ಯತಿ ಸ್ವಂತೀ - ೨೬೩

೦-೦೯-೨೦೧೮
ಶುಕ್ರವಾರ ರಜಾ ದಿನ. ಇಡೀ ಮಸ್ಕತ್ ಮನೆ ಬಿಟ್ಟು ಹೊರಡುತ್ತಿರಲಿಲ್ಲ. ಮಧ್ಯಾಹ್ನದ ವರೆಗೆ ಇಡೀ ಊರು ಬಂದ್ ಆಗಿದೆಯೇನೋ ಎನ್ನುವ ಹಾಗೆ ಇರುತ್ತಿತ್ತು. ಆದರೆ ನಮಗೆ ಅಲ್ಲಿ ಮನೆಯಲ್ಲಿ ಹೊತ್ತು ಹೋಗುತ್ತಿರಲಿಲ್ಲ. ಬೆಂಗಳೂರಿನ ಮನೆಗೆ ಫೋನ್ ಮಾಡುತ್ತಿದ್ದುದು ಅಂದೇ. ಮಕ್ಕಳು ಇಲ್ಲಿ ಶಾಲೆಗೆ ಹೊರಡುವ ಮೊದಲು ಮಾಡಬೇಕಿತ್ತು. ಮಸ್ಕತ್ ಇಲ್ಲಿಗಿಂತ ಒಂದೂವರೆ ಗಂಟೆ ಹಿಂದೆ ಇದೆ. ಇಲ್ಲಿನ ಏಳು ಗಂಟೆ ಸುಮಾರಿಗೆ ಫೋನ್ ಮಾಡಲು ನಾನು ಐದೂವರೆ ಸುಮಾರಿಗೆ ಫೋನ್ ಮಾಡಲು ರಜಾ ದಿನ ಬೇಗ ಎದ್ದು ನಮ್ಮ ಕಟ್ಟಡದ ಮುಖ್ಯ ದ್ವಾರದ ಬೀಗ ತೆರೆದು ಅನತಿ ದೂರದ ಪಾರ್ಕಿಂಗ್ ಸ್ಥಳದಲ್ಲಿ ಇದ್ದ ಬೂತ್‌ನಿಂದ ಡಯಲ್ ಮಾಡುತ್ತಿದ್ದೆ. ಆಮೇಲೆ ನಿದ್ದೆ ಬರುತ್ತಿರಲಿಲ್ಲ. ಎಂಟಕ್ಕೆ ಆಫೀಸ್‌ಗೆ ಇಳಿದು ಬರುತ್ತಿದ್ದೆ. ನಾನೊಬ್ಬನೇ ಅಲ್ಲ ನಿದ್ದೆ ಬರದವರೆಲ್ಲ ಹಾಜರ್. ಸುಮ್ಮನೆ ಟೈಮ್ ಪಾಸ್ ನನಗೆ. ಏಕೆಂದರೆ ಅದು ಹೆಡ್ಡಾಫೀಸ್. ಉಳಿದ ಅನೇಕರು ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಹೊರಗೆ ಹೋಗಿ ಊಟ ಮಾಡುವುದನ್ನು ನಿಲ್ಲಿಸಿದೆ. ಏಕೆಂದರೆ ಉಳಿದ ಫ್ಲ್ಯಾಟ್ ಮೇಟ್ಸ್ ಒಮಾನ್ ಎಕ್ಸ್‌ಪ್ರೆಸ್ ಹೊಟೇಲ್‌ನಿಂದ ಊಟ ತರಿಸುತ್ತಿದ್ದರು. ಒಂದು ಊಟಕ್ಕೆ ಹೆಚ್ಚು ಖರ್ಚಿಲ್ಲ. ಅಲ್ಲಿ ರಿಯಾಲ್ ಒಮಾನಿ ಅನ್ನೋ ನೋಟು. ಒಂದು ರಿಯಾಲ್ ಎಂದರೆ ಒಂದು ಸಾವಿರ ಬೈಸ. ಅಂದ ಹಾಗೆ ಶುದ್ಧ ಅರಾಬಿಕ್ ಭಾಷೆಯಲ್ಲಿ ಪ ಅಕ್ಷರ ಇಲ್ಲ. (ಅಂತೆ) ಪ ಗೆ ಬ ಹೇಳ್ತಾರೆ. 'ಐ ವಿಲ್ ಬಾರ್ಕ್ ಮೈ ಕಾರ್ ಆ್ಯಂಡ್ ಬ್ರೇ' ಅಂತ ಒಬ್ಬ ಒಮಾನಿ  ಒಮ್ಮೆ ಹೇಳಿದಾಗ ಅದು ಪಾರ್ಕ್ ಆ್ಯಂಡ್ ಪ್ರೇ ಅಂತ ಅರ್ಥ ಆಗುವ ವರೆಗೆ ಇದೇನು ಎರಡು ಪ್ರಾಣಿಗಳ ಕೂಗು ಎಂದುಕೊಂಡಿದ್ದೆ! ಗುರುವಾರ ಸಂಜೆ ಎಂಟಕ್ಕೆ ಹೇರ್ ಕಟಿಂಗ್ ಮಾಡಿಸಬೇಕಿತ್ತು. ಬೇರೆ ದಿನ ಕಷ್ಟ ಆಗುತ್ತಿತ್ತು. ನಾನು ಮನೆಗೆ ಹೋಗುವ ದಾರಿಯಲ್ಲಿ ಪಾಕಿಸ್ತಾನಿಯೊಬ್ಬ ಬಹಳ ಚೆನ್ನಾಗಿ ಆಲೂ ಪರೋಠ ಮಾಡುತ್ತಿದ್ದ. ನಮ್ಮ ರೂಮಿನಲ್ಲಿ ಪ್ರವೀಣ್ ಪಾಟೀಲ್ ಬಳಿ ಮಾಜ್ದಾ 323 ಬಿಳಿಯ ಬಣ್ಣದ ಕಾರಿತ್ತು. ಅವನೇ ನಮಗೆ ಸಾರಥಿ. (ಮುಂದೊಂದು ದಿನ ಅದೇ ಕಾರನ್ನು ನಾನೋಡಿಸುವೆನೆಂದು ಆ ಕ್ಷಣದಲ್ಲಿ ನನಗೆ ತಿಳಿದಿರಲಿಲ್ಲ!) ಎಲ್ಲಿ ಹೊರಟರೂ ಅವನ ಜೊತೆಗೆ ನಾನು, ಸುರೇಶ್. ಹತ್ತಿರದಲ್ಲೇ ನಡೆದು  ಹೋಗುವಷ್ಟು ದೂರದಲ್ಲಿ ರೂವಿ ಹೈ ಸ್ಟ್ರೀಟ್ ಇತ್ತು. ಅದೇ ಆ ಊರಿನ ಎಂ ಜಿ ರೋಡ್.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102