ಯತಿ ಸ್ವಂತೀ-273
02-10-2018
ಅನೇಕ ಕಸ್ಟಮರುಗಳ ಪರಿಚಯ ಆಯಿತು. ಇಲ್ಲಿನ ವ್ಯವಸ್ಥೆ ಹೇಗೆಂದರೆ ಒಬ್ಬ ಒಮಾನೀ ಸ್ಪಾನ್ಸರ್ ಇರುತ್ತಾನೆ. ಆತನ ಕಂಪೆನಿಯಲ್ಲಿ ಎಲ್ಲ ದೇಶಗಳ ಜನರು ಕೆಲಸ ಮಾಡುತ್ತಾರೆ. ಒಂದು ಕಾಲದಲ್ಲಿ ಬ್ರಿಟಿಷ್ ಮತ್ತು ಅಮೆರಿಕನ್ ಬಾಸ್‌ಗಳು ಇರುತ್ತಿದ್ದರು. ಈಗ ಭಾರತೀಯರೇ ಜಾಸ್ತಿ. ನಿಧಾನವಾಗಿ ಒಮಾನಿಗಳು ಉನ್ನತ ಸ್ಥಾನಗಳಲ್ಲಿ ಕೂರುತ್ತಿದ್ದಾರೆ. ಅನೇಕ ಶ್ರೀಮಂತ ಕುಟುಂಬದ ಒಮಾನಿಗಳು ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಾರೆ. ಒಮಾನ್ ದೇಶದ ಸುಲ್ತಾನ್ ಕಬೂಸ್ ಪುಣೆಯಲ್ಲಿ ಓದಿದರಂತೆ. ನಮ್ಮ ರಾಷ್ಟ್ರಪತಿಗಳಾಗಿದ್ದ ಶ್ರೀ ಶಂಕರ ದಯಾಳ ಶರ್ಮ ಅವರಿಗೆ ಉಪಾಧ್ಯಾಯರಾಗಿದ್ದರಂತೆ. ಶರ್ಮಾ ಅವರು ಮಸ್ಕತ್‌ಗೆ ಬಂದಾಗ ಸುಲ್ತಾನ್‌ರಿಂದ ದೊಡ್ಡ ರೀತಿಯಲ್ಲಿ ಸ್ವಾಗತ ದೊರೆತಿತಂತೆ. ಖಿಮ್ಜೀ ರಾಮದಾಸ್ ಎನ್ನುವ ಗುಜರಾತಿನ ವ್ಯಾಪಾರಿ ಸುಲ್ತಾನ್‌ರಿಗೆ ಬೇಕಾದವರು. ಖಿಮ್ಜೀ ಅವರ ಅನೇಕ ವ್ಯಾಪಾರ ಮಳಿಗೆಗಳು ಇಲ್ಲಿವೆ. ಆ ಒಂದು ಕುಟುಂಬಕ್ಕೆ ಒಮಾನಿ ಉಡುಪು ದಿಶ್‌ದಾಶಹ್ ಧರಿಸುವ ಅನುಮತಿ ಇದೆ(ಅಂತೆ). ಪ್ರತಿ ಕೊಲ್ಲಿ ದೇಶದ ಗೌನ್‌ನಂತಹ ದಿರಸಿನಲ್ಲಿ ಪುಟ್ಟ ವ್ಯತ್ಯಾಸ ಇರುತ್ತದೆ. ಒಮಾನಿ ಉಡುಪು ಕಂಧೂರದಲ್ಲಿ ಕುತ್ತಿಗೆಯಿಂದ ಒಂದು ಲೇಸ್‍ನಂತಹ ದಾರ ಬಂದಿರುತ್ತದೆ. ಬಿಳಿ, ಕಪ್ಪು, ಕಂದು, ನೀಲಿ ಬಣ್ಣಗಳ ಕಂಧೂರ ಹೆಚ್ಚು ಬಳಕೆಯಲ್ಲಿದೆ. ಶುದ್ಧ ಒಮಾನಿ ಜನ ಇಂಗ್ಲಿಷ್ ಮತ್ತು ಅರಾಬಿಕ್ ಮಾತಾಡುತ್ತಾರೆ. ಬಲೂಚಿ ಎನ್ನುವ ಗುಂಪಿನ ಒಮಾನಿಗಳು ಉರ್ದು ಮತ್ತು ಹಿಂದಿ ಮಾತಾಡುತ್ತಾರೆ. ಒಂದು ಕಾಲದಲ್ಲಿ ಒಮ್ಮೆ ಆಪಾದಿತನಾಗಿ ಪೊಲೀಸ್ ಠಾಣೆಗೆ ಹೋದರೆ ಆತನ ತಲೆ ಬೋಳಿಸುತ್ತಿದ್ದರು (ಅಂತೆ). ಈಗ ಆ ಶಿಕ್ಷೆ ಇಲ್ಲ. ಆದರೆ ರೆಡ್ ಲೈಟ್ ಜಂಪ್ ಮಾಡಿದರೂ ಜೈಲ್. ನನಗೆ ತಿಳಿದ ಒಬ್ಬ ಯುವಕ ದೊಡ್ಡ ಟ್ರಕ್ ಹಿಂದೆ ಹೋಗುತ್ತಿದ್ದ. ಆ ಟ್ರಕ್ ಪ್ರಾಯಶಃ ಹಸಿರು ದೀಪ ಇರುವಾಗಲೇ ದಾಟಿರಬೇಕು. ಈ ಯುವಕನಿಗೆ ದೀಪ ಕಾಣಿಸಿಲ್ಲ. ದಾಟಿದ. ಜೈಲು! ನಂತರ ಸ್ಪಾನ್ಸರ್ ಹೋಗಿ ಮುಚ್ಚಳಿಕೆ ಬರೆದು ಕೊಟ್ಟು ಬಿಡಿಸಿದರಂತೆ. ನನಗೆ ತಿಳಿದ ಒಬ್ಬರು ಕಾರಿನಲ್ಲಿ ಹೋಗುತ್ತಿದ್ದಾಗ ಮುಂದಿನ ಕಾರು ರೌಂಡೆಬೌಟ್(ಸರ್ಕಲ್)ಗೆ ಬಡಿದು ಉರುಳಿತು. ಇವರ ಕಾರು ಆ ಕಾರನ್ನು ಟಚ್ ಮಾಡಿತು. ಇವರಿಗೆ 75 ರಿಯಾಲ್ ಒಮಾನಿ ಫೈನ್. ಒಂದು ರಿಯಾಲ್ ಬೆಲೆ ಆಗ 125 ರೂಪಾಯಿಗಳು. ಅದಲ್ಲ ವಿಷಯ. ಒಂದು ರಿಯಾಲ್‍ನಲ್ಲಿ ಎರಡು ಊಟ ಆರಾಮವಾಗಿ ಮಾಡಬಹುದು! ಮರಳಿಗಿಂತ ಕಲ್ಲು ಹೆಚ್ಚಾಗಿ ಇರುವ ದೇಶ ಒಮಾನ್.
ReplyForward
|
Comments
Post a Comment