ಯತಿ ಸ್ವಂತೀ -309


06-11-2018
ನನ್ನ ಸೀಟು ರೀಜಿನಲ್ ಆಫೀಸ್‌ನಲ್ಲಿ. ಆದರೆ ನನ್ನ ಬಾಸ್ ಹೆಡ್ ಆಫೀಸಿನಲ್ಲಿ! ಮುಂಬೈನಲ್ಲಿ ಬಾಸ್ ಇರುವುದಕ್ಕಿಂತ ಇದು ಉತ್ತಮ. ಬೇಕಾದಾಗ ಹೊಸೂರು ರಸ್ತೆಯ ಆಫೀಸಿಗೆ ಹೋಗಿ ಬಾಸ್‍ನ ಭೇಟಿ ಸುಲಭವಾಗಿ ಆಗಬಹುದಿತ್ತು! ಅದು ಆಗಸ್ಟ್ 2009. ಇನ್ನೊಂದು ಟೂರ್ ಮಾಡಿಬಿಡು ಎಂದರು ಬಾಸ್. ಆ ಟೂರ್ ಮಾಡುವಾಗ ನನಗೆ ಜೀವನವೇ ಗಲಿಬಿಲಿ ಎನಿಸಿತ್ತು. ಬೆಳಗ್ಗೆ ಕಣ್ಣು ಬಿಟ್ಟೊಡನೆ ನಾನು ಎಲ್ಲಿದ್ದೇನೆ ಎನ್ನುವ ಕನ್‌ಫ್ಯೂಶನ್. ಬಸ್‌ನಲ್ಲಿರುವೆನಾ? ರೈಲಿನಲ್ಲಿರುವೆನಾ? ಹೊಟೇಲ್‌ನಲ್ಲಿರುವೆನಾ? ಹೊಟೇಲ್ ಆದರೆ ಯಾವೂರ ಹೊಟೇಲ್? ಮೊದಲೇ ಹೇಳಿದಂತೆ ನಿಜಕ್ಕೂ ಅದೊಂದು ಗಲಿಬಿಲಿ ಟೂರ್! ನನ್ನ ಪ್ರಯಾಣ ಬೆಂಗಳೂರಿನಿಂದ ಆರಂಭವಾಯಿತು. ರಾತ್ರಿ ರೈಲುಗಾಡಿ ಹತ್ತಿ ಹೈದರಾಬಾದ್‌ಗೆ ಹೊರಟೆ.
ಅರೆ... ಒಂದು ವಿಷಯ ಮರೆತುಬಿಟ್ಟೆ. ಅದನ್ನು ಹೇಳಿ, ನಂತರ ಈ ಟೂರ್ ಮುಂದುವರಿಸುತ್ತೇನೆ. ಒಮ್ಮೆ ಹೈದರಾಬಾದ್‌ಗೆ ಹೋದಾಗ ಪರಸ್ಪರ ಪರಿಚಿತರ ಮೂಲಕ ಯುವಕನೊಬ್ಬನ ಪರಿಚಯವಾಯಿತು. ಅವನೊಂದಿಗೆ ಒಮ್ಮೆ ಹರ್ಷ ಹೊಟೇಲ್‌ನಲ್ಲಿ ಊಟ ಮಾಡುತ್ತಿರುವಾಗ ವೆಯ್ಟರ್ ಒಬ್ಬ ನನ್ನ ಯುವ ಗೆಳೆಯನನ್ನು ಸಾರ್ ನೀವು ಹೀರೋನಾ ಎಂದು ಕೇಳಿದ್ದ! ಆ್ಯಕ್ಚುಯಲೀ ಆತ ಸಿನಿಮಾ ಒಂದರಲ್ಲಿ ಪುಟ್ಟ ಪಾತ್ರ ವಹಿಸಿದ್ದ. ಇನ್ನೊಮ್ಮೆ ಬೆಳಗ್ಗೆ ಅದೇ ಹೊಟೇಲ್‌ನಲ್ಲಿ ತಿಂಡಿ ತಿನ್ನುವಾಗ ನಿರ್ದೇಶಕ ನಾಗಾಭರಣ ಸಿಕ್ಕಿದ್ದರು. ನಿಮ್ಮ ಹತ್ತಿರ ಜಗಳ ಆಡಕ್ಕೆ ಏಳು ವರ್ಷಗಳ ಕಾಲದಿಂದ ಕಾದಿದ್ದೇನೆ ಎಂದೆ. ಅವರಿಗೆ ಆಶ್ಚರ್ಯ. ವಿಷಯ ಏನೆಂದರೆ ನಿರಂಜನ ಅವರ ಬನಶಂಕರಿ ಕಾದಂಬರಿ ಆಧಾರಿತ ಅವರ ಟಿವಿ ಧಾರಾವಾಹಿಗೆ ಜೀವನ್ಮುಖಿ ಅಂತ ಹೆಸರಿಟ್ಟಿದ್ದರು. ಅದು ನನ್ನ ಕಾದಂಬರಿಯ ಹೆಸರು. ಈಗ ನನ್ನ ಆ ಕಾದಂಬರಿ ಸಿನಿಮಾ ಆದರೆ ಅದಕ್ಕೇನು ಹೆಸರಿಡುವುದು ಎಂದಿದ್ದೆ. 2002ರಲ್ಲಿ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದೆ. ಅವರು ಕಾಸರಗೋಡುನಲ್ಲಿ ಆ ಧಾರಾವಾಹಿ ಶೂಟಿಂಗ್‌ಗೆ ಹೊರಟುಹೋದರು. ನಿರುದ್ಯೋಗಿ ಆಗಿದ್ದ ನಾನು ಮಸ್ಕತ್‌ನಲ್ಲಿ ಉದ್ಯೋಗ ಸಿಕ್ಕಿತೆಂದು ಅಲ್ಲಿಗೆ ಹೊರಟುಹೋದೆ. ಅದಾಗಿ ಏಳು ವರ್ಷಗಳ ನಂತರ ನನಗೆ ಹೈದರಾಬಾದ್‌ನಲ್ಲಿ ಸಿಕ್ಕಿದ್ದರು ನಾಗಾಭರಣ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102