ಯತಿ ಸ್ವಂತೀ -282


11-10-2018
ರಸ್ತೆ ಮರ್ಯಾದೆ ಅನ್ನೋದನ್ನ ಒಮಾನ್ ದೇಶದಲ್ಲಿ ಕಲಿತ 'ತಪ್ಪಿಗೆ', ನನಗೆ ಇಂದಿಗೂ ಬೆಂಗಳೂರು ನಗರದಲ್ಲಿ ಕಾರು ಚಾಲಿಸಲು ಬರುವುದಿಲ್ಲ!  ನನ್ನ ಬಳಿ ಇರುವ ಇಂಡಿಗೋ ಸಿ ಎಸ್ ಕಪ್ಪು ಕಾರನ್ನು ನನ್ನ ಶ್ರೀಮತಿ ಆರಾಮವಾಗಿ ಓಡಿಸುತ್ತಾರೆ. ಮೊದಲು ಮಾರುತಿ ಆಮ್ನಿ ಓಡಿಸುತ್ತಿದ್ದರು. ಮಸ್ಕತ್‌ನಲ್ಲಿ ಲೈಸೆನ್ಸ್ ತಗೊಂಡ ನಂತರ ರೆಗ್ಯುಲರ್ ಆಗಿ ಕಾರು ಬಳಸಿದೆ. ಮೂರು ಲೇನ್ ರಸ್ತೆ ಇರುವೆಡೆ ಮುಂದೆ ನಾವು ಬಲಕ್ಕೆ ತಿರುಗಬೇಕಾದರೆ ಬಲತುದಿ, ಎಡಕ್ಕೆ ತಿರುಗಬೇಕಾದರೆ ಎಡತುದಿ ನೇರ ಹೋಗಬೇಕು ಎಂದರೆ ಮಧ್ಯ ಹೋಗಬೇಕು. ಅಫ್ ಕೋರ್ಸ್, ರಸ್ತೆ ಖಾಲಿ ಇದ್ದರೆ ಟ್ರ್ಯಾಕ್ ಬದಲಿಸಬಹುದಿತ್ತು. ಆದರೆ ಈ ಕಡ್ಡಾಯ ರೀತಿಯ ಚಾಲನೆ ಅಭ್ಯಾಸ ಆಗಿತ್ತು. ಅಲ್ಲಿನ ಯುವಕರು ಕಾರಲ್ಲಿ ಬರುತ್ತಿದ್ದ ವೇಗ ನನ್ನ ಹೃದಯವನ್ನು ನನ್ನ ಬಾಯಿಗೆ ತಂದದ್ದುಂಟು. ತೀರಾ ದೊಡ್ಡ ರಸ್ತೆಯಲ್ಲಿ ನಾನೂ 120 ಕಿಮೀ ವೇಗದಲ್ಲಿ ಓಡಿಸಿದ್ದಿದೆ. ನನ್ನ ಕಾರಿನ ಸ್ಪೀಡೋಮೀಟರ್ ಕುಂಯ್ ಕುಂಯ್  ಎಂದು ಆಗೆಲ್ಲಾ ನನ್ನನ್ನು ಎಚ್ಚರಿಸಿದ್ದಿದೆ. ಐದನೇ ಗೇರ್‌ನಲ್ಲಿ ಕಾರು ಓಡಿಸುವುದು, ರೌಂಡೆಬೌಟ್ ಬಂದಾಗ ನಾಲ್ಕನೇ ಗೇರ್. ಒಮ್ಮೆ ಒಂದು ಘಟನೆ ನಡೆಯಿತು. ಮಥ್ರಾ ಎನ್ನುವ ಜಾಗದಲ್ಲಿ ಮುನಿಸಿಪಾಲಿಟಿ ಇದೆ. ಅಲ್ಲಿ ಟೆಂಡರ್ ಸಬ್ಮಿಟ್ ಮಾಡಿ (ಎಂದಿನಂತೆ ಕೊನೆಯ ಕ್ಷಣದಲ್ಲಿ) ಸ್ಪರ್ಧಿಯೊಬ್ಬರೊಂದಿಗೆ ಮಾತಾಡುತ್ತಿದ್ದೆ. ನಮಗೆ ನಮ್ಮ ಕಂಪೆನಿಯ ದೊಡ್ಡವರು ಹೇಳಿದ್ದರು. ಟ್ರೇಡಿಂಗ್‍ನ ಮುಖ್ಯ ಲಕ್ಷಣ ವಿಷಯ ಸಂಗ್ರಹಣೆ ಎಂದು. ಮಧ್ಯಾಹ್ನ ಒಂದೂವರೆ ಆಗಿತ್ತು ಮರಳಿ ಹೊರಟಾಗ. ಕಾರೋಡಿಸುತ್ತಿದ್ದ ನನಗೆ ಏನೋ ಅನುಮಾನ. ನಾನೊಬ್ಬನೇ ಇದ್ದೆ ರಸ್ತೆಯಲ್ಲಿ. ಅಂದು ಅದೇ ವರದಾನ ಆಗಿತ್ತು ನನಗೆ. ಯಾಕೆ ರೌಂಡೆಬೌಟ್ ಆ ಕಡೆಯಿಂದ ಸುತ್ತಬೇಕೆಂಬಂತೆ ಕಾಣಿಸುತ್ತಿದೆ ಎಂಬ ಅನುಮಾನ ಇದ್ದಕ್ಕಿದ್ದಂತೆ ಬಂತು. ಮರುಕ್ಷಣ ಏಸಿ ಕಾರಿನೊಳಗೆ ನನಗೆ ಬೆವರು ಸುರಿಯಲಾರಂಭಿಸಿತು. ಹೇಳಿ ಕೇಳಿ ನಾನು ಎಕ್ಸ್ ಪ್ಯಾಟ್ (ಪರದೇಶಿ). ತಪ್ಪು ಮಾಡಿದರೆ ಸರ್ಕಾರಕ್ಕೆ ನನ್ನ ಸ್ಪಾನ್ಸರ್‌ಗೆ ಮತ್ತು ನನ್ನ ಬಾಸ್‌ಗೆ ಜವಾಬು ಕೊಡಬೇಕಿತ್ತು. ಬೆಂಗಳೂರು ನಗರದಲ್ಲಿ ಕಾರು ಓಡಿಸಿದ್ದಕ್ಕಿಂತ ಸ್ಕೂಟರ್ ಓಡಿಸಿದ್ದೇ ಜಾಸ್ತಿ. ಈಗ ನನಗೇ ತಿಳಿಯದೇ ಅಲ್ಲಿ ಕಾರನ್ನು ಭಾರತದ ರೀತಿ ಎದುರಿಗೆ ವಾಹನ ಬರುವ ರಸ್ತೆಯಲ್ಲಿ ರಸ್ತೆಯ ಎಡಗಡೆ ಓಡಿಸುತ್ತಿದ್ದೆ! ನನ್ನ ಪುಣ್ಯ. ಅನತಿ ದೂರದಲ್ಲಿಯೇ ರೌಂಡೆಬೌಟ್ ಇತ್ತು. ಯಾರೂ ಇರಲಿಲ್ಲ. ಖಾಲಿ ರಸ್ತೆ. ಬಚಾವ್! ಬೇಗನೆ ವಿರುದ್ಧ ದಿಕ್ಕಿಗೆ ಕಾರನ್ನು ಚಾಲನೆ ಮಾಡಿ ನಿಡಿದಾಗಿ ನಿಟ್ಟುಸಿರಿಟ್ಟೆ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102