ಯತಿ ಸ್ವಂತೀ -274
03-10-2018
ಅಪಘಾತಗಳು ಕೆಲವು ನನ್ನಿಂದ ಜರುಗಿದವು. ಒಮ್ಮೆ ಪಾರ್ಕಿಂಗ್ ಪ್ಲೇಸ್‍ನಲ್ಲಿ ಕಾರಲ್ಲಿ ಕೂತು ರಿವರ್ಸ್ ಗೇರ್‌ನಲ್ಲಿ ಹೋಗುತ್ತಾ ಸೀಟು ಪೊಸಿಶನ್ ಅಡ್ಜಸ್ಟ್ ಮಾಡಲು ಹೋದೆ. ಹಠಾತ್ತಾಗಿ ಹ್ಯಾಂಡ್ ಬ್ರೇಕ್ ಹಾಕಿದೆ. ಹಾಗೆ ಹಾಕಿರದಿದ್ದರೆ ಓ ಮೈ ಗಾಡ್! ಇದನ್ನು ಬರೆಯಲು ನಾನು ಇರುತ್ತಿದ್ದೆನೋ ಇಲ್ಲವೋ! ಕಾರು ನಿಂತ ಕೆಲವೇ ಇಂಚುಗಳ ದೂರದಲ್ಲಿ ಸುಮಾರು ಆರು ಮೀಟರ್ ಹಳ್ಳ ತೆಗೆಯಲ್ಪಟ್ಟಿತ್ತು ಹೊಸ ಕಟ್ಟಡದ ಪಾಯಕ್ಕೆ. ಮತ್ತೊಮ್ಮೆ ಕಾರು ರಿವರ್ಸ್ ಮಾಡುತ್ತಾ ಕಸ್ಟಮರ್ ಆಫೀಸ್ ಗೇಟಿಗೆ ಕನ್ನಡಿ ಬಡಿದಿತ್ತು. ಮತ್ತೊಮ್ಮೆ ದೇವಸ್ಥಾನದಿಂದ ಬರುತ್ತಿದ್ದಾಗ ಸೀಟಿನಿಂದ ಪ್ರಸಾದ ಜಾರಿತ್ತು. ಅದರ ಕಡೆಗೆ ಒಂದು ಕ್ಷಣ ಗಮನ ಕೊಟ್ಟಿದ್ದಕ್ಕೆ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆಯುವುದರಲ್ಲಿದ್ದೆ. ಆ ಪುಣ್ಯಾತ್ಮ ನನ್ನ ಕಡೆ ದುರುಗುಟ್ಟಿ ನೋಡಿ ಮತ್ತೊಮ್ಮೆ ರೌಂಡೆಬೌಟ್ ರೌಂಡು ಹೊಡೆದು ನನ್ನನ್ನೂ ಕಾಪಾಡಿದ್ದ. ಅವನನ್ನೂ ಕಾಪಾಡಿಕೊಂಡಿದ್ದ! ಎಲ್ಲಕ್ಕಿಂತ ದೊಡ್ಡ ಆಕಸ್ಮಿಕ ಇನ್ನೂ ಬಹಳ ದಿನಗಳ ನಂತರ ಘಟಿಸಿತು. ಅದರ ವಿಷಯ ಆಮೇಲೆ. ಅಂದ ಹಾಗೆ ನನ್ನ ವಿಲ್ಲಾ ಕಾಂಪೌಂಡ್ ಡಿಕ್ಕಿ ಹೊಡೆದ ದಿನ ನನ್ನ ಬಾಸ್ ಯಾರೋ ಕಸ್ಟಮರ್‌ನನ್ನು ನಮ್ಮ ಸ್ಟೋರ್ ಇದ್ದ ಘಾಲಾದಿಂದ ಕರೆದು ತಾ ಎಂದಿದ್ದರು. ಕಾರು ಹತ್ತುವ ಮೊದಲು ನನ್ನ ಕಾರಿನ ಮುರಿದ ಮುಂಭಾಗ ನೋಡಿ ಆತ ನನ್ನತ್ತ ಬೀರಿದ ನೋಟ ಅವಿಸ್ಮರಣೀಯ! ಅಪಘಾತ ಫ್ರೆಶ್ ಆಗಿ ಆಗಿರುವ ಕಾರಿನಲ್ಲಿ ಕೂರಲು ಆತ ಬೆದರಿದ್ದು ನನಗೆ ಸ್ಪಷ್ಟವಾಗಿ ಕಂಡಿತ್ತು!
Comments
Post a Comment