ಯತಿ ಸ್ವಂತೀ -275
04-10-2018
ನನ್ನನ್ನು ಪ್ರಾಜೆಕ್ಟ್ಸ್ ಡಿವಿಶನ್‌ಗೆ ವರ್ಗ ಮಾಡಿದರು. ಕನ್ನಡ ಬರುವ ಸತೀಶ್ ಕಾಮತರು ನನ್ನ ಬಾಸ್. ಜೊತೆಗೆ ಆಂಧ್ರಪ್ರದೇಶದವರೊಬ್ಬರು. ಕೊಟೇಶನ್ ತಯಾರಿ ಕೆಲಸದಲ್ಲಿ ಸಹಾಯ ನನ್ನದು. ಒಂದು ವಿಶೇಷ ನೋಡಿ. ನಮಗೆ ಶುಕ್ರವಾರ ರಜೆ. ಭಾನುವಾರ ಟೆಂಡರ್ ಸಬ್‌ಮಿಶನ್. ಶನಿವಾರ, ಭಾನುವಾರ ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ಸೂಟಿ. ನಮಗೆ ನಮ್ಮ ಕೆಲವು ಟ್ರಾನ್ಸ್‌ಮಿಶನ್ ವಸ್ತುಗಳ ಬೆಲೆ ಪಡೆಯಲು ಶುಕ್ರವಾರವೇ ಸಾಧ್ಯ. ಆದ್ದರಿಂದ ಶುಕ್ರವಾರ ಬೆಳಗ್ಗೆ ನಾವು ಆಫೀಸ್‌ಗೆ ಬಂದು ಸಮಯವನ್ನು ಯೂರೋಪ್ ಮತ್ತು ಅಮೆರಿಕದ ಸಮಯಕ್ಕೆ ಹೊಂದಿಸಿಕೊಂಡು ಫೋನ್ ಮಾಡಿ ಬೆಲೆ ಅರಿಯಬೇಕು. ಮೊದಲೇ ಹೇಳಿದಂತೆ ಶುಕ್ರವಾರ ಬೆಳಗ್ಗೆ ಇಡೀ ಮಸ್ಕತ್ ಫುಲ್ ನಿದ್ದೆ. ಮಧ್ಯಾಹ್ನದ ವರೆಗೆ ಜನ ಹೊರಗೆ ಬರುವುದಿಲ್ಲ. ಕಾರೋಡಿಸಲೂ ಖುಷಿ. ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳಿರವು. ಬೆಲೆ ಪಡೆದು ಸರ್ಕಾರಿ ಫಾರ್ಮ್ಯಾಟ್‍ನಲ್ಲಿ ಕೊಟೇಶನ್ ತಯಾರಿ. ದರಗಳನ್ನು ಬರೆಯುವ ಜಾಗ ಖಾಲಿ ಬಿಡುತ್ತಿದ್ದೆವು. ಅದನ್ನು ಭಾನುವಾರ ಬೆಳಗ್ಗೆ ನಮ್ಮ ದೊಡ್ಡ ಬಾಸ್ ತುಂಬುತ್ತಿದ್ದರು. ಆ ದೇಶದಲ್ಲಿ ಸರ್ಕಾರಿ ಎಲೆಕ್ಟ್ರಿಕ್ ಕೆಲಸಗಳು ಬಹಳ ಸ್ಪರ್ಧಾತ್ಮಕ. ಲೀಸ್ಟ್ ಕೋಟೆಡ್ ಕಂಪೆನಿ ಆರ್ಡರ್ ಪಡೆಯುತ್ತಿದ್ದು, ನಮ್ಮದೇ ಲೀಸ್ಟ್ ಆಗಬೇಕು. ನಮಗೆ ನಷ್ಟ ಆಗಕೂಡದು. ನಮ್ಮ ಬಾಸ್ ಸಖತ್ ಶಾರ್ಪ್. ಟರ್ಕಿಯಿಂದ ಮರದ ಕಂಬಗಳು ಇತ್ಯಾದಿ ತರಿಸಬೇಕಿತ್ತು. ನನ್ನ ಕಾರು ಡ್ರೈವಿಂಗ್ ಪಕ್ಕಾ ಎಂದು ತಿಳಿದ ಮೇಲೆ ನನ್ನನ್ನು ಕೊಟೇಶನ್ ಸಬ್‌ಮಿಶನ್‌ಗೆ ಕಳಿಸುತ್ತಿದ್ದರು. ಇನ್ನು ಇಪ್ಪತ್ತು ನಿಮಿಷಗಳ ಕಾಲ ಇದೆ ಟೆಂಡರ್ ಸಬ್‌ಮಿಶನ್‌ಗೆ ಎನ್ನುವಾಗ ಕೂಡ ನಾನು ಹೊರಟಿದ್ದಿದೆ. 35 ಕಿಮೀ ಆ ಊರಲ್ಲಿ ದೂರ ಅಲ್ಲ. ಸ್ವಲ್ಪ ಫಾಸ್ಟ್ ಆಗಿ ಹೋಗಬೇಕು. ಉಳಿದವರು ತೀರಾ ವೇಗವಾಗಿ ಹೋಗಬೇಡ ಎಂದು ಎಚ್ಚರಿಸುತ್ತಿದ್ದರು. ಒಮ್ಮೆ ಮುಖ್ಯ ರಸ್ತೆಯಲ್ಲಿ ಹೋಗದೇ ಪಕ್ಕದ ರಸ್ತೆಯಲ್ಲಿ ವೇಗವಾಗಿ ಹೋದೆ. ರೆಡ್ ಲೈಟ್ ಜಂಪ್ ಮಾಡಿದೆನೆಂದು ನೆನಪು. ನಂತರ ಗಡಗಡಗಡ ನಡುಗಿದೆ. ಪುಣ್ಯ! ಅಲ್ಲಿ ಕ್ಯಾಮೆರಾ ಇರಲಿಲ್ಲ ಎನಿಸುತ್ತದೆ. ಟೆಂಡರ್ ಸಕಾಲದಲ್ಲಿ ಅಂದರೆ ಐದು ನಿಮಿಷಗಳ ಮುನ್ನ ನೀಡಿದೆ. ಮೊದಲೊಮ್ಮೆ ಟೆಂಡರ್ ಸಬ್‌ಮಿಶನ್‌ಗೆ ಹೋದಾಗ ಅಲ್ಲಿದ್ದ ಸಿಬ್ಬಂದಿ ಒಬ್ಬ ಒಂದು ಪತ್ರವನ್ನು ಪಕ್ಕದ ಬಿಳ್ಡಿಂಗ್‍ಗೆ ಕೊಡುವೆಯಾ ಅಂದ. ನಾನಂದು ಕಾರು ತಂದಿರಲಿಲ್ಲ. ಮುಂದೆ ಘಾಲಾಗೆ ಹೋಗುತ್ತಿದ್ದ ನನ್ನ ಸಹೋದ್ಯೋಗಿಯ ಬಳಿ ಡ್ರಾಪ್ ತೆಗೆದುಕೊಂಡಿದ್ದೆ. ಅದನ್ನು ಈ ಸರ್ಕಾರಿ ಸಿಬ್ಬಂದಿಗೆ ಹೇಳಲು ಹೋಗಲಿಲ್ಲ. ನಾನು ಬರಲು ತಡವಾಗಿದ್ದರಿಂದ ಆತನಿಗೆ ಆಗ ನಡೆದು ಹೋದೆ ಎಂದೆ. ಪಕ್ಕದ ಬಿಳ್ಡಿಂಗ್ ಸುಮಾರು ಮುಕ್ಕಾಲು ಕಿಮೀ. ಉರಿಬಿಸಿಲು. ಅಂದಿನಿಂದ ಆತ ಗೆಳೆಯನಾದ. ಮುಂದಿನ ಸಲ ನಾನು ಟೆಂಡರ್ ಕೊಡಲು ನಿಧಾನವಾಗಿ ಆಫೀಸ್‌ನಿಂದ ಹೊರಟಾಗ 'ಟ್ರಾಫಿಕ್ ಜಾಮ್' ಅಂದೆ. 'ಡೋಂಟ್ ವರೀ ಯಾಕೀ. ಆರಾಮವಾಗಿ ಬಾ' ಎಂದ. ನಾನು ಹೋದಾಗ ಐದು ನಿಮಿಷಗಳ ತಡ. ನನಗಾಗಿ ಹೊರಗೆ ಕಾದಿದ್ದು ನಂತರ ಟೆಂಡರ್ ಓಪನಿಂಗ್‌ಗೆ ಲಕೋಟೆಗಳನ್ನು ತೆಗೆದುಕೊಂಡು ಹೊರಟ. ಮುಂದೆ ಬೆಂಗಳೂರು ನಗರದಲ್ಲಿ ಕೆಲಸದ ಇಂಟರ್ವ್ಯೂನಲ್ಲಿ 'ನನಗೆ ಮಾತು ಮಾತ್ರ ಬಂಡವಾಳ. ಮಸ್ಕತ್‌ನಲ್ಲಿ ಸರ್ಕಾರಿ ಸಿಬ್ಬಂದಿ ಜೊತೆ ಕೆಲಸವಿರುತ್ತಿತ್ತು' ಎಂದು ನಾನು ಹೇಳಿದ್ದಕ್ಕೆ ನನಗೆ ಸರ್ಕಾರದ ಇಲಾಖೆಗಳಿಗೆ ಆ ಕಂಪೆನಿಯ ಉತ್ಪಾದನೆಯನ್ನು ಮಾರುವ ಕೆಲಸ ಕೊಟ್ಟರು.
Comments
Post a Comment