ಯತಿ ಸ್ವಂತೀ-271

 
30-09-2018
ಒಮ್ಮೆ ಮನೆಗೆ ಸಂಜೆ ಬಂದೆ. ಸಾಮಾನ್ಯವಾಗಿ ಆ ಸಮಯದಲ್ಲಿ ನಾನು ವಾಪಸ್ ಬರುತ್ತಿರಲಿಲ್ಲ. ಮನೆಯಲ್ಲಿ ಅಮ್ಮ ಇರಲಿಲ್ಲ. ಎದೆ ಧಸಕ್ಕೆಂದಿತು. ಎಲ್ಲಿ ಹೋದರು ಈ ಅಮ್ಮ? ಯಾರನ್ನು ಕೇಳಬೇಕು? ವಿಚಾರಿಸೋಣ ಎಂದರೆ ನನ್ನ ಫ್ಲ್ಯಾಟ್ ಮೇಟ್‌ಗಳು ಮೂವರೂ ಇರಲಿಲ್ಲ. ಬೇರೆ ಯಾರ ಪರಿಚಯವೂ ಇಲ್ಲ. ಫೋನ್ ಇಲ್ಲ. ಅಯ್ಯೋ... ಎಲ್ಲಪ್ಪಾ ಹೋದರು ಎಂದು ತಲೆ ಕೆಡಿಸಿಕೊಂಡು ನನ್ನ ರೂಮಿನ ಕಿಟಕಿಗೆ ಬಂದೆ. ಅದು ನಾಲ್ಕನೇ ಮಹಡಿ. ನಮ್ಮ ಬಿಳ್ಡಿಂಗ್ ಹಿಂಭಾಗದಲ್ಲಿ ಒಂದು ಆಕೃತಿ ಮೆಲ್ಲ ನಡೆಯುತ್ತಿತ್ತು. ಎದ್ದೆನೋ ಬಿದ್ದೆನೋ ಎಂದು ಕೆಳಗೋಡಿದೆ. ಅಮ್ಮ ಅಲ್ಲಿ ಮೆಲ್ಲನೆ ನಡೆದಾಡುತ್ತಿದ್ದರು. ನಾನು ಬರೋದು ತಡವಾಗಬಹುದೆಂದು ಲಿಫ್ಟ್ ಬಳಸಿ ಕೆಳಗೆ ಹೋಗಿ ಅಲ್ಲಿನ ಖಾಲಿ ಜಾಗದಲ್ಲಿ ವಾಕಿಂಗ್ ಮಾಡುತ್ತಿದ್ದರು. ಅಮ್ಮನಿಗೆ ಕಡ್ಡಾಯ ಆರ್ಡರ್ ಮಾಡಿದೆ. ಒಬ್ಬಳೇ ಲಿಫ್ಟ್ ಬಳಸಕೂಡದು. ನಮ್ಮ ಫ್ಲ್ಯಾಟ್ ಮೊಗಸಾಲೆಯಲ್ಲಿ ಓಡಾಡೆಂದು. ಅವರಿಗೆ ಊಟ ಮಾಡುವಾಗ ಫ್ಯಾನ್ ತಿರುಗಬಾರದು. ಏ. ಸಿ. ಆಗುವುದಿಲ್ಲ ಎಂದು ಹೇಳಿ ಆಫ್ ಮಾಡಿಸಿದ್ದರು. ಫ್ಯಾನ್ ಕೊಂಡು ತಂದಿದ್ದೆ. ಊಟ ಮಾಡುವಾಗ ಮಾತ್ರ ಬಹಳ ಕಷ್ಟ. ಸೆಖೆ ತಡೆಯಲು ಆಗುವುದಿಲ್ಲ. ಆದರೆ ಅಮ್ಮನಿಗೆ ಫ್ಯಾನ್ ಬೇಡ! ಅಂತೂ ಎರಡು ತಿಂಗಳು ಬಹಳ ಚೆನ್ನಾಗಿತ್ತು. ಪರದೇಶದಲ್ಲಿ ಅಮ್ಮನ ಕೈಯಡುಗೆ! ಒಂದಿಷ್ಟು ಜಾಗಗಳಿಗೆ ಸುಮ್ಮನೆ ಡ್ರೈವ್ ಮಾಡಿ ಕರೆದೊಯ್ದೆ. ಬಹಳ ಎನ್ಜಾಯ್ ಮಾಡಿದರು. ನನ್ನ ಭಾವ ಅಮ್ಮನಿಗೆ ವೀಸಾ ಅಪ್ಲೈ ಮಾಡಿದ್ದು. ನನ್ನ ತಂಗಿಗೆ ಅಮ್ಮನನ್ನು ತನ್ನ ಮಸ್ಕತ್ ಮನೆಯಲ್ಲಿ ಇಟ್ಟುಕೊಳ್ಳಬೇಕು ಅಂತ ಆಸೆ ಇತ್ತು. ಆದರೆ ಅಷ್ಟರಲ್ಲಿ ಏನೇನೋ ಆಗಿ ನನ್ನ ಭಾವ ಅಬೂಧಾಬಿಗೆ ಹೊರಟು ಹೋದರು. ಹಾಗಾಗಿ ಅಮ್ಮ ನನ್ನ ಜೊತೆಗೆ ಇರುವಂತಾಯಿತು. ನನ್ನ ಸಹೋದ್ಯೋಗಿಗಳಾದ ಕಾಮತ್, ಜೋಷಿ ಮುಂತಾದವರು ಬಹಳ ಪ್ರೀತಿಯಿಂದ ಅಮ್ಮನನ್ನು ಆದರಪೂರ್ವಕವಾಗಿ ಸ್ವಾಗತಿಸಿ ಔತಣ ನೀಡಿದರು. ಅಷ್ಟರಲ್ಲಿ ಮನೆಯಿಂದ ಪತ್ರ ಬಂದಿತು. ನನ್ನ ದೊಡ್ಡಮ್ಮನ ಮೊಮ್ಮಕ್ಕಳಿಗೆ ಮುಂಜಿ ಎಂದು ತಿಳಿದೊಡನೆ ಅಮ್ಮ ಖುಷಿಯಿಂದ ಬೆಂಗಳೂರು ತಲುಪಲು ಸಿದ್ಧವಾದರು.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102