ಯತಿ ಸ್ವಂತೀ - ೨೬೧

18-09-2018
ಸಲ್ತನತ್ ಆಫ್ ಒಮಾನ್ - 2
ಪರದೇಶದ ಒಂಟಿ ಕೊಠಡಿಯಲ್ಲಿ ಮಲಗಿದೆ. ನನಗೆ ಹಿಂದೀ ಹಾಡುಗಳನ್ನು ಕೇಳುವ ಹುಚ್ಚು... ಉಹೂಂ ಗೀಳು. ಹದಿನೈದು ವರ್ಷಗಳ ನಂತರ ಇವತ್ತು ಹಳೆಯ ಹಾಡುಗಳ ಸರಮಾಲೆಯಲ್ಲಿ 'ದುಃಖಿ ಮನ್ ಮೇರೆ ಸುನ್ ಮೇರ ಕೆಹನ ಜಹಾಂ ನಹೀ ಚೈನ ವಹಾ ನಹೀ ರೆಹನಾ' ಕೇಳಿ ಅಂದಿನ ರಾತ್ರಿ ನೆನಪಾಯಿತು. ಮೊದಲ ದಿನದ ರಾತ್ರಿ ಮಲಗುತ್ತಿದ್ದಾಗ ಈ ಹಾಡು ಕಿಶೋರ್ ಕುಮಾರ್ ಧ್ವನಿಯಲ್ಲಿ ಕೇಳಿ ನನ್ನ ಕಣ್ಣುಗಳು ಅಶ್ರುಧಾರೆ ಸುರಿಸಿದವು. ನನ್ನ ತಲೆದಿಂಬು ಒದ್ದೆಯಾಯಿತು. ನನಗಿಲ್ಲಿ ನೆಮ್ಮದಿ ಇಲ್ಲ. ಅವನೇನೋ ನೆಮ್ಮದಿ ಇರದೆಡೆ ಇರಬೇಡ ಅಂತಿದ್ದಾನೆ. ನಾನು ಹೊಟ್ಟೆ ಪಾಡಿಗೆ ಇಲ್ಲಿ ಬಂದು ಸಿಕ್ಕಿಕೊಂಡಾಗಿದೆ. ಅಬ್ಬಾ ನರಕ ದರ್ಶನ..! 365 ದಿನ ವಾಪಸ್ ಹೋಗಲು ಸಾಧ್ಯವಿಲ್ಲ. ಮರುದಿನ ಬೆಳಗ್ಗೆ ಆಫೀಸ್‌ಗೆ ಇಳಿದೆ. ನನ್ನ ರೂಮಿದ್ದ ಫ್ಲ್ಯಾಟ್ ಎರಡನೇ ಮಹಡಿಯಲ್ಲಿ. ಆಫೀಸ್ ಒಂದನೇ ಮಹಡಿ. ನನ್ನ ಫ್ಲ್ಯಾಟ್ ‍ನಲ್ಲಿ ಒಂದು ಕಾಮನ್ ಹಾಲ್. ಒಂದು ಕಿಚೆನ್. ಒಂದು ದೊಡ್ಡ ಬಾತ್‌ಟಬ್ ಇದ್ದ ಬಾತ್ ರೂಂ. ಇನ್ನೊಂದು ಸಣ್ಣ ರೂಂ. ಮೂರನೆಯ ರೂಮಿನಲ್ಲಿ ಪ್ರತ್ಯೇಕ ಟಾಯ್ಲೆಟ್ ಕಿಚೆನ್ ದೊಡ್ಡ ರೂಂ. ಆ ರೂಮಲ್ಲಿ ಇಬ್ಬರು. ನನ್ನ ಹಾಗೂ ಇನ್ನೊಂದು ರೂಂ ಸಿಂಗಲ್. ನಮ್ಮ ಜಿಎಂ ಭಾರತಕ್ಕೆ ಹೋಗಿದ್ದರು. ಅವರ ಗೈರಲ್ಲಿ ಆಫೀಸ್ ನೋಡುತ್ತಿದ್ದಾತ ನನ್ನನ್ನು ಗುರುದಾಸ್ ಅವರೊಂದಿಗೆ ಊರು ಸುತ್ತಿ ನೋಡೆಂದರು. ಆತನ ಕಾರಿನಲ್ಲಿ ಹೊರಗೆ ಹೋದಾಗ ಏನೋ ದಿಗ್ಭ್ರಮೆ. ಅಮೆರಿಕದಲ್ಲಿ ಲೆಫ್ಟ್ ಹ್ಯಾಂಡ್‌ ಡ್ರೈವ್ ಕಾರುಗಳಲ್ಲಿ ಪಯಣ ಮಾಡಿದ್ದೆ. ಅಲ್ಲಿ ಆಟೋಮ್ಯಾಟಿಕ್ ಕಾರುಗಳು. ಇಲ್ಲಿ ಗೇರ್ ಕಾರುಗಳು ಹೆಚ್ಚು. ಆಫೀಸ್‌ನಿಂದಲೇ ಕಾರು ಕೊಡಲ್ಪಟ್ಟಿತ್ತು. ರಸ್ತೆಗಳಲ್ಲಿ ವಿವಿಧ ಕಂಪೆನಿಗಳ ಕಾರುಗಳು. ನೀಟ್ ರಸ್ತೆ. ಮೂರು ಲೇನ್. ಅತಿ ದೊಡ್ಡ ಮಸೀದಿ ಸುಲ್ತಾನ್ ಕಬೂಸ್ ಗ್ರ್ಯಾಂಡ್ ಮಾಸ್ಕ್. ಆ ಏರಿಯಾದಲ್ಲಿ ನಾನು ಒಂದೆಡೆ ನೋಡಿದಷ್ಟು ಬೇವಿನ ಮರಗಳನ್ನು ಬೇರೆಲ್ಲೂ ನೋಡಿಲ್ಲ. ಕಾರಿನ ಬಾಗಿಲಿನ ಪಿಡಿಯನ್ನು ಮೇಲೆಳೆದು ಹಿಡಿದು ಡೋರ್ ಲಾಕ್ ಮಾಡಲು ಸರ್ಕಸ್ ಮಾಡಿದ್ದು ಈಗಲೂ ನಗೆ ತರಿಸುತ್ತದೆ. ಘಾಲಾ ಎನ್ನುವ ಏರಿಯಾ ನಮ್ಮ ಆಫೀಸ್‌ನಿಂದ ಸುಮಾರು 35 ಕಿಮೀ. ಗುರು ಕಾರೋಡಿಸುತ್ತಿದ್ದ ಶೈಲಿ ನೋಡಿ ನಾನೂ ಹೀಗೆ ಓಡಿಸುವೆನೇ ಎನ್ನಿಸಿತ್ತು. ಅದಕ್ಕೆ ಒಂದು ಕಾರಣ ಇತ್ತು. ಕಾರು ಓಡಿಸಬೇಡ ಎಂದಿದ್ದರು ಒಬ್ಬರು ಭವಿಷ್ಯ ಹೇಳುವಾತ. ನಂಬಲು ಇಷ್ಟ ಇಲ್ಲದಿದ್ದರೂ ಮೆಂಟಲ್ ಬ್ಲಾಕ್ ಆಗಿದ್ದು ನಿಜ. ಜೀಯೆಂ ಬಂದ ಮೇಲೆಯೇ ನಿನ್ನ ಡ್ರೈವಿಂಗ್ ಪಾಠ ಎಂದರು. ಅಬ್ಬಾ ಬದುಕಿದೆ ಎಂದುಕೊಂಡೆ. ಆದರೆ ಅದರಿಂದ ಒಂದು ಲಾಭ ಒಂದು ನಷ್ಟ ಆದವು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102