ಯತಿ ಸ್ವಂತೀ-301
29-10-2018
ಜೀವನ ಒಂದೇ ರೀತಿ ಇರಲು ಸಾಧ್ಯವಿಲ್ಲ ಅಲ್ಲವೇ? ಆಂಧ್ರಪ್ರದೇಶ (ಮತ್ತು ಈಗ ತೆಲಂಗಾಣ)ದಲ್ಲಿ ನಮ್ಮ ಕಂಪೆನಿಯ ಉತ್ಪನ್ನಗಳ ಬಗ್ಗೆ, ಆ ರಾಜ್ಯಗಳ ನಮ್ಮ ಕಂಪೆನಿಯ ಪಾರ್ಟ್‌ನರ್‌ಗಳ ಸಹಾಯದೊಂದಿಗೆ, ಅಲ್ಲಿನ ಸರ್ಕಾರೀ ಇಲಾಖೆಗಳೆರಡು ಪದವೀಧರ ಮಕ್ಕಳಿಗೆ ತರಬೇತಿಯನ್ನು ನೀಡಿದವು. ನಮ್ಮ ಕಂಪೆನಿಗೆ ಆ ತರಬೇತಿಗೆ ಹಣ ಬರಬೇಕಿತ್ತು. ಕಾರಣಾಂತರಗಳಿಂದ ಅದು ಸ್ಥಗಿತಗೊಂಡಿತ್ತು. ತೆಲುಗು ಭಾಷೆ ಬರುವ ನನಗೆ ಆ ಕೆಲಸವನ್ನು ಒಪ್ಪಿಸಿದರು. ಸರಿ, 2009ರ ಫೆಬ್ರುವರಿಯಲ್ಲಿ ನನ್ನ ತೆಲುಗು ನಾಡಿನ ಸಫರ್ (suffer!) ಶುರುವಾಯಿತು. ಮೊದಲು ಹೈದರಾಬಾದ್ ನಗರದ ನಮ್ಮ ಶಾಖೆಗೆ ಹೋದೆ. ಆಫೀಸ್ ಪಕ್ಕದಲ್ಲೇ ಇದ್ದ ಹೊಟೇಲ್ ನನ್ನ ಮನೆಯಾಗಿಬಿಟ್ಟಿತು! ಅದೆಷ್ಟು ಸಲ ಅಲ್ಲಿ ತಂಗಿದ್ದೆನೋ... ನನಗೇ ಲೆಕ್ಕ ಸಿಕ್ಕಿಲ್ಲ! ಹೊಟೇಲ್ ಮೇಲೆ ಇದ್ದ ಕಾನ್ಫರೆನ್ಸ್ ಹಾಲ್‌ನಲ್ಲಿ ಎಲ್ಲ ಊರುಗಳಿಂದ ಬಂದ ಪಾರ್ಟ್‌ನರ್‌ಗಳನ್ನು ಉದ್ದೇಶಿಸಿ ಮಾತನಾಡಿ ಅವರ ಸಹಾಯ ಕೋರಿದೆ.
ಹರಿಕಥೆಯ ಉಪಕಥೆ: ನನ್ನ ಭಾಷಣ ಮುಗಿಯುವ ಸಮಯದಲ್ಲಿ ಬೆಂಗಳೂರಿನ ನಮ್ಮ ಮನೆಯಿಂದ ತುರ್ತು ಕರೆ ಬಂದಿತ್ತು. ನಮ್ಮ ಘನ ಕೆಇಬಿಯವರು ನಮ್ಮ ಮನೆಯ ಕರೆಂಟ್ ಕಿತ್ತಿದ್ದರು. ಸಾಮಾನ್ಯವಾಗಿ ಹಾಸ್ಯಕ್ಕೆ ವ್ಯಂಗ್ಯ ಬೆರೆಸಿ ಜನರನ್ನು 'ಬೆಂಡ್' ಎತ್ತಿ ನನಗೆ ಅಭ್ಯಾಸ ಇದೆ ಎಂದು ತಿಳಿದಿದ್ದ ನನ್ನ ಪತ್ನಿ ನನಗೆ ಬೆಂಗಳೂರಿನಿಂದ ಫೋನ್ ಮಾಡಿದ್ದರು. ವಿಷಯ ಇದು... ಕೆಇಬಿಯವರಿಗೇ ನನ್ನ ಕರೆಂಟ್ ಬಿಲ್ ಹಣವನ್ನು ಬ್ಯಾಂಕ್‌ನಿಂದ ನೇರವಾಗಿ ಪಡೆಯಲು ಇ. ಸಿ.ಎಸ್. ಮಾಡಿದ್ದೆ. ಹಣ ಹೀಗೆ ಕಟ್ಟುತ್ತಿರುವ ಸಂಗತಿಯು ಮೀಟರ್ ರೀಡರ್‌ಗೆ ತಿಳಿದಿರಲಿಲ್ಲ. ಕಮ್ಯುನಿಕೇಶನ್ ಗ್ಯಾಪ್... ಸೋ... ಕರೆಂಟ್ ಕಿತ್ತಿದ್ದರು. ಹೈದರಾಬಾದ್‍ನಿಂದಲೇ 'ಪ್ರೀತಿಯ' ಮಾತಾಡಿ ಮತ್ತೆ ಕನೆಕ್ಷನ್ ಕೊಡಿಸಿದ ಹೆಗ್ಗಳಿಕೆ ನನ್ನದು!
Comments
Post a Comment