ಯತಿ ಸ್ವಂತೀ -302
30-10-2018
ರೈಲುಗಾಡಿ ಇಲ್ಲವೇ ವಿಮಾನ ಪ್ರಯಾಣ ಓಕೆ... ಬಸ್ ಪ್ರಯಾಣ ನಾಟ್ ಓಕೆ ಅಂದಿದ್ದೆ ಆಫೀಸ್‌ನಲ್ಲಿ. ಏಕೆಂದರೆ ನನ್ನ ಸಹಿಷ್ಣುತೆ ಮತ್ತು ಬೆನ್ನು ಎರಡೂ ಬಸ್ ಪ್ರಯಾಣವನ್ನು ಒಪ್ಪುತ್ತಿರಲಿಲ್ಲ. ಆ ಸಲ ವಿಮಾನದಲ್ಲಿ ಹೈದರಾಬಾದ್‍ನ ಶಂಷಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿದು ಊರೊಳಕ್ಕೆ ಹೋಗಲು ಏರ್‌ಪೋರ್ಟ್‌ನಿಂದ ಬಸ್ ಹಿಡಿದು ಹೈದರಾಬಾದ್ ಇಮ್ಲಿಬಾನ್ ಬಸ್ ನಿಲ್ದಾಣಕ್ಕೆ ಬಂದೆ. ಕರೀಂನಗರಕ್ಕೆ ಬಸ್ ಹತ್ತಿದೆ. ಬಸ್ ಹೋಯಿತು ಹೋಯಿತು ಹೋಯಿತು. ಅಬ್ಬಾ... ಕೊನೆಗೂ ಕರೀಂನಗರ ತಲುಪಿತು. ಅಲ್ಲಿದ್ದ ಪಾರ್ಟ್‌ನರ್ ಆಫೀಸ್ ತಲುಪಿ ಆತನೊಂದಿಗೆ ಮಾತನಾಡಿ ಅಲ್ಲಿನ ಏಕೈಕ ದೊಡ್ಡ ಹೊಟೇಲ್‌ನಲ್ಲಿ ಇಳಿದುಕೊಂಡೆ. ನಿಜವಾಗಿಯೂ ಒಳ್ಳೆಯ ಹೊಟೇಲ್. ಹಾಸಿಗೆಯು ಹಂಸತೂಲಿಕಾತಲ್ಪ ಆ ಚಿಕ್ಕ ಊರಲ್ಲಿ! ಬೆಳಗ್ಗೆ ಬೇಗನೆದ್ದು ಆದಿಲಾಬಾದ್‌ಗೆ ಬಸ್ ಹತ್ತಿದೆ. ಕಾಡಿನ ನಡುವೆ ಬಸ್ ಹೋಗುತ್ತಿತ್ತು. ನಡುವೆ ಒಂದು ಬಲು ಸಣ್ಣ ಊರಿನಲ್ಲಿ ತಿಂಡಿಗೆಂದು ಬಸ್ ನಿಲ್ಲಿಸಿದ ಚಾಲಕ. ಉಡುಪಿ ಹೊಟೇಲ್! ಬಾಯಿ ತುಂಬಾ ಕನ್ನಡ ಮಾತಾಡಿದೆ ಹೊಟೇಲ್ ಮಾಲೀಕನೊಂದಿಗೆ. ರುಚಿಯಾದ ತಿನಿಸುಗಳನ್ನು ತಿಂದು ಮತ್ತೆ ಹೊರಟಾಗ ರಸ್ತೆಯಲ್ಲಿ ಮತ್ತೊಂದು ಉಡುಪಿ ಹೊಟೇಲ್ ಕಂಡೆ. ಈ ಹೊಟೇಲ್ ಮಾಲೀಕನ ಸಹೋದರನದಂತೆ ಅದು. ಈತ ತನ್ನ ಸಹೋದರನ ಹೊಟೇಲ್ ಬಗ್ಗೆ ಹೇಳಿದ್ದ. ಇತ್ತೀಚೆಗೆ ಪುಸ್ತಕವೊಂದರ ಬಿಡುಗಡೆಯ ಸಮಾರಂಭದಲ್ಲಿ ಕನ್ನಡಪ್ರಭದ ರವಿ ಹೆಗ್ಗಡೆ ಅವರು ಮಾತನಾಡಿ ಉಡುಪಿ ಹೊಟೇಲ್‍ಗಳು ಮೂಲೆ ಮೂಲೆಯಲ್ಲಿ ಇವೆ ಎಂದಾಗ ಈ ಎರಡು ಇಂಟೀರಿಯರ್ ಜಾಗಗಳಲ್ಲಿದ್ದ ಉಡುಪಿ ಹೊಟೇಲ್‌ಗಳು ನೆನಪಾದವು.
Comments
Post a Comment