ಯತಿ ಸ್ವಂತೀ -277


06-10-2018
ರಮದಾನ್ ಸಮಯದಲ್ಲಿ ಬೆಳಿಗ್ಗೆಯಿಂದ ಒಮಾನ್ ದೇಶದಲ್ಲಿ ಮುಸ್ಲಿಮರು (ಎಲ್ಲ ದೇಶಗಳವರು) ಉಪವಾಸ ಇರುತ್ತಿದ್ದರು. ಮೊದಲ ದಿನ ಪೇಪರ್‌ಗಳಲ್ಲಿ ಸುಲ್ತಾನರ ಸಂದೇಶ ಇರುತ್ತಿತ್ತು. ಉಪವಾಸ ಮಾಡದೇ ಇರುವವರು ಉಪವಾಸ ಇರುವವರ ಮುಂದೆ ಆಹಾರ ದ್ರವ ಯಾವುದನ್ನೂ ಸೇವಿಸದೇ ಇರಲು ಪ್ರಯತ್ನ ಮಾಡಿ ಎಂದು. ನಮ್ಮ ಆಫೀಸ್‌ನಲ್ಲಿ ಒಮಾನಿಗಳು, ಕನ್ನಡ ಮುಸ್ಲಿಂ ಕೂಡ ಇದ್ದರು. ಉಳಿದ ದಿನಗಳಲ್ಲಿ ನಮ್ಮ ಸೀಟಿಗೇ ಟೀ ಕಾಫಿ ಬರುತ್ತಿದ್ದವು. ಗೋವಿಂದ... ನಮ್ಮ ಆಫೀಸ್ ಬಾಯ್ ಸರಬರಾಜು ಮಾಡುತ್ತಿದ್ದ. ರಮದಾನ್ ತಿಂಗಳಲ್ಲಿ ಪ್ಯಾಂಟ್ರಿಯಲ್ಲಿ ಕಪ್‌ಗಳಲ್ಲಿ ಸಿದ್ಧ ಮಾಡಿಡುತ್ತಿದ್ದ. ನಾವು ಬಾಗಿಲು ಹಾಕಿಕೊಂಡು ಕುಡಿಯುತ್ತಿದ್ದೆವು. ದೊಡ್ಡ ಬಾಸ್‌ಗಳ ಛೇಂಬರ್ ಗಾಜುಗಳನ್ನು ವೆನಿಶಿಯನ್ ಬ್ಲೈಂಡ್‍ನಿಂದ ಮುಚ್ಚಿ ಪೇಯ ನೀಡುತ್ತಿದ್ದ ಗೋವಿಂದ. ಹೊರಗೆ ಹೊಟೇಲ್‌ಗಳು ಸಂಜೆ ವರೆಗೂ ಮುಚ್ಚಿರುತ್ತಿದ್ದವು. ಅಮ್ಮ ಬರುವರೆಂದು ರೂಮು ಬದಲಿಸಿದಾಗ 'ಎಮ್ಟೀಯಾರ್ ರೆಡಿ ಟು ಈಟ್' ತಂದು ಬಿಸಿ ನೀರಲ್ಲಿ ಕುದಿಸಿ ಸಾರನ್ನ, ಪೊಂಗಲ್, ಸಾಂಬಾರನ್ನ ತಿಂದಿದ್ದೇನೆ. ಒಮ್ಮೆ ರಮದಾನ್ ಸಮಯದಲ್ಲಿ ಬಂದ ಸಂಕಷ್ಟ ಚತುರ್ಥಿ ಆಚರಿಸಲು ಉಪವಾಸ ಇದ್ದೆ. ಒಬ್ಬನೇ ನಿಜ್ವಾ ಎನ್ನುವ ಊರಿಗೆ ಹೋದೆ. (ಮುಂದೊಂದು ದಿನ ಅಲ್ಲಿಗೆ ಮೂರು ತಿಂಗಳುಗಳ ಕಾಲ ಇರಲು ಹೋಗಲಿರುವೆನೆಂದು ಆ ಕ್ಷಣದಲ್ಲಿ ನನಗೆ ತಿಳಿದಿರಲಿಲ್ಲ) ಹಸಿವು. ಆದರೆ ಹಟ. ಮ್ಯಾಟಡಾರ್ ಟ್ಯಾಕ್ಸಿಯಲ್ಲಿ ಮಸ್ಕತ್‌ಗೆ ಹಿಂದಿರುಗುವಾಗ ಸಂಜೆ ಆಯ್ತು ಇಡೀ ಟ್ಯಾಕ್ಸಿ ಜನ ಹಾಲು, ಜ್ಯೂಸ್, ಮಜ್ಜಿಗೆ ಕುಡಿದು ಸಮೋಸ ಇತ್ಯಾದಿ ತಿಂದರು. ನನಗೆ ಆಫರ್ ಮಾಡಿದರು. ನಯವಾಗಿ ನಿರಾಕರಿಸಿದೆ ನನ್ನ ಉಪವಾಸ ಚಂದ್ರ ಬಂದ ಮೇಲೆ ಮುಗಿಯುವುದು ಎಂದು. ರಾತ್ರಿ ಒಂಬತ್ತು ಗಂಟೆ ದಾಟಿದೆ. ಚಂದ್ರನ ಪತ್ತೆ ಇರಲಿಲ್ಲ! ನಮ್ಮ ಬಿಳ್ಡಿಂಗ್ ಟೆರೇಸ್ ಮೇಲೆ ಹೋದರೆ ಅಲ್ಲಿ ನಗುತ್ತಿದ್ದ ಚಂದ್ರ ಕಾಣಿಸಿದ. ಇಲ್ಲಿಗೆ ನನ್ನ ಏಕೈಕ ಸಂಕಷ್ಟಿ ಉಪವಾಸದ ವ್ಯಾಖ್ಯಾನಂ ಸಂಪೂರ್ಣಂ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102