ಯತಿ ಸ್ವಂತೀ -300
28-10-2018
ಮೊದಲೇ ಹೇಳಿದಂತೆ ನಮ್ಮ ಟೀಂ ಸಖತ್ತಾಗಿತ್ತೋ ಇಲ್ಲ ನಾನು ಅವರಲ್ಲಿ ಸುಲಭವಾಗಿ ಬೆರೆತುಹೋದೆನೋ ತಿಳಿಯದು. ನಾನು ಕೋರಮಂಗಲದ ಆಫೀಸ್‌ನಲ್ಲಿದ್ದಾಗ ನನಗೆ 49 ವರ್ಷ. ಆದರೆ ನನ್ನ ಏಜ್ 35ಕ್ಕೆ ಸ್ಟಕ್ ಆಗಿದೆ ಎನ್ನುವಂತೆ ನಡೆದುಕೊಳ್ಳುತ್ತಿದ್ದರು ನನ್ನ ಸಹೋದ್ಯೋಗಿಗಳು. ಅವರೊಂದಿಗೆ ಅನೇಕ ರೆಸಾರ್ಟ್‌ಗಳಿಗೆ ಹೋಗಿ ಬೆಳಗ್ಗೆಯಿಂದ ಸಂಜೆಯ ವರೆಗೂ ಕಾಲ ಕಳೆದದ್ದುಂಟು. ಕೆಲವು ಸಹೋದ್ಯೋಗಿಗಳು ನಮ್ಮ ಕಂಪೆನಿಗಿಂತ ಇನ್ನೂ ಉತ್ತಮ ಕೆಲಸ ಸಿಕ್ಕಾಗ ಬಿಟ್ಟು ಹೋದರು. ಆದರೆ ಇಂದಿಗೂ ಅವರೊಂದಿಗೆ ನನಗೆ ಸಂಪರ್ಕ ಇದೆ. ಹೊಸಬರು ಬಂದರು. ಅವರೊಂದಿಗೆ ಕೂಡ ಸ್ನೇಹ ಚೆನ್ನಾಗಿತ್ತು. ಆಫೀಸ್‌ನ ಹಿಂಭಾಗದಲ್ಲಿ ಚೇಟಾ ಸಾಗರ್ ಅನ್ನೋ ಪುಟ್ಟ ಮಲಯಾಳಿ ಹೊಟೇಲ್‍ನಲ್ಲಿ ಸುಲೇಮಾನಿ (ಹಾಲು ಹಾಕದ ಚಾಯ್) ಕುಡಿಯುವ ಅಭ್ಯಾಸ ಆಯಿತು. ದಿನಾ ಮಧ್ಯಾಹ್ನ ಹೊರಗೆ ಊಟ. ಕೋರಮಂಗಲ ಅಂದರೆ ಕೇಳಬೇಕೇ? ಒಂದೊಂದು ದಿನ ಒಂದೊಂದು ಹೊಟೇಲ್. ಪರಾಠ, ಪಂಜಾಬಿ ಊಟ, ಆಂಧ್ರ ಮೀಲ್ಸ್, ಉಡುಪಿ ಹೊಟೇಲ್ ನೀರ್ ದೋಸೆ... ಶುಕ್ರವಾರ ಸ್ವಲ್ಪ ದೂರದಲ್ಲಿದ್ದ ಸಸ್ಯಾಹಾರಿ ಪಂಜಾಬಿ ಧಾಭಾ... ಅಥವಾ ತಮಿಳುನಾಡು ಸಸ್ಯಾಹಾರಿ ಫುಲ್ ಮೀಲ್ಸ್... ಅಂದು ಮಧ್ಯಾಹ್ನ ಹೆಬ್ಬಾವಿನ ಹಾಗೆ ಬಿದ್ದುಕೊಂಡಿರೋ ಆಸೆ ಆಗುತ್ತಿತ್ತು. ಆದರೆ ಕರ್ತವ್ಯದ ಕರೆಗೆ ಓಗೊಡುವುದು ನಮ್ಮ ಪ್ರಥಮ ಆದ್ಯತೆ ಆಗಿತ್ತು. ಮತ್ತೆ ಕಸ್ಟಮರುಗಳ ಭೇಟಿಗೆ ಹೊರಡುತ್ತಿದ್ದೆವು.
Comments
Post a Comment