ಯತಿ ಸ್ವಂತೀ -316
13-11-2018
ಬೆಳಗ್ಗೆ ಕಾಂಪ್ಲಿಮೆಂಟರಿ ಬ್ರೇಕ್‌ಫಾಸ್ಟ್ ತಟ್ಟೆಗೆ ತುಂಬಿಕೊಂಡು ಬಾಯಿಗೆ ಇನ್ನೇನು ಹಾಕಿಕೊಳ್ಳುವ ಸಮಯದಲ್ಲಿ ನನ್ನ ಎದುರು ಬಂದವರನ್ನು ಕಂಡು ಬಾಯಿ ಆ...ಎಂದು ತೆರೆದುಕೊಂಡಿತು! ಬಹಳ ಸಂತಸದಿಂದ ಮಾತಾಡಿಸಿದೆ. ನಾಲ್ಕು ವರ್ಷಗಳಾಗಿದ್ದವು ಅವರನ್ನು ಭೇಟಿ ಮಾಡಿ. 'ನೆನ್ನೆ ಒಬ್ಬನೇ ಬೋರ್ ಹೊಡೆಸಿಕೊಂಡೆ. ನೀನಿರುವೆ ಎಂದು ತಿಳಿದಿದ್ದರೆ ಚೆನ್ನಾಗಿತ್ತು' ಎಂದರು. ತೀರಾ ಪಕ್ಕಪಕ್ಕದ ಕೊಠಡಿ. ಒಂದೇ ಗೋಡೆ ಮಧ್ಯೆ. ಮರೋಚರಿತ್ರದಲ್ಲಿ ಏತೀಗ ಪೂವುನು... ಶಿವರಂಜನಿ ರಾಗದಲ್ಲಿ ಎಸ್ಪಿಬಿ ಹಾಡುವ ಸಮಯದಲ್ಲಿ ಆ ಸಿನಿಮಾದಲ್ಲಿ ನಾಯಕ ನಾಯಕಿ ಹೀಗೇ ಪಕ್ಕ ಪಕ್ಕದ ರೂಮಿನಲ್ಲಿ ಇರುತ್ತಾರೆ. ಅದನ್ನೇ ಹೇಳಿದೆ ನಾನು. ನಕ್ಕರು. ಅಂದೇ ಅವರು ಹೊರಟುಬಿಡುವವರಿದ್ದರು. ನಾನು ವಿಜಯನಗರಂಗೆ ಹೋಗಬೇಕಿತ್ತು. ಕಾಕಿನಾಡ ಬಳಿ ಅವರ ಶಾಲೆಯನ್ನು ನೋಡೆಂದರು. ಭಾರವಾದ ಮನದಿಂದ ನನ್ನ ಕೆಲಸಕ್ಕೆ ಹೊರಟುಬಿಟ್ಟೆ. ಧೋನಿ ನೂರೆಪ್ಪತ್ತೈದು ರನ್ ಚಚ್ಚಿದ್ದ ಸ್ಟೇಡಿಯಮ್ ಮೂಲಕ ವಿಜಯನಗರಂ ತಲುಪಿದೆ. ಎಲ್ಲೆಡೆ ಪಾರ್ಟ್‌ನರ್‌ಗಳು ಆದರದಿಂದ ಸ್ವಾಗತಿಸಿ, ಅವರ ವಿದ್ಯಾರ್ಥಿಗಳಿಗೆ ನಾನು ಸೂಕ್ತ ಸಲಹೆಗಳನ್ನು ನೀಡಲು ಅನುವು ಮಾಡಿಕೊಡುತ್ತಿದ್ದರು. ಸರ್ಕಾರಿ ಅಧಿಕಾರಿಗಳ ಬಳಿ ನಮಗೆ ಬರಬೇಕಾದ ಹಣದ ಬಗ್ಗೆ ಮಾತನಾಡಿ ವಿಶಾಖಪಟ್ಟಣಂಗೆ ವಾಪಸ್ ಬಂದೆ. ಅವರು ಹೊರಟುಬಿಟ್ಟಿದ್ದರು ಹೈದರಾಬಾದ್‌ಗೆ. ಯಾರೈ ಅವರ್ ಎಂದು ಅರಿವಾಗಿರಬೇಕು ನಿಮಗೆ. ನನ್ನ ಫೇವರಿಟ್ ಲೇಖಕ ಯಂಡಮೂರಿ ವೀರೇಂದ್ರನಾಥ್! ಮತ್ತೆ ಯಾವಾಗಲಾದರೂ ಈ ವಿಷಯವನ್ನು ವಿವರವಾಗಿ ಹೇಳುತ್ತೇನೆ.
Comments
Post a Comment