ಯತಿ ಸ್ವಂತೀ -310


07-11-2018
ನಾಂಪಲ್ಲಿ ಸ್ಟೇಶನ್ ಬಳಿಯಿದ್ದ ಹೈದರಾಬಾದ್ ಹರ್ಷ ಹೊಟೇಲ್ ನನ್ನ ಸ್ಥಾವರವಾಗಿತ್ತು. ಬೆಳಗ್ಗೆ ತಿಂಡಿ ಹೇಗೂ ಕಾಂಪ್ಲಿಮೆಂಟು. ಅಲ್ಲೇ ತಗೊಳ್ತಿದ್ದೆ. ಅಲ್ಲಿದ್ದ ಕನ್ನಡ ಬಲ್ಲ ಎಲ್ಲ ವೆಯ್ಟರುಗಳೂ ನನ್ನನ್ನು ಆದರದಿಂದ ಮಾತನಾಡಿಸುತ್ತಿದ್ದರು. ಕೆಲವು ದಿನಗಳ ರಾತ್ರಿ ಊಟಕ್ಕೆ ನನ್ನ ಅದೇ ಗೆಳೆಯ ಬರುತ್ತಿದ್ದ. ಅವನ ಬೈಕ್ ಅಥವಾ ಕಾರಿನಲ್ಲಿ ಹೈದರಾಬಾದ್ ಸುತ್ತುತ್ತಿದ್ದೆವು. ತೆಲುಗಿನವರಂತೆ ನಾನೂ ಸಿನಿಮಾಪ್ರಿಯ. ಸೋ ಅನೇಕ ಸಿನಿಮಾಗಳನ್ನು ನೋಡಿದ ನಂತರ ರಾತ್ರಿ ಹೊಟೇಲ್ ಡ್ರಾಪ್ ಮಾಡಿ ಹೊರಟುಬಿಡುತ್ತಿದ್ದ. ಒಮ್ಮೆ ಕಾಚಿಗೂಡದಿಂದ ಬೆಂಗಳೂರಿಗೆ ರೈಲು ಟಿಕೆಟ್ ಬುಕ್ ಮಾಡಿಸಿದ್ದೆ. ನನ್ನ ಕಂಪೆನಿಯಲ್ಲಿ ಟಿಕೆಟ್ ಬುಕಿಂಗ್ ಮಾಡುತ್ತಿದ್ದ ಹುಡುಗರು ಮಹಾ ಎಫಿಶಿಯೆಂಟ್.ನಾನೂ ಕನ್‌ಫರ್ಮ್ಡ್ ಟಿಕೆಟ್ ಪಡೆಯದೇ ಹೊರಡುತ್ತಿರಲಿಲ್ಲ. ಹಿಂದಿನ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಪ್ರಸಾದ್ ಸಿನಿಮಾಸ್‍ನಲ್ಲಿ ಯಾವುದೋ ತೆಲುಗು ಸಿನೆಮಾ ನೋಡಿ ಬರುವಾಗ ಹುಸೇನ್ ಸಾಗರ್ ಹಿಂಭಾಗಕ್ಕೆ ಬಂದಾಗ (ಬುದ್ಧನ ಪ್ರತಿಮೆಯ ಬೆನ್ನಿನ ಭಾಗದ ಕೆರೆಗೆ ಹಿಂಭಾಗ ಎನ್ನುತ್ತಿದ್ದೇನೆ!) ಅಲ್ಲಿ ಒಂದು ಕ್ರೇನ್ ಮತ್ತು ಅನೇಕ ಲಾರಿಗಳನ್ನು ಕಂಡೆ. ಪ್ರತಿ ಲಾರಿಯ ಮೇಲೆ ಗಣೇಶ ವಿಗ್ರಹ. ಸರತಿಯಲ್ಲಿ ಕೆರೆಯಲ್ಲಿ ಪ್ರತಿಮೆಯ ವಿಸರ್ಜನೆಗೆ ಕಾದಿದ್ದರು. ಮರುದಿನ ಸಂಜೆ ಆರು ಗಂಟೆ ಸುಮಾರಿಗೆ ನನ್ನ ರೈಲು ಬೆಂಗಳೂರಿಗೆ. ನನ್ನ ಗೆಳೆಯ ಬಂದ. ಸ್ಥಳೀಯ ಸುದ್ದಿ ಛಾನೆಲ್ ಆನ್ ಮಾಡಿದ. ಒಂದೊಂದೇ ರಸ್ತೆ ವಾಹನ ಸಂಚಾರಕ್ಕೆ 'ಬಂದ್' ಆಗುತ್ತಾ ಇದ್ದುದನ್ನು ಟಿವಿ ಲಂಗರು ಮನುಷ್ಯ ವಿವರಿಸಿ ಆ ರಸ್ತೆಯ ವೀಡಿಯೋ ತೋರಿಸುತ್ತಿದ್ದ. ನನ್ನ ಗೆಳೆಯ ನನ್ನನ್ನು ಮಧ್ಯಾಹ್ನ ಎರಡೂ ಮುಕ್ಕಾಲು ಗಂಟೆಯ ಸುಮಾರಿಗೆ ಹೊರಡಿಸಿದ. ಕಾರಿನಲ್ಲಿ ಆ ಸಂದಿ ಈ ಸಂದಿ ತಿರುಗಿ ಮೂರೂವರೆ ಗಂಟೆಗೆ ಕಾಚಿಗೂಡ ಸ್ಟೇಶನ್ ತಲುಪಿಸಿ ವಾಪಸ್ ಹೊರಟುಬಿಟ್ಟ. ಏಕೆಂದರೆ ಅವನು ಟ್ರಾಫಿಕ್ ಜಾಮ್‌ಗೆ ಸಿಗದೇ ಅವನ ಮನೆ ತಲುಪಬೇಕಲ್ಲವೇ! ಹೀಗೆ ನಾನು ಅಂತರರಾಷ್ಟ್ರೀಯ ವಿಮಾನ ಹತ್ತಲು ಮೂರು ಗಂಟೆಗಳ ಮೊದಲು ಏರ್‌ಪೋರ್ಟ್ ತಲುಪುವಂತೆ ರೈಲ್ವೆ ನಿಲ್ದಾಣವನ್ನು ತಲುಪಿದ್ದೆ! ಇನ್ನು ನನ್ನ ಊ.... ದ್ದದ ಪ್ರಯಾಣಕ್ಕೆ ಮರಳೋಣ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102