ಯತಿ ಸ್ವಂತೀ -276
05-10-2018
ನಡೆದು ಹೋಗುತ್ತಿದ್ದ ಸಮಯಗಳಲ್ಲಿ ಅನೇಕ ಸಲ ನಾನು ಬಲಗಡೆ ಇಳಿದು ಎಡಗಡೆಗೆ ರಸ್ತೆ ದಾಟಬೇಕಿತ್ತು. ಆ ರಸ್ತೆಗಳಲ್ಲಿ ವೇಗದ ಮಿತಿ ಗಂಟೆಗೆ 120ಕಿಮೀ ಎಂದರೆ ಜನ ನೂರಿಪ್ಪತ್ತರಲ್ಲೇ ಕಾರೋಡಿಸುತ್ತಿದ್ದರು. ನನಗೆ ಉಡುಪಿ - ಮಂಗಳೂರು ನಡುವಿನ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಬಸ್‌ಗಳು ನೆನಪಾಗುತ್ತಿದ್ದವು. ದೂರದಲ್ಲಿ ಚುಕ್ಕಿಯಂತೆ ಕಾಣುವ ಬಸ್ ಇದ್ದಕ್ಕಿದ್ದಂತೆ ಮೈ ಮೇಲೆ ಬರುವಷ್ಟು ಹತ್ತಿರವಾಗುತ್ತಿತ್ತು. ಮಸ್ಕತ್‌ನಲ್ಲಿ ಒಮ್ಮೆ ನನ್ನನ್ನು ಅವರ ಕಾರಿನಲ್ಲಿ ಒಯ್ದಿದ್ದರು ನನ್ನ ಬಾಸ್. ಅವರು ಮುಂಬೈ ಮೂಲದ ಅಯ್ಯರ್. ನನಗೆ ತಮಿಳು ಭಾಷೆ ಬರುವುದೆಂದರಿತು ನನ್ನೊಂದಿಗೆ ತಮಿಳಿನಲ್ಲಿ ಮಾತಾಡುತ್ತಿದ್ದರು. ಅವರಿಗೆ ಹೀಗೆ ಇಂತಹ ಜಾಗದಲ್ಲಿ ರಸ್ತೆ ದಾಟುವೆನೆಂದು ಹೇಳಿ ನಕ್ಕಾಗ ಅವರು ನಗಲಿಲ್ಲ. ಸೀರಿಯಸ್ಸಾಗಿ, 'ದಯವಿಟ್ಟು ಫುಟ್ ಓವರ್‌ಬ್ರಿಡ್ಜ್ ಉಪಯೋಗಿಸು. ಈ ರೀತಿ ರಸ್ತೆ ದಾಟಬೇಕು. ಅಪಾಯ!' ಎಂದಿದ್ದರು. ಕಾರು ಡ್ರೈವಿಂಗ್ ಬಂದು, ಆಫೀಸ್ ನನಗೆ ಕಾರು ಕೊಟ್ಟಮೇಲೆ ಒಂದೊಂದೇ ಏರಿಯಾ ಅರಿತೆ. ಹಮ್ರಿಯಾ, ಅಲ್ಖ್ವೈರ್, ಘಾಲಾ, ರುಸೈಲ್, ವಾದಿ ಕಬೀರ್... ಓಹ್! ನಿಧಾನವಾಗಿ ಹೆಸರುಗಳು ಮರೆತು ಹೋಗುತ್ತಿದೆ. ಮೊನ್ನೆ ಮೊನ್ನೆ ಗುರುದಾಸ್ ಶಾನ್‌ಭಾಗ್ ಬೆಂಗಳೂರಿಗೆ ಬಂದಾಗ ಆತನ ಬಳಿ ಹೆಸರುಗಳನ್ನು ಮತ್ತೆ ಕೇಳಿ ತಿಳಿದುಕೊಂಡೆ. ರಾಜೇಶ್ ನಾಯಕ್ ಒಮ್ಮೆ ರಾಜರಾಜೇಶ್ವರಿ ನಗರದ ನನ್ನ ಮನೆಗೆ ಬಂದಿದ್ದ. ಮಸ್ಕತ್‌ನಲ್ಲಿ ನನ್ನನ್ನು ಒಮ್ಮೆ ಆತನ ಮನೆಗೆ ಊಟಕ್ಕೆ ಕರೆದಿದ್ದ. ಶಾನ್‌ಭಾಗ್ ಮತ್ತು ನಾನು ಹೆಚ್ಚು ಕಡಿಮೆ ಪ್ರತಿ ವರ್ಷ ಒಮ್ಮೆಯಾದರೂ ಭೇಟಿ ಆಗುವ ವಾಡಿಕೆ ಇದೆ. ಆತ, ಆತನ ಪತ್ನಿ ಮತ್ತು ಮಗಳು ಒಮ್ಮೆ ಮನೆಗೆ ಊಟಕ್ಕೆ ಬಂದಿದ್ದರು ನನ್ನ ಅಮ್ಮ ಜೀವಂತ ಇದ್ದಾಗ. ಏಕೆಂದರೆ ಅಮ್ಮ ಅವರನ್ನು ಮಸ್ಕತ್‌ನಲ್ಲಿ ಭೇಟಿ ಆಗಿದ್ದರು. ಪ್ರಕಾಶ್ ಎನ್ನುವ ನನ್ನ ಭಾವನವರ ಜೊತೆ ಕೆಲಸ ಮಾಡುತ್ತಿದ್ದಾತ ಆತನ ಜಿಎಂಸಿ ಕಾರಲ್ಲಿ ಒಮ್ಮೆ ಆಸ್ಟ್ರಿಚ್ ಫಾರ್ಮ್‌ಗೆ ಕರೆದೊಯ್ದಿದ್ದರು. ಉಷ್ಟ್ರಪಕ್ಷಿಗಳು ನೀಳ ಹೆಜ್ಜೆ ಇಡುತ್ತಾ ನಮ್ಮ ಪಕ್ಕದಲ್ಲೇ ನಿಲ್ಲುತ್ತಿದ್ದವು. ಎಳನೀರು ಗಾತ್ರದ ಅವುಗಳ ಮೊಟ್ಟೆಗಳನ್ನು ಹತ್ತಿರದಿಂದ ನಾವು ಬಾಗಿ ನೋಡಿದರೆ ಅವೂ ತಮ್ಮ ನೀಳ ಕುತ್ತಿಗೆಯನ್ನು ಬಾಗಿಸಿ ನಮ್ಮನ್ನು ನೋಡಿದ್ದು ಮುದ ತಂದಿತ್ತು.
Comments
Post a Comment