ಯತಿ ಸ್ವಂತೀ - 272
01-10-2018
ಆತನ ಹೆಸರು ಮರೆತಿದ್ದೇನೆ. ತಮಿಳು ಯುವಕ. ನಾನು ಒಮಾನ್‌ಗೆ ಹೋದ ಹೊಸತರಲ್ಲಿ ಅವನನ್ನು ಒಂದು ಫಂಕ್ಷನ್‍ನಲ್ಲಿ ನೋಡಿದ್ದೆ. ಅದು ಯಾವ ಫಂಕ್ಷನ್ ಎಂದು ಕೂಡ ಮರೆತುಹೋಗಿದೆ. ಬಹಳ ಚೆನ್ನಾಗಿ ಮಾತಾಡಿಸಿದ್ದ. ಅದಾಗಿ ಒಂದು ವರ್ಷದ ನಂತರ ಮಿಮಿಕ್ರಿ ದಯಾನಂದ್ ಮೊಟ್ಟಮೊದಲ ಬಾರಿಗೆ ಒಬ್ಬರೇ ಒಮಾನ್ ಜನರಿಗೆ ಮನರಂಜನೆ ನೀಡಲು ಬಂದಿದ್ದರು. ನಕ್ಕು ನಕ್ಕೂ ಸುಸ್ತಾಯಿತು. ಪ್ರೋಗ್ರಾಮ್ ಮುಗಿದ ನಂತರ ನನ್ನನ್ನು ಹಿಂದಿನಿಂದ 'ಯತಿರಾಜ್' ಎಂದು ಯಾರೋ ಕರೆದರು. ತಿರುಗಿ ನೋಡಿದೆ. ನನಗೆ ಆತನ ಗುರುತು ಸಿಕ್ಕಿತು. ಆತನಿಗೆ ನನ್ನ ಗುರುತು ಹತ್ತಲಿಲ್ಲ! ಬೆಳ್ಳಗಿನ ಬೆಣ್ಣೆ ಮುದ್ದೆಯಂತೆ ಇದ್ದೆ ಆತ ಹಿಂದಿನ ಸಲ ನೋಡಿದಾಗ. ಈಗ ನನ್ನ ಮುಖ, ದೇಹ ಎಲ್ಲ ಬದಲಾವಣೆ ಆಗಿದ್ದವು! 'ಹೌದೂ, ನಾನು ಯತಿರಾಜ್ ಅಂತ ಹೇಗೆ ಕಂಡು ಹಿಡಿದಿರೋ?' ಎಂದೆ. 'ನಿಮ್ಮ ವಿಚಿತ್ರ ಕಲರುಗಳ ಟೀ ಶರ್ಟ್ ಮೂಲಕ' ಅಂದನಾತ! ಈಗ ಆತನ ವಿಷಯ ಏಕಪ್ಪಾ ಬಂತೂಂತಂದ್ರೆ ನಾನು ಅಮ್ಮನನ್ನು ಬೆಂಗಳೂರಿಗೆ ಕಳುಹಿಸಿ ಕೊಡಲು ಮಸ್ಕತ್‌ನ ಸೀಬ್ ವಿಮಾನ ನಿಲ್ದಾಣಕ್ಕೆ ಬಂದರೆ ಆತ ಸಂಸಾರ ಸಹಿತ ಬೆಂಗಳೂರಿಗೆ ಹೊರಟಿದ್ದ. ಅವನಿಗೆ ರಿಕ್ವೆಸ್ಟ್ ಮಾಡಿದೆ ಅಮ್ಮನನ್ನು ನೋಡಿಕೊಳ್ಳಲು. ನಾನು ವಾಪಸ್ ಮನೆಗೆ ಬಂದು ಬಿಟ್ಟೆ. ಅಂದು ವಿಮಾನ ಬೆಂಗಳೂರು ತಲುಪದೇ ಮುಂಬೈಗೆ ಹೋಗಿ ಅಲ್ಲಿಂದ ಬೇರೆ ವಿಮಾನ ಬೆಂಗಳೂರಿಗೆ ಬಂದಿತಂತೆ. ಅವನು ಇದ್ದಿದ್ದರಿಂದ ಅಮ್ಮ ಹೆಚ್ಚು ಚಿಂತಿಸದೇ ಬೆಂಗಳೂರು ತಲುಪುವಂತೆ ಆಯಿತು. ಟೀ ಶರ್ಟ್ ಕಥೆ ಚೆನ್ನಾಗಿದೆ ಅಲ್ವಾ?
Comments
Post a Comment