ಯತಿ ಸ್ವಂತೀ -268


27-09-2018
ನಮ್ಮ ಪಿ ಆರ್ ಓ ಗೆ ಫೋನ್ ಮಾಡಿದೆ. ರಸ್ತೆಯ ಹೆಸರು ತಿಳಿಯದು. ಜಾಗದ ಹೆಸರು ಅಲ್ ಖ್ವೈರ್ ಅಂತ ತಿಳಿದಿತ್ತು. ದೂರದಲ್ಲಿ ಮಸ್ಕತ್ ಮೆಯಿನ್ ರೋಡಲ್ಲಿ ಕಾಣಿಸಿದ ಒಂದು ಲ್ಯಾಂಡ್ ಮಾರ್ಕ್ ಹೇಳಿ, ಕ್ರೈನ್ ಕಳಿಸು ಎಂದೆ... 
ಮರೆತಿದ್ದೆ! ಈ ದೇಶದಲ್ಲಿ ಅಂಚೆಯ ಅಣ್ಣ ಇಲ್ಲ. ಅಂಚೆ ಕಚೇರಿಯಲ್ಲಿ ಪೋಸ್ಟ್ ಬಾಕ್ಸ್ ನಂಬರ್ ಇದೆ. ಆಗಿನ್ನೂ ಈ ಮೇಲ್ ದಾಳಿ ನಮ್ಮ ಮನೆವರೆಗೆ ಬಂದಿರಲಿಲ್ಲ. ಅದಕ್ಕೇ ಮನೆಯವರೆಲ್ಲ ಪತ್ರಗಳನ್ನು ಬರೆಯುತ್ತಿದ್ದರು. ನನಗೂ ಅದೇ ಪಾಸ್ಟೈಮ್. ನಮ್ಮ ಆಫೀಸ್ ಬಾಯ್ ಗೋವಿಂದ ದಿನಾ ಪೋಸ್ಟ್ ಆಫೀಸ್‌ಗೆ ಹೋಗಿ ಪತ್ರಗಳನ್ನು ತರುತ್ತಿದ್ದ. ನನಗೆ ನನ್ನ ಮನೆ ಅದೆಷ್ಟು ಮಿಸ್ ಆಗಿತ್ತೆಂದರೆ ಗೋವಿಂದನಿಂದ ಪೋಸ್ಟ್ ಬಾಕ್ಸ್ ಬೀಗದಕೀಲಿ ಪಡೆದು ನಾನೇ ಪತ್ರಗಳನ್ನು ತರಲಾರಂಭಿಸಿದೆ. ಉಳಿದವರು ನಗಲಿಲ್ಲ. ಎಲ್ಲರೂ ಅದೇ ರೀತಿಯ ಒಂಟಿತನದ ಬೇಗೆಯಲ್ಲಿ ಬೆಂದವರೇ. ಬಹಳ ವರ್ಷಗಳ ನಂತರ ಕೆಲವರು ಕುಟುಂಬದವರನ್ನು ಕರೆಸಿಕೊಂಡಿದ್ದರು. ಬಹಳ ಜನ ಒಂಟಿಜೀವನ + ಪತ್ರ + ಟೆಲಿಫೋನ್ ಕರೆ + ನಲವತ್ತು ದಿನಗಳ ವಾರ್ಷಿಕ ರಜೆ... ಇವನ್ನು ರೂಢಿಸಿಕೊಂಡಿದ್ದರು. ದಿನವೂ ಪತ್ರ ಬರೆದ ದಿನಗಳು ನಿಧಾನವಾಗಿ ಮೂರು ದಿನಗಳಿಗೊಂದು, ವಾರಕ್ಕೊಮ್ಮೆ ಎಂದಾದವು. ಆಫೀಸ್‌ನಲ್ಲಿ ಮೊಬೈಲ್ ನೀಡಿದ್ದರು. ದಿನಾ ರಾತ್ರಿ ಒಮ್ಮೆ ರಿಂಗ್ ಮಾಡುತ್ತಿದ್ದೆ. ಓ ನಾನು ಹುಷಾರಾಗಿದ್ದೀನಿ ಎಂದು ಮನೆಗೆ ಅದು ಸಿಗ್ನಲ್. ಶುಕ್ರವಾರ ಬೆಳಗ್ಗೆ ಕರೆ ಇದ್ದೇ ಇರುತ್ತಿತ್ತು... 
ಸಾರಿ... ಹರಿಕಥೆಯ ಉಪಕಥೆ...! 
ಕ್ರೈನ್ ಬರಲು ಕಾಯುತ್ತಿದ್ದಾಗ ಕಟ್ಟಲ್ಪಡುತ್ತಿದ್ದ ಆ ಬಂಗಲೆಯಿಂದ ಆರು ಮಂದಿ ಭಾರತೀಯರು ಹೊರಬಂದು ನನ್ನ ಕಾರಿನ ಭಂಗಿ ನೋಡಿ ಗಾಬರಿಯಾದರು. 
ಹಿಂದೊಮ್ಮೆ ಬೆಳಗಿನಜಾವ ಬೆಂಗಳೂರಿನ ನನ್ನ ಮನೆಯಿಂದ ಕಾರೋಡಿಸಿದ ನನ್ನ ಅಮೆರಿಕದ ಬಂಧುವೊಬ್ಬ ನಮ್ಮ ಮಾವನವರ ಮಾರುತಿ ಆಮ್ನಿಯನ್ನು ಓಡಿಸಿಕೊಂಡು ಹೋಗಿ ಹಳ್ಳದಲ್ಲಿ ಇಳಿಸಿದ್ದ. ನಾನು ಅವನು ಸೇರಿ ಕಾರನ್ನು ಮೇಲೆತ್ತಿದ್ದೆವು.
ಅದನ್ನು ನೆನಪು ಮಾಡಿಕೊಂಡು ಆ ಆರು ಜನರಿಗೆ ಹಿಂದಿಯಲ್ಲಿ ಈ ಕಾರು ಎತ್ತಲು ಸಾಧ್ಯವೇ ಎಂದು ಕೇಳಿದೆ. ಆಗುತ್ತದೆ ಎಂದರು. ಕಾಸು ಕೊಡಲಾರೆ ಎಂದೆ. ಸಧ್ಯ ಈ ಕಾರು, ಕಾರಿನಾತ ತೊಲಗಿದರೆ ಸಾಕು... ಸಾಹುಕಾರನ ಬೈಗುಳ ತಪ್ಪುತ್ತದೆ ಎನಿಸಿರಬೇಕು. ಕಾರೊಳಗೆ ಕೂತು ರಿವರ್ಸ್ ಗೇರ್ ಹಾಕು ಎಂದರು. ಹಾಗೇ ಮಾಡಿದೆ. ಪಲ್ಲಕ್ಕಿ ಎತ್ತಿದಂತೆ ಕಾರನ್ನು ಎತ್ತಿ ರಸ್ತೆಯಲ್ಲಿ ಇಟ್ಟುಬಿಟ್ಟರು! 
ನನ್ನ ಪಿ ಆರ್ ಓ ಗೆ ಫೋನ್ ಮಾಡಿ ಕ್ರೈನ್ ಬೇಡ ಎಂದೆ. ಅವನಿಗೆ ಕೋಪ ಬಂದಿರಬೇಕು. ಈ ದೇಶದವನಲ್ಲ... ಮೇಲಾಗಿ ಹೊಸಬ ಮ್ಯಾನೇಜ್ ಮಾಡಿದ್ದಾನೆ ಅಂತ ಇರಬೇಕು. ಇಡೀ ಆಫೀಸಿಗೆ  ನನ್ನ ಆಕಸ್ಮಿಕದ ವಿಷಯ ತಿಳಿದುಹೋಯಿತು. ರಜೆಯಲ್ಲಿ ಭಾರತಕ್ಕೆ ಹೋಗಿದ್ದ ಕಾರಿನ ಒರಿಜಿನಲ್ ಡ್ರೈವರ್ ಪ್ರವೀಣ್‌ಗೆ ಕೂಡ ತಿಳಿಯಿತೆಂದು ನನಗೆ ತಿಳಿಯಿತು. ಅದರ ವಿಷಯ ಅನಂತರ...

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102