ಯತಿ ಸ್ವಂತೀ -305
02-11-2018
ನಾನು ಸರಿ ಸುಮಾರು ಐದು ತಿಂಗಳು ವಿಜಯವಾಡದಲ್ಲಿದ್ದೆ. ಅಲ್ಲಿಂದ ಅನೇಕ ಇಂಟೀರಿಯರ್ ಊರುಗಳಿಗೆ ಹೋದೆ. ಏಲೂರು, ನೂಜಿವೀಡು, ಗುಡಿವಾಡ, ಗೊಲ್ಲಪೂಡಿ, ಮುಂತಾದ ಊರುಗಳು.
ಆ ಪುಟ್ಟ ಊರುಗಳಲ್ಲಿ 'ಜಾಬ್ ಮೇಳ' ಮಾಡಿದೆವು. ಅಲ್ಲೆಲ್ಲ ಮದುವೆಗಳು ಸಣ್ಣ ಪ್ರಾಯದಲ್ಲಿ ಜರುಗುವುದರಿಂದ ಮಕ್ಕಳು ಪದವಿ ಪಡೆದ ಸಮಯದಲ್ಲಿ ತಾಯ್ತಂದೆಯರ ಉದ್ಯೋಗದ ಸರ್ವೀಸ್ ಇನ್ನೂ ಹಲವು ವರ್ಷಗಳ ಕಾಲ ಇದ್ದಿರುತ್ತಿತ್ತು. ಅದಕ್ಕೇ ಮಕ್ಕಳನ್ನು ಬಹಳ ದೂರಕ್ಕೆ ಕೆಲಸಕ್ಕೆ ಕಳಿಸಲು ಇಚ್ಛಿಸುತ್ತಿರಲಿಲ್ಲವೇನೋ... ಫ್ರೀ ತರಬೇತಿ ಓಕೆ ಆಗಿತ್ತು ಅವರಿಗೆ. ಅವರೂರುಗಳಿಗೇ ಹೋಗಿ ಕೆಲಸಕ್ಕೆ ಸೇರಿ ಎಂದರೂ ಊಹೂಂ. ಆ ಸಮಯದಲ್ಲಿ మగధీర ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಪಾಪ... ರಾಂಚರಣ್ ನನಗೆ ಉದಾಹರಣೆಯಾಗಿ ಸಿಲುಕಿಕೊಳ್ಳುತ್ತಿದ್ದ! ಹೇಗೆನ್ನುವಿರಾ? 'ನನ್ನ ಜೊತೆ ಈ ಟ್ರೈನಿಂಗ್ ಮಾಡಿದೋನಿಗೆ ನನಗೆ ಬರೋ ಸಂಬಳಕ್ಕೆ ಡಬಲ್. ನನಗ್ಯಾಕೆ ಇಲ್ಲ?' ಅನ್ನೋ ಪ್ರಶ್ನೆ ಎಲ್ಲ ಕಡೆ ಕೇಳಿದರು ಮಕ್ಕಳು. ಪಲ್ಲಕ್ಕಿಯಲ್ಲಿ ಕೂರೋದೆಷ್ಟು ಜನ, ಹೊರೋರೆಷ್ಟು ಜನ ಎಂದು ಕೇಳಿದಾಗ ಉತ್ತರ ಸರಿಯಾಗಿ ಬರುತ್ತಿತ್ತು. 'ಮಗಧೀರ ಸಿನಿಮಾ ನೋಡದಿರೋರು ಕೈಯೆತ್ತಿ' ಅನ್ನುತ್ತಿದ್ದೆ. ಒಂದು ಕೈ ಕೂಡ ಮೇಲೆ ಎತ್ತಲ್ಪಡುತ್ತಿರಲಿಲ್ಲ! 'ನೋಡಿ ಮಕ್ಕಳಾ... ರಾಂಚರಣ್‌ಗೆ ಕೂಡ ಆತನ ತಂದೆ ಸಿನಿಮಾ ಸೇರಲು ಒಮ್ಮೆ ಸಹಾಯ ಮಾಡಬಹುದು. ಒಂದು ಸಿನಿಮಾ ಕೊಡಿಸಿರಬಹುದು. ಆಮೇಲೆ ಮೇಲೆ ಬರೋಕ್ಕೆ ಆತನಲ್ಲಿ ಪ್ರತಿಭೆ ಇರಬೇಕು' ಎನ್ನುತ್ತಿದ್ದೆ. ಬಹುಶಃ ಅದು ಅವರಿಗೆ ಸುಲಭವಾಗಿ ಅರ್ಥವಾಗುತ್ತಿದ್ದ ಉದಾಹರಣೆ!
Comments
Post a Comment