ಯತಿ ಸ್ವಂತೀ -279
08-10-2018
ಶುಕ್ರವಾರ ಬೆಳಗ್ಗೆ ತಿಂಡಿಯಿಂದ ಫಜೀತಿ ಶುರು. ಆ ಮಲ್ಲು ಮುಸ್ಲಿಂ ಹೊಟೇಲ್‌ನಲ್ಲಿ ಶುಕ್ರವಾರ ಬೆಳಗ್ಗೆ ಇಡ್ಲಿ ಮಾಡುತ್ತಿದ್ದರು. ಅದನ್ನು ಬಾಯಿಗೆ ಇಡಲು ಆಗುತ್ತಿರಲಿಲ್ಲ. ಆ ಸಮಯದಲ್ಲಿ ಚೆನ್ನೈನ 'ಅನ್ನಪೂರ್ಣ ಹೊಟೇಲ್' ಮಸ್ಕತ್‌ನಲ್ಲಿ ಶುರುವಾಯಿತು. ಅದ್ಭುತ ಇಡ್ಲಿ, ದೋಸೆ ಇತ್ಯಾದಿ. ದಿನವೂ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಶುಕ್ರವಾರ ಮಾತ್ರ ತಪ್ಪದೇ ಹೋಗುತ್ತಿದ್ದೆ. ಇಡ್ಲಿ ಅಥವಾ ದೋಸೆ ತಿಂದು ಆಫೀಸ್. ನಂತರ ಮಧ್ಯಾಹ್ನ ಮತ್ತೆ ಅಲ್ಲೇ ಟಿಪಿಕಲ್ ತಮಿಳುನಾಡು ಊಟ. ಸಂಜೆ ತಿನ್ನುವ ಅಭ್ಯಾಸ ಕಮ್ಮಿ. ರಾತ್ರಿ ಸಾಮಾನ್ಯವಾಗಿ ಕೊಲೀಗ್ ಜೊತೆಗೆ ಅಥವಾ ಒಬ್ಬನೇ ಮತ್ತೆ ಅನ್ನಪೂರ್ಣ. ಇಲ್ಲದಿದ್ದರೆ ಪಾಕಿಸ್ತಾನಿ ಪರೋಠ ಅಥವಾ ನಾರ್ತಿಂಡಿಯನ್ ಊಟ. ಕೆಲವು ಸಲ ಕೊಲೀಗ್ಸ್ ಮನೆಯಲ್ಲಿ ಫಂಕ್ಷನ್, ಸತ್ಯ ನಾರಾಯಣ ಪೂಜೆ ಇತ್ಯಾದಿ. ಶನಿವಾರ ಸಂಜೆ ಶಿವ ಹನುಮಾನ್ ಗುಡಿಯಲ್ಲಿ ಹಾಜರ್. ಅಲ್ಲಿ ಭಕ್ತರು ವಿಧವಿಧವಾದ ಪ್ರಸಾದ ಮಾಡಿಸುತ್ತಿದ್ದರು. ಹನುಮನಿಗೆ ಈರುಳ್ಳಿ ಹಾಕಿದ ವಡೆ ಮಾಲೆಯಿಂದ ಹಿಡಿದು ಎಳ್ಳಿನ ಅನ್ನದ ವರೆಗೆ ಪ್ರಸಾದ. ಗುಡಿಯ ಅಂಗಳದಲ್ಲಿ ಒಂದು ಆಲದ ಮರ. ಅದರ ಬುಡದಲ್ಲಿ ಒಂದು ಕಟ್ಟೆ. ಅದರ ಮೇಲೆ ಒಂದು ತಟ್ಟೆಯಲ್ಲಿ ಬಾಳೆಹಣ್ಣು ತುಂಡುಗಳು ಮತ್ತು ತೆಂಗಿನ ಕಾಯಿ ಚೂರುಗಳು. ಮತ್ತೊಂದು ಹಾರಿವಾಣದಲ್ಲಿ ನೈವೇದ್ಯಕ್ಕಾಗಿ ಮಾಡಿಸಿದ್ದ ಪ್ರಸಾದ. 'ಮೈಟ್ ಈಸ್ ರೈಟ್' ಎನ್ನುವಂತೆ ಕಿತ್ತಾಟ ನಡೆಸಿ ಮ್ಯಾಕ್ಸಿಮಮ್ ಪ್ರಸಾದ 'ಹೊಡೆದು'ಕೊಳ್ಳುವವರಿದ್ದರು. ಅವರನ್ನು ಗೆಲ್ಲಲು ನಮಗೆ ಕೆಲವು ಸಲ ಸಾಧ್ಯವಾಗುತ್ತಿರಲಿಲ್ಲ! ಒಂದು ರೀತಿಯಲ್ಲಿ ಆ ರಾತ್ರಿಯ 'ಡಿನ್ನರ್' ಅಲ್ಲೇ ಆಗಿಬಿಡುತ್ತಿತ್ತು. ಕೃಷ್ಣನ ಗುಡಿಯಲ್ಲಿ ವಿಶೇಷ ಇದ್ದರೆ ಡಿಸ್ಪೋಸಬಲ್ ತಟ್ಟೆಯಲ್ಲಿ ಸಾಂಬಾರನ್ನ, ಮೊಸರನ್ನ, ಪುಳಿಯೋಗರೆ ಮತ್ತು ಸಿಹಿ. ಸಹೋದ್ಯೋಗಿಗಳ ಮನೆಯಲ್ಲಿ ಯಾವ ಫಂಕ್ಷನ್ ಆದರೂ ಭರ್ಜರಿ ಊಟ. ಆಫೀಸ್‌ನಲ್ಲಿ ಗಣೇಶ, ದೀಪಾವಳಿ, ಉಗಾದಿ, ದಸರಾ ಹಬ್ಬಗಳ ಆಚರಣೆಯಲ್ಲಿ ಸಹೋದ್ಯೋಗಿಗಳ ಮನೆಯವರು ರುಚಿ ರುಚಿಯಾದ ತಿನಿಸುಗಳನ್ನು ತರುತ್ತಿದ್ದರು. ಇವೆಲ್ಲ ನನ್ನ ಒಂಟಿತನವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಹಕಾರಿ ಆಗಿದ್ದವು.
Comments
Post a Comment