ಯತಿ ಸ್ವಂತೀ-299

 
27-10-2018
ನನ್ನ ಹೆಸರು ಲೆಕ್ಚರ್ ಮಾಡುವವರ ಪಟ್ಟಿಯಲ್ಲಿ ಬಂದಿತು. ಬೆಂಗಳೂರಿನ ಸುಮಾರು ಸಂಖ್ಯೆಯ ಕಾಲೇಜುಗಳಲ್ಲಿ ಭಾಷಣ ಬಿಗಿದೆ. ಎದುರಿಗೆ ಇದ್ದವರು ಪ್ರಪಂಚವನ್ನೆಲ್ಲಾ ಸುಂದರವಾಗಿ ಕಾಣುವ ಹರೆಯದ ಮಕ್ಕಳು. ನಮ್ಮ ಬಿಗ್ಗೆಸ್ಟ್ ಬಾಸ್ ಒಂದು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಸಿದ್ಧ ಪಡಿಸಿ ಕೊಟ್ಟಿದ್ದರು. ಮಾರ್ಕೆಟಿಂಗ್ ಹೆಡ್ ಒಂದು ಪ್ರೆಸೆಂಟೇಶನ್ ಸಿದ್ಧ ಪಡಿಸಿ ಕೊಟ್ಟಿದ್ದರು. (ಇವರು ನನಗೆ ಕಂಪೆನಿ ಸೇರಿದಾಗಿನಿಂದ ಪರಿಚಿತರಾಗಿದ್ದರೂ ಇನ್ನೆರಡು ವರ್ಷಗಳಲ್ಲಿ ನನ್ನ ಬಾಸ್ ಆಗಲಿರುವರೆಂದು ಆಗ ನನಗೆ ತಿಳಿದಿರಲಿಲ್ಲ!) ದೊಡ್ಡೆಸ್ಟ್ ಬಾಸ್ ಅವರ ಪಿಪಿಟಿಯ ಗಾಂಭೀರ್ಯ ಮತ್ತು ಮಾರ್ಕೆಟಿಂಗ್ ಹೆಡ್ ಪಿಪಿಟಿಯ ಸಟಲ್ ಹ್ಯೂಮರ್ ಬೆರೆಸಿ, ಅದಕ್ಕೆ ನನ್ನ ಸ್ವಂತ ಮಸಾಲೆ ಹಾಕಿ ಮಾತಾಡುತ್ತಿದ್ದೆ. ಸಾಮಾನ್ಯವಾಗಿ ಅರವತ್ತು ಜನ ವಿದ್ಯಾರ್ಥಿಗಳು ಇರುತ್ತಿದ್ದರು. ಒಮ್ಮೆ ಒಂದು ಕಾಲೇಜಿನಲ್ಲಿ ಇನ್ನೂರು ಜನ ಇರುತ್ತಾರೆ ಎಂಬ ಸುದ್ದಿ ಬಂದಿತು. ತೀರಾ ಹೋಗಿ ನೋಡಿದರೆ 14 ಜನ ಇದ್ದರು! ಆದರೆ ನನ್ನ ಆಸಕ್ತಿ ಬದಲಾಗಬಾರದಲ್ಲ. ಅದೇ ಉತ್ಸಾಹದಿಂದ ಮಾತಾಡಿದೆ. ಇನ್ನೊಮ್ಮೆ ಇನ್ನೊಂದು ಕಾಲೇಜಿನಲ್ಲಿ 120 ವಿದ್ಯಾರ್ಥಿಗಳು ಇದ್ದರು. ಭಾಷಣ ಶುರು ಹಚ್ಚಿಕೊಂಡೆ. ಆಗ ಬಂದರು ಇನ್ನೂ 120 ವಿದ್ಯಾರ್ಥಿಗಳು! ಕೇಳಿಸಲ್ಲ ಅಂದರು ಕೊನೆಯ ಬೆಂಚಿನೋರು. ಮೈಕ್ ಹಿಡಿದು ಮತ್ತೆ ಶುರು ಮಾಡಿದೆ. ನನ್ನ ದೊಡ್ಡ ಬಾಸ್ ಒಬ್ಬರು ನನ್ನನ್ನು ಸ್ಟಾರ್ ಲೆಕ್ಚರರ್ ಎಂದರು ಎಲ್ಲರೆದುರೂ. ಅದನ್ನು ಕಾಂಪ್ಲಿಮೆಂಟ್ ಎಂದೇ ಸ್ವೀಕರಿಸಿದೆ! ತುಮಕೂರಿನಲ್ಲಿ ಎರಡು ಕಾಲೇಜು. ಒಂದರಲ್ಲಿ ನನ್ನ ಬಗ್ಗೆ ಪರಿಚಯ ಭಾಷಣ ಮಾಡಿ ಹೂಗುಚ್ಛ ಇತ್ತರು ಅಲ್ಲಿನ ವಿದ್ಯಾರ್ಥಿನಿಯರು. ಮಧ್ಯಾಹ್ನ ಸರ್ಕಾರೀ ಕಾಲೇಜಿನಲ್ಲಿ ಭಾಷಣ. ಕೆಲವು ತುಂಟ ಹುಡುಗರು ಮುಂದೆಯೇ ಕೂತು ಗಲಭೆ ಮಾಡತೊಡಗಿದರು. ನನ್ನ ಗಂಟೇನೂ ಹೋಗುವುದಿಲ್ಲ ಎಂದು ಖಾತ್ರಿ ಮಾಡಿಕೊಂಡು ಮೈಕಿನಲ್ಲಿ 'ಬಾಯ್ಮುಚ್ಚಿ ಕೇಳಿ, ಇಲ್ಲವೇ ಹೊರಗೆ ಹೋಗಿ' ಎಂದು ಗಟ್ಟಿಯಾಗಿ ಗದರಿದೆ. ಆಮೇಲೆ ಗಪ್‌ಚುಪ್... ಶಿವಮೊಗ್ಗದಲ್ಲಿ ಎರಡು ಕಾಲೇಜು, ಕೊಪ್ಪದಲ್ಲಿ ಒಂದು, ತೀರ್ಥಹಳ್ಳಿಯ ತುಂಗಾ ಕಾಲೇಜುಗಳಲ್ಲಿ ನನ್ನ ಭಾಷಣ ಇತ್ತು. ಕರೆಂಟ್ ಇರದಿದ್ದುದರಿಂದ ಪಿಪಿಟಿಯ ಸಹಾಯವಿಲ್ಲದೇ ತೀರ್ಥಹಳ್ಳಿಯ ತುಂಗಾ ಕಾಲೇಜಿನ ಆಡಿಟೋರಿಯಂನಲ್ಲಿ ಕೊನೆಯ ಬೆಂಚಿಗೆ ಕೇಳಿಸುವಂತೆ ಕಿರುಚಿದ್ದು ನೆನಪಿದೆ. ನನ್ನ ಧ್ವನಿ ಜೋರಾಗಿ ಇರುವುದರಿಂದ ನನಗೆ ಅದು ಸಾಧ್ಯವಾಯಿತು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102