ಯತಿ ಸ್ವಂತೀ -313


10-11-2018
ನನ್ನ ದೊಡ್ಡ ಟ್ರಿಪ್‌ನ ಬಗ್ಗೆ ನೋಡೋಣ. ನಾನು ಊರುಗಳ ಪಟ್ಟಿ ಮಾಡಿಕೊಂಡು ಬಾಸ್ ಬಳಿ ಹೋದೆ. ಅವರು ಅದನ್ನು ಒಮ್ಮೆ ನೋಡಿ, ಯಾಕೆ ಉಳಿದ ಜಿಲ್ಲೆಗಳನ್ನು ಕೂಡ ನೋಡಿ ಬರಬಾರದು? ಎಂದರು. ಸರಿ, ನಮ್ಮ ಟಿಕೆಟಿಂಗ್ ಸೆಲ್‌ಗೆ ಹೋದೆ. ನನ್ನ ಟೂರು ನೋಡಿ ಬೆರಳು ಕಚ್ಚಿದ (ಅವನದೇ!). ಒಟ್ಟಿನಲ್ಲಿ ಎಲ್ಲ ಪ್ರಯಾಣಗಳ ಟಿಕೆಟ್ ಪಡೆದು ಹೊರಟೆ. ರಾತ್ರಿ ಯಶವಂತಪುರದಿಂದ ಸಿಕಂದರಾಬಾದ್‌ಗೆ ಹೊರಟೆ. ಯಥಾಪ್ರಕಾರ ನನ್ನ ಗೆಳೆತನ ನನ್ನ ಮೊಬೈಲ್‌ಗೆ ತುಂಬಿಕೊಂಡಿದ್ದ ರಫಿ ಲತಾ ಕಿಶೋರ್ ಮುಕೇಶ್ ರಾಜಣ್ಣ ಪಿಬಿಎಸ್ ಎಸ್ಪೀಬಿ ಜಾನಕಿ ಸುಶೀಲ ಮುಂತಾದವರ ಮಧುರ ಗಾನ. ಬೆಳಗ್ಗೆ ಅದೇ ಹರ್ಷ ಹೊಟೇಲ್. ಶುಚಿ ರುಚಿ ತಿಂಡಿ. ನಡೆದು ನಮ್ಮ ಹೈದರಾಬಾದ್ ಆಫೀಸ್ ತಲುಪಿದೆ. ಅಲ್ಲಿಯೂ ಎಲ್ಲ ಯುವಕರೂ ದೋಸ್ತ್‌ಗಳು. ಪಟಪಟನೆ ತೆಲುಗು ಮಾತನಾಡಿದರು. ನಾನೂ ಅಷ್ಟೇ ತೆಲುಗು ಸುಲಭವಾಗಿ ಬಳಸಿದೆ. ಅಂದು ಬೆಳಗ್ಗೆ ಸರ್ಕಾರೀ ಕಛೇರಿಗಳ ಮುಖ್ಯ ಶಾಖೆಯ ಅಧಿಕಾರಿಗಳ ಭೇಟಿ ಮಾಡಿದೆ. ಮರುದಿನ ಬೆಳಗ್ಗೆ ಸಿಕಂದರಾಬಾದ್‌ಗೆ ಹೋಗಿ ಅಲ್ಲಿ ಕೃಷ್ಣ ಎಕ್ಸ್‌ಪ್ರೆಸ್ ಏರಿ ವಾರಂಗಲ್ ತಲುಪಿದೆ. ಕೆಲಸ ಮುಗಿಸಿ ಆ ಊರಲ್ಲಿದ್ದ ಕಾಕತೀಯ ಗುಡಿಗೆ ಹೋದೆ. ಸಾವಿರ ಕಂಬಗಳ ದೇವಾಲಯ ಅದು. ನಮ್ಮ ಮೂಡಬಿದರೆಯ ಸಾವಿರ ಕಂಬದ ಬಸದಿಗೂ ಇದಕ್ಕೂ ಕಂಬಗಳ ಜೋಡಣೆಯಲ್ಲಿ ಬಹಳ ವ್ಯತ್ಯಾಸ ಇದೆ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102