸಂಪರ್ಕ ಇತ್ತು. ಆತ ಒಂದು ಕೇಬಲ್ ಕಂಪೆನಿಯಲ್ಲಿ ಕೆಲಸದಲ್ಲಿದ್ದ. ನಾನು ರಾಜೀನಾಮೆ ಇತ್ತೆನೆಂದು ಅರಿತೊಡನೆ ಆತನ ಕಂಪೆನಿಯ ಬಾಸ್ ಮಸ್ಕತ್‌ಗೆ ಬಂದಾಗ(ಸೌದಿಯಲ್ಲಿನ ಒಂದು ಕಂಪೆನಿ ಅದು) ಬಳಿ ನನ್ನ ಇಂಟರ್ವ್ಯೂ ಅರೇಂಜ್ ಮಾಡಿದ. ಮಾತುಕತೆ ಆಯ್ತು. ನನಗೆ ದುಬೈಯಲ್ಲಿ ಉದ್ಯೋಗ ಆಫರ್ ಮಾಡಿದರು. ಅಂದರೆ ಪಕ್ಕದ ದೇಶ... ಜೋಶಿಗೆ ಕೃತಜ್ಞತೆಗಳನ್ನು ತಿಳಿಸಿದೆ. ಅಂದರೆ ನಾನು ನಿರುದ್ಯೋಗಿಯಾಗದೇ ಈ ದೇಶ ಬಿಡಲಿದ್ದೆ. ಇನ್ನೇನು ಹದಿನೈದು ದಿನಗಳ ನಂತರ ಹೊರಡಲು ನನ್ನ ಶಾಶ್ವತ ರಿಟರ್ನ್ ಟಿಕೆಟ್ ಸಿದ್ಧವಾದಾಗ ನನ್ನ ಇಮ್ಮೀಡಿಯೇಟ್ ಬಾಸ್ ಸತೀಶ್ ಬೇರೆ ಎಲ್ಲಿಂದಲೋ ಫೋನ್ ಮಾಡಿ ಸೂರ್‌ಗೆ ಹೋಗಲು ಹೇಳಿದರು. ಸೂರ್ ಸುಮಾರು ನಾಲ್ಕು ನೂರು ಕಿಮೀ ದೂರ. ಬೇರೊಂದು ಕಂಪೆನಿಯ ಕಾರಿನಲ್ಲಿ ಹೊರಟೆ. ಸಮುದ್ರ ತೀರದಲ್ಲಿ ಒಂದು ಹೆಲಿಕಾಪ್ಟರ್ ಸಿದ್ಧವಾಗಿ ನಿಂತಿತ್ತು. ಅದನ್ನು ಹತ್ತಬೇಕೆಂದಾಗ ಥ್ರಿಲ್ಲೋ ಥ್ರಿಲ್ಲು! ಮೊದಲನೇ ಸಲ! ಸಮುದ್ರದ ಮೇಲಿನಿಂದ ಅದು ಹಾರಿದಾಗ ನನ್ನ ಬೆನ್‌ಕ್ಯು ಕ್ಯಾಮೆರಾದಿಂದ ಆ ಚಲನೆಯನ್ನು ಸೆರೆ ಹಿಡಿದೆ. ನಂತರ ಹೆಲಿಕಾಪ್ಟರ್ ಬೆಟ್ಟವೊಂದರ ಮೇಲೆ ನಿಂತಿತು. ಇಳಿಜಾರಿನಲ್ಲಿ ನಡೆದು ಮೊಬೈಲ್ ಟವರ್ ಹಾಕಲು ಸಿದ್ಧ ಪಡಿಸಿದ್ದ ಸೈಟ್ ನೋಡಿಕೊಂಡು ಮತ್ತೆ ಹೆಲಿಕಾಪ್ಟರ್ ಹತ್ತಿ ಮೊದಲು ಹತ್ತಿದ ಜಾಗದಲ್ಲಿ ಇಳಿದೆವು. ನಂತರ ಕಾರಿನಲ್ಲಿ ಸುಮಾರು ನೂರು ಕಿಮೀ ಪ್ರಯಾಣ ಮಾಡಿ ಎಡಗಡೆಗೆ ತಿರುಗಿ ಪ್ರಯಾಣ ಮುಂದುವರಿಸಿದೆವು. ಅದೊಂದು ರೋಲರ್‌ಕೋಸ್ಟರ್ ಪ್ರಯಾಣ. ರಸ್ತೆಯಲ್ಲಿ ಆ ಮಟ್ಟದ ಏರುತಗ್ಗುಗಳನ್ನು ಹಿಂದೆ ನೋಡಿರಲಿಲ್ಲ. ಆಮೇಲೆ ನೋಡಿಲ್ಲ ಕೂಡ. ಎದೆಯ ಬಳಿ ಕ್ಯಾಮೆರಾ ಇಟ್ಟುಕೊಂಡು ವೀಡಿಯೋ ತೆಗೆದೆ. ಅಲ್ಲಿ ಒಂದು ಮೊಬೈಲ್ ಟವರ್ ಹಾಕುವ ಸೈಟ್ ನೋಡಿ ಬಂದೆವು. ಮತ್ತೆ ಮುಖ್ಯ ರಸ್ತೆ ತಲುಪಿ ಮಸ್ಕತ್ ಕಡೆಗೆ ಹೋಗಲು ಎಡಗಡೆ ತಿರುಗಿದೆವು. ಆಗ ತಾನೇ ತಿರುಗಿದ್ದರಿಂದ ಕಾರಿನ ವೇಗ ಹೆಚ್ಚಿರಲಿಲ್ಲ. ಎಂಬತ್ತು ಇದ್ದೀತು. ಆಗ ಇದ್ದಕ್ಕಿದ್ದಂತೆ ಒಂದು ದೊಡ್ಡ ಕಂದು ವಸ್ತು ನಮ್ಮ ಕಾರಿನೆದುರು ಧುತ್ತೆಂದು ಕಾಣಿಸಿಕೊಂಡಿತು. ಢಾಮ್ ಎನ್ನುವ ಭಯಾನಕ ಶಬ್ದ ಆಗಿತ್ತು. ಕಣ್ಣುಗಳ ಮುಂದೆ ಕತ್ತಲೆ ಕವಿಯಿತು.
Comments
Post a Comment