ಯತಿ ಸ್ವಂತೀ -278


07-10-2018
ಭಾವನವರೂ ಅಬೂಧಾಬಿಗೆ ಹೊರಟು ಹೋದರು. ಒಂಟಿಯಾದೆ. ಭಾವ ಹೇಳಿದ್ದರು. ನಿಮಗೆ ಫ್ರೆಂಡ್‌ಶಿಪ್ ಬೇಕಿಲ್ಲ. ನೀವು ಬಂದಿರೋದು ಮನೆಗೋಸ್ಕರ ಹಣ ಸಂಪಾದಿಸಕ್ಕೆ. ಸಿನಿಮಾಗೆ ಹೋಗಬೇಕು ಅಂದರೆ ಒಬ್ಬರೇ ಹೋಗಿ ಅಂದಿದ್ದರು. ಬೇವಫಾ, ಐತ್‌ರಾಜ್, ಕ್ಯಾಚ್ ಮೀ ಇಫ್ ಯೂ ಕ್ಯಾನ್ (ಇದು ನನ್ನ ಆಲ್ ಟೈಮ್ ಫೇವರಿಟ್ ಸಿನಿಮಾಗಳಲ್ಲಿ ಒಂದು)... ನನ್ನ ಅಪರಿಚಿತ ಫ್ಲ್ಯಾಟ್ ಮೇಟ್‌ಗಳು ಅಷ್ಫಾಕ್, ರಾಜ್ ಶೆಟ್ಟಿ, ಶಂಸುದ್ದೀನ್ ಒಮ್ಮೆ ನನ್ನನ್ನು ಅವರ ಜೊತೆ ಸಿನಿಮಾಗೆ ಕರೆದರು. 'ಹೆಲ್ ಬಾಯ್' ಇರಬೇಕು. ಒಟ್ಟಿಗೆ ಹೊಟೇಲ್‌ನಲ್ಲಿ ಊಟ ಮಾಡಿದೆವು. ಇನ್ನೊಂದು ಸಲ ಸಿನಿಮಾಗೆ ಹೋದೆವು. ನಾವು ನಾಲ್ವರೇ ಆ ಸಿನಿಮಾಗೆ ಬಂದಿದ್ದವರು. ಇನ್ನಿಬ್ಬರು ಬಂದರೆ ಮಾತ್ರ ಸಿನಿಮಾ ಶುರು ಮಾಡ್ತೀವಿ ಅಂದರು. ಕರೆಂಟ್ ಬಿಲ್ ಕಟ್ಟಕ್ಕೆ ಆರು ಟಿಕೆಟ್ ಖರ್ಚಾಗಬೇಕಂತೆ! ಇದೆಂತಾ ವಿಚಿತ್ರ ಅಂದುಕೊಂಡಿದ್ದೆ ಜುಲೈನಲ್ಲಿ  ನಾನು ಇಲ್ಲಿ ಒಂದು ದಿನ ಅದೇ ರೀತಿಯ ಸನ್ನಿವೇಶ ಎದುರಿಸುವ ವರೆಗೂ! ಒಂದು ಸಿನಿಮಾ ನೋಡಲು ಹೋದೆ. ಮಧ್ಯಾಹ್ನ ಒಂದೇ ಶೋ. ನನ್ನ ಹೊರತುಪಡಿಸಿ ಇನ್ನಿಬ್ಬರಿದ್ದರು. ಕನಿಷ್ಠ ಹತ್ತು ಜನ ಇರಬೇಕು ಎಂದರು. ಜನರು ಬರಲು ಕಾದೆವು. ಇನ್ಯಾರೂ ಬರಲಿಲ್ಲ. ಶೋ ರದ್ದಾಯಿತು... ಸುಮಾರು ಸಿನಿಮಾಗಳನ್ನು ನೋಡಿದೆ ಒಬ್ಬನೇ. 'ದೇವದಾಸ್' ಸಿನಿಮಾವನ್ನು ಥಿಯೇಟರ್‌ನ ಮೊದಲ ಸಾಲಿನಲ್ಲಿ ಕುಳಿತು ನೋಡಿದ್ದೆ. ಹಂ ದಿಲ್ ದೇ ಚುಕೇ ಸನಂ, ಕೊಯೀ ಮಿಲ್ ಗಯಾ ಇತ್ಯಾದಿ ಸಿನಿಮಾಗಳನ್ನು ನೋಡಿದೆ. ಊಟದ ವಿಷಯದಲ್ಲಿ ಒಂದು ಏಕತಾನತೆ ಅಳವಡಿಸಿಕೊಂಡೆ. ಲಿವ್ ಟು ಈಟ್ ಸಿದ್ಧಾಂತ ಅದು. ಬೆಳಗ್ಗೆ ನಾಲ್ಕು ಗಂಟೆಗೆ ಏಳುವುದು. ಸ್ನಾನ ಮುಗಿಸಿ ಐದಕ್ಕೆ ಕೃಷ್ಣ ಗುಡಿ. ಗೀತಾ ಅಥವಾ ವೇದಾಂತ ಪಠಣ. ಶ್ರೀ ವಿಷ್ಣು ಸಹಸ್ರ ನಾಮ ಶ್ರವಣ. ಆರತಿ ಸ್ವೀಕಾರ. ಪ್ರಸಾದ ಸೇವನ. ಸೋಮವಾರ ಬೆಳಗ್ಗೆ ಸ್ವಲ್ಪ ಬೇಗ ಅಲ್ಲಿಂದ ಶಿವನ ಗುಡಿಗೆ. ಹರಹರ ಶಿವಶಿವ ನಮಃಶಿವಾಯ ಕೇಳುವುದು. ಒಂದು ಮಲಯಾಳಿ ಮುಸ್ಲಿಂ ಹೊಟೇಲ್‌ನಲ್ಲಿ 3 ತೆಳ್ಳಗಿನ ದೋಸೆ. ಸಾಂಬಾರು. ಚಟ್ನಿಯನ್ನು ತೆಂಗಿನೆಣ್ಣೆಯಲ್ಲಿ ಮಾಡಿರುತ್ತಿದ್ದರು. ಸೋ... ನೋ! ಮನೆಯಲ್ಲಿ ದೋಸೆಗೆ ಸಾಂಬಾರ್... ನೋ! ಇಲ್ಲಿ ವಿಧಿಯಿಲ್ಲದೇ ರೂಢಿ. ನಂತರ ಆಫೀಸ್ ಏಳು ಗಂಟೆಗೆ. ಆಫೀಸ್ ಶುರು ಎಂಟು ಗಂಟೆಗೆ. ಒಂದು ಟೀ. ಹನ್ನೊಂದು ಗಂಟೆ ಸುಮಾರಿಗೆ ಕಸ್ಟಮರುಗಳ ಭೇಟಿ. ಒಂದೂವರೆ ಸುಮಾರಿಗೆ ಅದೇ ಹೊಟೇಲ್. ಒಂದು ಅನ್ನ. ಒಂದು ದಾಲ್. ಒಂದು ತರಕಾರಿ. ನಂತರ ಮನೆ. ಉದಯ ಟಿವಿಯಲ್ಲಿ ಯಾವುದಾದರೂ ಕನ್ನಡ ಸಿನಿಮಾದ ತಲೆ ಮತ್ತು ಬಾಲ ಅಲ್ಲದ ನಡುಭಾಗದಲ್ಲಿ ನೋಡುವುದು. ನಂತರ ಎದ್ದು ಸಿದ್ಧ. ಮೂರೂವರೆಗೆ ಆಫೀಸ್ ಶುರು. ಮೂರೂ ಇಪ್ಪತ್ತಕ್ಕೆ ಮನೆ ಬಿಡು. ಎರಡು ನಿಮಿಷ ಆಫೀಸ್‌ಗೆ ಡ್ರೈವ್. ನಾಲ್ಕೂವರೆ ವರೆಗೆ ಆಫೀಸ್. ಫೋನ್, ಪತ್ರ ವ್ಯವಹಾರ, ಬಾಸ್ ಅವರಿಂದ ಮಂಗಳಾರತಿ, ಅರ್ಚನೆ ಇತ್ಯಾದಿ. ನಂತರ ಕಸ್ಟಮರುಗಳ ಭೇಟಿ. ಸುಮಾರು ಎಪ್ಪತ್ತು ಕಿಮೀ ಓಡಾಟ ದಿನಾ. ನಂತರ ಬೇಗ ಹಿಂದಿರುಗಿದರೆ ಆಫೀಸ್. ಆದರೆ ಏಳೂ ಮುಕ್ಕಾಲು ಗಂಟೆಗೆ ಅದೇ ಹೊಟೇಲ್. ಮೂರು ತೆಳ್ಳಗಿನ ಚಪಾತಿ. ಒಂದು ಹಸಿ ಈರುಳ್ಳಿ. ಒಂದು ಹಸಿ ಕ್ಯಾರೆಟ್. ನಂತರ ಮನೆ. ಎಂಟೂವರೆ ಯಿಂದ ಒಂಬತ್ತು ಗಂಟೆ ವರೆಗೆ ಅದೇ ತಲೆ ಬುಡ ತಿಳಿಯದ ಉದಯ ಸಿನಿಮಾ. ಅಂದ ಹಾಗೆ ಮಿಡ್ ನೈಟ್ ಮಸಾಲ ಅಲ್ಲಿ ರಾತ್ರಿ ಹತ್ತೂವರೆಗೆ ಬರುತ್ತಿತ್ತು! ಮತ್ತದೇ ಸಂಜೆ ಮತ್ತದೇ ಬೇಸರ. ಮನಸ್ಸಿಗೆ ದುಃಖ ಉಕ್ಕಿ ಬರುತ್ತಿದ್ದುದು ಯಾವಾಗ ಎಂದರೆ ರಾತ್ರಿ ಊಟ ಮುಗಿಸಿ ಮನೆಯ ಬೀಗ ತೆರೆದು ದೀಪ ಹಾಕುವಾಗ. ಒಂಟಿತನದ ಬಿಸಿಗಾಳಿ ರಪ್ಪೆಂದು ಮೈಗೆ ಬಡಿಯುತ್ತಿತ್ತು... ಛೇ! ಏನಿದೀ ಬದುಕು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102