ಯತಿ ಸ್ವಂತೀ -269
28-09-2018
ಕಥೆ ಸ್ವಲ್ಪ ಹಿಂದೆ ಮುಂದೆ ಆಗುತ್ತಿದೆ. ಜೂನ್ 2003ರ ಕೊನೆಯಲ್ಲಿ ಭಾರತಕ್ಕೆ ಬೆಂಗಳೂರಿಗೆ ನಮ್ಮ ಮನೆಗೆ ಬಂದೆ! ಏನೋ ಥ್ರಿಲ್ಲು. ಮಕ್ಕಳು ಖುಷಿ. ಪತ್ನಿ ಖುಷಿ. ಅಮ್ಮ ಖುಷಿ. ನಾನೂ ಖುಷಿ. ನನ್ನ ಗುರುತು ನನ್ನ ಮನೆಯವರಿಗೆ ಬಿಟ್ಟರೆ ಬೇರೆ ಯಾರಿಗೂ ಸಿಕ್ಕಲಿಲ್ಲ. ಪೂರಾ 'ಹೂಲಿಯಾ' ಬದಲಾಗಿತ್ತು. ನನ್ನ ಅಮ್ಮನನ್ನು ಅವರ ಹಲ್ಲು ಡಾಕ್ಟರ್ ಬಳಿ ಕರೆದುಕೊಂಡು ಹೋಗಿದ್ದೆ. ನೀವು ನಿಮ್ಮ ತಾಯಿಯವರ ಎರಡನೇ ಮಗಾನಾ? ಎಂದರು. ನಾನು ನಕ್ಕು ನಾನೊಬ್ಬನೇ ಮಗ ಎಂದೆ. ಅವರ ಮುಖದಲ್ಲಿ ಕಂಡ ಶಾಕ್ ಇಂದಿಗೂ ನನಗೆ ನಗೆ ತರಿಸುತ್ತದೆ. ನಿಮ್ಮ ಬಣ್ಣ, ಆಕಾರ ಮತ್ತೆ ನಿಮ್ಮ ಆತ್ಮ ವಿಶ್ವಾಸ ಬಹಳ ಆಶ್ಚರ್ಯ ತರುತ್ತಿದೆ ಎಂದರು. ಮನೆಗೆ 64 ಕೇಜಿ ಇದ್ದವನು 40 ದಿನಗಳಲ್ಲಿ 70 ಕೇಜಿ ಆದೆ. ಈ ಸಲ ನನ್ನ ಮನೆಯಿಂದ ಪಾತ್ರೆ ಕುಕ್ಕರ್ ಎಲ್ಲಾ ತಗೊಂಡು ಮಸ್ಕತ್ ತಲುಪಿದೆ. ಅಡುಗೆ ಮಾಡಿಕೊಂಡು ತಿನ್ನುವ ಇರಾದೆ ಅದು. ಉಪ್ಪು ತೆಗೆದ ನೀರು ಟ್ಯಾಂಕ್ ಮೂಲಕ ಬರುತ್ತಿತ್ತು. ಗ್ಯಾಸ್ ಸಿಲಿಂಡರ್ ತರಿಸಿಕೊಂಡೆ. ಬೆಳಗ್ಗೆ ಗುಜರಾತಿ ತೇಪ್ಲಾ ತರಿಸಿ ತಿಂದೆ. ಪಲ್ಯ ಮಾಡಿದರೆ ಒಂದಿಷ್ಟು ಎತ್ತಿಟ್ಟು ಬ್ರೆಡ್ ಸ್ಲೈಸ್ ನಡುವೆ ಇಷ್ಟು ಬೆಳಗ್ಗೆ ತಿನ್ನುತ್ತಿದ್ದೆ. ಹುಳಿ ಮಾಡುವ ಮುಂಚೆ ತರಕಾರಿ ತೆಗೆದಿಟ್ಟು ಬ್ರೆಡ್ಡು ನಡುವೆ ಇಟ್ಟು ತಿನ್ನುತ್ತಿದ್ದೆ. ದಿನವೂ ಕಡಲೇಕಾಯಿ ಬೀಜ ಸಾಂಬಾರಿಗೆ ಹಾಕುತ್ತಿದ್ದೆ. ಅದು ಎಲ್ಲರಿಗೂ ಆಶ್ಚರ್ಯ ತರುತ್ತಿತ್ತು. ನಾನು ಕ್ಯಾಪ್ಸಿಕಂ ಫ್ರೈ ಮಾಡಿದರೆ ಆಹಾ ಎನ್ನುತ್ತಿದ್ದರು ಕೆಲವು ಸಹೋದ್ಯೋಗಿಗಳು. ಒಮ್ಮೆ ಅನ್ನ ಮಾಡಿ ಬಸಿಯುತ್ತಿದ್ದಾಗ ದಬ್ಬೆಂದು ಅಷ್ಟೂ ಅನ್ನ ಸಿಂಕ್ ಒಳಗೆ ಬಿತ್ತು. ಆ ಸಿಂಕ್‌ನಲ್ಲಿ ಉಳಿದವರು ಕ್ಯಾಕರಿಸಿ ಉಗಿಯೋದು ನೋಡಿದ್ದೆ. ಭಯಾನಕ ಹಸಿವು. ಮತ್ತೊಮ್ಮೆ ಅನ್ನ ಮಾಡಿದೆ. ಸೈರಣೆಯ ಪರೀಕ್ಷೆ. ಅಬ್ಬಾ... ಇನ್ನೊಮ್ಮೆ ಕಡಲೇಕಾಯಿ ಬೀಜ ಎಂದು ಬ್ರಿಟಿಷ್ ಬೀನ್ಸ್ ತಂದೆ. ಪುಳಿಯೋಗರೆ ಕಲಸಿ ಬಾಯಿಗಿಟ್ಟೆ. ಖಠುಂ ಎಂದಿತ್ತು ಬೀಜ. ಅದನ್ನು ಬೇಯಿಸಲು ಸಾಕಷ್ಟು ಸರ್ಕಸ್ ಮಾಡಿದ್ದೆ. ಸುಮಾರು ಎಂಟು ತಿಂಗಳು ಅಡುಗೆ ಮಾಡಿಕೊಂಡೆ. ಒಂದು ದಿನ ಕಡಲೇಕಾಯಿ ಹುಳಿ ಮಾಡಿದ್ದೆ! ಎಲ್ಲರಿಗೂ ಅಚ್ಚರಿ! ಒಂದು ದಿನವೂ ಯಾರಿಗೂ ನನ್ನ ಅಡುಗೆಯ ರುಚಿ ನೋಡಲು ಬಿಡಲಿಲ್ಲ. ಮಾಡಿದ್ದುಣ್ಣೋ ಮಹರಾಯ! ಆ ಸಮಯದಲ್ಲಿ ಅಮ್ಮ ಬರುವ ವಿಷಯ ತಿಳಿದು ಥ್ರಿಲ್. ಸಹೋದ್ಯೋಗಿ ಪ್ರವೀಣ್ ಪಾಟೀಲ್ ಅಮ್ಮನನ್ನು ಕರೆತಂದ. ಬಂದೊಡನೆ ಅವನ ಕಾರನ್ನು ದಿಟ್ಟಿಸಿ ನೋಡಿದ. ಅಷ್ಟರಲ್ಲಿ ಇನ್ಷೂರೆನ್ಸ್ ಬಳಸಿ ಕಾರು ರಿಪೇರಿ ಮಾಡಿಸಿ ಆಗಿತ್ತು. ಅವನನ್ನು ಮತ್ತು ಅಮ್ಮನನ್ನು ಕರೆತರಲು ನಾನೇ ಕಾರೋಡಿಸಿಕೊಂಡು ಹೋಗಿದ್ದೆ. ಪ್ರವೀಣ್ ಅವನ ಕಾರು ಮರಳಿ ಪಡೆದಾಗ ನನಗೆ ಒಂದು ಹಳೆಯ ಮಾಜ್ದಾ 6 ಕಾರು ಕೊಟ್ಟರು. ಅಮ್ಮನನ್ನು ಅನೇಕ ಕಡೆ ಕರೆದುಕೊಂಡು ಹೋದೆ. ನನ್ನ ಅಮ್ಮ 'ರಾಜು ನಿನಗಿಂತ ನನ್ನ ಸೊಸೆ ಉಷಾ ಚೆನ್ನಾಗಿ ಕಾರೋಡಿಸುತ್ತಾಳೆ' ಅಂದು ಬಿಡೋದೇ!
Comments
Post a Comment