ಯತಿ ಸ್ವಂತೀ -308
05-11-2018
ಗೊಲ್ಲಪೂಡಿ ಎನ್ನುವ ಜಾಗ ನಮ್ಮೂರಿಗೆ ಯಲಹಂಕ ಹೇಗೋ ಹಾಗೆ ಅದು ವಿಜಯವಾಡಕ್ಕೆ. ತೆಲುಗು ನಟ ಮಾರುತಿ ರಾವ್ ಈ ಊರಿನ ಹೆಸರನ್ನು ಪ್ರಸಿದ್ಧ ಮಾಡಿದರು. ನಮ್ಮ ಸಂಪರ್ಕ ಹೊಂದಿದ್ದ ಸರ್ಕಾರಿ ಅಧಿಕಾರಿಯನ್ನು ನೋಡಲು ಅಲ್ಲಿಗೆ ಅನೇಕ ಸಲ ಆಟೋದಲ್ಲಿ ಹೋಗುತ್ತಿದ್ದ ನೆನಪು.
ಒಮ್ಮೆ ವಿಜಯವಾಡದಿಂದ ಹೌರಾ ಮೆಯಿಲ್‌ನಲ್ಲಿ ಹೊರಟೆ. ಯಾವ ಪ್ಲಾಟ್‌ಫಾರಂ ಎಂದು ಬರೆದಿರಲಿಲ್ಲ. ವಿಚಾರಣೆಯಲ್ಲಿ ಕೇಳಿದಾಗ 4 ಅಥವಾ 7 ನೇ ಪ್ಲಾಟ್‌ಫಾರಂ ಅಂದಳಾ ಪುಣ್ಯಾತ್ಗಿತ್ತಿ! ಅಲ್ಲಿ ಹೆಚ್ಚು ಹೊತ್ತು ಆ ರೈಲು ನಿಲ್ಲದು. 'ಅಲ್ರೀ ಹ್ಯಾಗ್ರೀ ಕೊನೆಯ ಘಳಿಗೆಯಲ್ಲಿ ಓಡೋದು?' ಎಂದೆ. 'ಫುಟ್ ಓವರ್ ಬ್ರಿಡ್ಜ್ ಮೇಲೆ ನಿಲ್ಲಿ. ಘೋಷಣೆ ಕೇಳಿಸಿಕೊಂಡು ಆ ಪ್ಲಾಟ್‌ಫಾರಂ ತಲುಪಿ ರೈಲು ಹತ್ತಿ' ಎಂದು ಸಲಹೆ ನೀಡಿದಳು!
ಮತ್ತೊಬ್ಬ ಅಧಿಕಾರಿ 'ಬಂದರು'ನಲ್ಲಿ ಇದ್ದಾರೆ ಎಂಬ ವಿಷಯ ತಿಳಿಯಿತು. ಮಲ್ಲಾದಿ ಅವರ ಕೆಲವು ಕಾದಂಬರಿಗಳಲ್ಲಿ ಈ ಹೆಸರು ಓದಿದ್ದೆ. 'ಬಂದರು' ಎನ್ನುವ 'ಬಂದರು'ವಿನ ನಿಜವಾದ ಹೆಸರು ಮಛಲೀಪಟ್ಟಣಂ. ಮಛಲಿ ಅಂದರೆ ಗೊತ್ತಲ್ವಾ? ಮೀನು! ಟ್ಯಾಕ್ಸಿಯಲ್ಲಿ ಸುಮಾರು ಎರಡೆರಡು ಗಂಟೆಗಳ ಪ್ರಯಾಣ ಎರಡೂ ಕಡೆ. ಭಾರೀ ಸ್ಟ್ರೆಯಿನ್ ಆದ ಪಯಣ.
ಹೀಗೇ ಅನೇಕ ಸಲ ಆದಿಲಾಬಾದ್, ಕರೀಂನಗರ, ವಿಜಯವಾಡಗಳಿಗೆ ಹೋದೆ. ಅಲ್ಲಿನ ಸರ್ಕಾರೀ ಅಧಿಕಾರಿಗಳ ಬಳಿ ವಾಚಾಮಗೋಚರ ಬೈಯಿಸಿಕೊಂಡು ನನ್ನ ಪ್ರತಿಕ್ರಿಯೆಯನ್ನು ಕೇವಲ ನಗುವಿನ ರೂಪದಲ್ಲಿ ನೀಡಿದೆ. ಆ ಸರ್ಕಾರಿ ಕಛೇರಿಗಳಿಂದ ಕಂಪೆನಿಯ ಹಣ ತರುವುದಷ್ಟೇ ನನ್ನ ಏಕೈಕ ಗುರಿಯಾಗಿತ್ತು. ಈ ತಿರುಗಾಟಗಳಿಂದ ಸುಸ್ತಾಗಿದ್ದೆ.
ಆದರೆ, ಇವುಗಳ 'ಅಮ್ಮನಂತಹ' ಟೂರ್ ನನಗಾಗಿ ಕಾದಿತ್ತು.
Comments
Post a Comment