ಯತಿ ಸ್ವಂತೀ -311


08-11-2018
ಯತೀ... ಒಂದು ರೌಂಡ್ ಟ್ರಿಪ್ ರೆಡಿ ಮಾಡು ಎಂದರು ನನ್ನ ಬಾಸ್. 
ಇದಕ್ಕೆ ಮುಂಚೆ ನನ್ನ ತೆಲುಗು ನಾಡಿನ ಪಯಣ ಇನ್ನೂ ಅನೇಕ ಸಲ ಆಗಿರುವುದು ಈಗ ನೆನಪಾಗುತ್ತಿದೆ. 
ಇದು ಹೆಡ್ ಆಫೀಸ್‌ನಲ್ಲಿ ಇದ್ದ ಸಮಯ. ತಿರುಮಲ ತಿರುಪತಿ ದೇವಸ್ಥಾನದವರಿಗೆ ನಮ್ಮ ಉತ್ಪಾದನೆಯನ್ನು ವಿಶೇಷವಾಗಿ ಮಾರ್ಪಡಿಸಿ ಮಾರಾಟ ಮಾಡುವ ಆರ್ಡರ್ ಬಂದಿತು. ಮಾರ್ಕೆಟಿಂಗ್ ಇಲಾಖೆಯ ನಾನು ಆ ಪ್ರಾಜೆಕ್ಟ್ ಲೀಡರ್ ಆದೆ. ಬಸ್‌ನಲ್ಲಿ ತಿರುಪತಿಗೆ ಹೋಗಿ ಹೊಟೇಲ್‌ನಲ್ಲಿ ರೂಂ ಮಾಡಿ ಅಲ್ಲಿಯೇ ಇದ್ದ ಟಿಟಿಡಿ ಆಫೀಸ್‌ನಲ್ಲಿ ಡಿಸ್ಕಶನ್.  ಹುಂಡಿಗೆ ಹಾಕಲ್ಪಟ್ಟ ನೋಟುಗಳನ್ನು ಬ್ಯಾಂಕ್‌ಗೆ ಡಿಪಾಜಿಟ್ ಮಾಡುವ ವೈಖರಿಯೇ ವಿಶಿಷ್ಟ. ಅಲ್ಲಿನ ಮುಖ್ಯ ಹಣಕಾಸು ಅಧಿಕಾರಿ ನಮ್ಮನ್ನು ಬೆಳಗ್ಗೆ ಒಮ್ಮೆ ಭೇಟಿ ಮಾಡಿ ಮತ್ತೆ ಅಂದಿನ ಮೀಟಿಂಗನ್ನು ರಾತ್ರಿ ಎಂಟಕ್ಕೆ ಇಟ್ಟುಕೊಳ್ಳುತ್ತಿದ್ದರು. ಏಕೆಂದು ನಂತರ ತಿಳಿಯಿತು. ಆತ ಮೊದಲು ಪ್ರೈವೇಟ್ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿ ಆಗಿದ್ದರೆಂದು... ಆದತ್ ಸೇ ಮಜಬೂರ್! ನಮ್ಮ ಈ ಸ್ವಕಾರ್ಯದ ನಡುವೆ ಸ್ವಾಮಿಕಾರ್ಯ ಮಾಡಬೇಕಿತ್ತಲ್ಲವೇ! ಟಿಟಿಡಿಯಲ್ಲಿ ಅನೇಕ ಇಲಾಖೆಗಳು. ಶಾಲೆ, ಕಾಲೇಜು, ಆಸ್ಪತ್ರೆ, ಲಾಡು, ಆಭರಣ, ನೋಟುಗಳು, ಚಿಲ್ಲರೆ ನಾಣ್ಯಗಳು ಮತ್ತು ಇನ್ನೂ ಅನೇಕ ಇಲಾಖೆಗಳು. ಪ್ರತಿ ಇಲಾಖೆಗೆ ಹೋದಾಗಲೂ ಆ ಇಲಾಖೆಯ ಮುಖ್ಯಸ್ಥರ ಬಳಿ ಒಂದು ಪತ್ರ ಪಡೆಯುವುದು. ತಿರುಮಲ ಬೆಟ್ಟವನ್ನು ಬಸ್ ಹಿಡಿದು ಹತ್ತುವುದು. ಅಲ್ಲೊಂದು ಮನೆ-ಆಫೀಸ್‍ನಲ್ಲಿ ನಾವು ತಂದ ಪತ್ರಕ್ಕೆ ಬದಲಾಗಿ ಎಷ್ಟು ಜನ ಇರುವೆವೋ ಅಷ್ಟು ಜನರಿಗೆ ತಲಾ ಎಪ್ಪತ್ತೈದು ರೂಪಾಯಿಗಳ ಅನುಮತಿ ಚೀಟಿಗಳನ್ನು ಪಡೆಯುವುದು.  ರಾತ್ರಿ ಸುಮಾರು ಒಂಬತ್ತೂವರೆಗೆ ಸೆಲ್ಲರ್ ಮೂಲಕ ತಿಮ್ಮಪ್ಪನ ದರುಶನ ಮಾಡುವುದು. ಪುನೀತರಾಗಿ, ಧನ್ಯರಾಗಿ ಹೊರಬಂದು ಬೆಟ್ಟದಿಂದ ಕೆಳಕ್ಕೆ ಒಂದು ಬಸ್ ಮತ್ತು ಅಲ್ಲಿಂದ ಬೆಂಗಳೂರಿಗೆ ಕರಾರಸಾಸಂ ಬಸ್ ಹಿಡಿಯುವುದು. ಬೆಳಗಾಗೋ ವೇಳೆಗೆ ಬೆಂಗಳೂರು. ಮನೆ. ಮತ್ತೆ ಮಾಮೂಲಿ ಸಮಯಕ್ಕೆ ಆಫೀಸ್.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102