ಯತಿ ಸ್ವಂತೀ -268
26-09-2018
ಲೈಸೆನ್ಸ್ ತಗೊಂಡು ಆಯ್ತು. ಇನ್ನು ಕಾರು? ಈಗಲೇ ಸದ್ಯಕ್ಕೆ ಬೇಡ ಎಂದರು ಸಹೋದ್ಯೋಗಿಗಳು. ಮೊದಲ ಮೂರು ತಿಂಗಳು ಯಾವುದಾದರೂ ಅಪಘಾತಕ್ಕೆ ಒಳಗಾದರೆ, ಆಕಸ್ಮಿಕ ನಾವೇ ಮಾಡಿದರೂ ಕೂಡ ಲೈಸೆನ್ಸ್ ಗೋವಿಂದ! ಅಂದ ಹಾಗೆ ಅಲ್ಲಿ ನಮ್ಮ ಆಫೀಸ್ ಬಾಯ್ ಹೆಸರು ಗೋವಿಂದ. ನಾವೆಲ್ಲ... ಎಲ್ಲ ಗುಂಪಿನ ಜನರೂ ಅವನ ನಾಮಜಪ ಮಾಡಿದ್ದೇವೆ. ಎಲ್ಲದಕ್ಕೂ 'ಗೋವಿಂದ ಗೋವಿಂದ' ಎಂದು ಅವನನ್ನು ದಿನಕ್ಕೆ ನೂರು ಸಲವಾದರೂ ಕೂಗಿ(ಕೊಂಡಿ)ದ್ದೇವೆ. ನಾವೆಲ್ಲ ಬಹುಶಃ ನೇರ ವೈಕುಂಠ ತಲುಪಬಹುದು!! ಸಾರಿ... ವಾಪಸ್ ಬರ್ತೀನಿ. ಮೂರು ತಿಂಗಳು ಕಾರು ಬಳಸುವ ಅವಕಾಶ ಸಿಗಲಿಲ್ಲ. ಮಾಜ್ದಾ 323 ಅನ್ನೋ ಕಾರು ಉಪಯೋಗಿಸುತ್ತಿದ್ದ ಪ್ರವೀಣ್ ಪಾಟೀಲನ ಕಾರು ನನಗೆ ನೀಡಿದರು. ವಾಹ್... ಫುಲ್ ಖುಷ್ ನಾನು. ಅಷ್ಟರಲ್ಲಿ ನನಗೆ ಹೆಡ್ ಆಫೀಸಿಗೆ ವರ್ಗ ಆಯಿತು. ನನ್ನ ಜಾಗಕ್ಕೆ ಗುರುದಾಸ್ ಶಾನ್‌ಭಾಗ್ ಹೋದ. ಒಂದು ರೀತಿಯಲ್ಲಿ ಇಂಟರ್‌ಛೇಂಜ್ ಆದೆವು ಎನ್ನಬಹುದು. ಕಾರು ಬರುವ ಮೊದಲೇ ವರ್ಗಾವಣೆ ಆಗಿತ್ತು. ಗ್ರಾಹಕರನ್ನು ಭೇಟಿ ಮಾಡಿ ಎಲೆಕ್ಟ್ರಿಕ್ ಕೇಬಲ್ ಮಾರಬೇಕಿತ್ತು. ನನ್ನದು ಟ್ರೇಡಿಂಗ್ ಕಂಪೆನಿ. ಕೇಬಲ್‌ಗಳು ಮಾರುಕಟ್ಟೆಯಲ್ಲಿ ಇದ್ದರೆ ನಾವು ಕೊಂಡ ಬೆಲೆಗಿಂತ ಸ್ವಲ್ಪವಾದರೂ ಹೆಚ್ಚಿನ ಬೆಲೆಗೆ... ಒಂದು ವೇಳೆ ಪ್ರತಿಸ್ಪರ್ಧಿಗಳ ಬಳಿ ಇಲ್ಲದೇ ನಮ್ಮ ಬಳಿ ಮಾತ್ರ ಇದ್ದರೆ ನಾವು ಹೇಳಿದ್ದೇ ಬೆಲೆ! ನನ್ನ ಗ್ರಾಹಕರು ಸುಮಾರು ಐವತ್ತು ಕಿಮೀ ದೂರದಲ್ಲಿಯೂ... ಸುಮಾರು ಎಂಟು ಕಿಮೀ ಹತ್ತಿರದಲ್ಲಿಯೂ ಇದ್ದರು. ಕಾರು ಕೊಡುವ ಮೊದಲು ಟ್ಯಾಕ್ಸಿ ಹಿಡಿದು ಹೋಗುತ್ತಿದ್ದೆ. ಆ ಮ್ಯಾಟಡಾರ್ ಟ್ಯಾಕ್ಸಿ ಕೇವಲ ಮೆಯಿನ್ ರೋಡಿನಲ್ಲಿ ಹೋಗುತ್ತಿತ್ತು. ಅಲ್ಲಿಂದ ಗ್ರಾಹಕರ ಸ್ಥಳಕ್ಕೆ ಆ ರಣಬಿಸಿಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಬಸವಳಿದು, ನೀರು ಕೇಳಿ ಕುಡಿದು ಆರ್ಡರ್ ಕೇಳುತ್ತಿದ್ದೆ. ನನ್ನ ಅಸೌಕರ್ಯವನ್ನು ಅನುಕೂಲಕ್ಕೆ ಬಳಸಿದೆ. ಅಯ್ಯೋ ಬಿಸಿಲಲ್ಲಿ ನಡೆದು ಬಂದಿರಾ ಎಂದು ಕರುಣೆಯಿಂದ ಆರ್ಡರ್ ಕೊಟ್ಟವರಿದ್ದಾರೆ! ಹೀಗೇ ನಾಲ್ಕು ತಿಂಗಳು ಕಳೆದವು. ಹ್ಞಾಂ... ಮಾಜ್ದಾ 323 ಬಂದಾಗ ಕಾರು ಸಿಕ್ಕ ಖುಷಿ. ಭಾರತಕ್ಕೆ ಹೋಗಿದ್ದ ಪ್ರವೀಣ್ ನನ್ನ ಅಕ್ಕರೆಯ ವಸ್ತು ಒಂದನ್ನು ಕರೆತರುವವನಿದ್ದ. ಹೌದು... ನನ್ನ ಅಮ್ಮ ಅವನೊಂದಿಗೆ ಮಸ್ಕತ್‌ನಲ್ಲಿ ಕಾಲಿಡುವವರಿದ್ದರು! ಮೊದಲ ದಿನ ಕಾರು ತಗೊಂಡು ಹೋಗಲು ಡವಡವ ಎದೆ ಬಡಿತದೊಂದಿಗೆ ಸ್ಟಾರ್ಟ್ ಮಾಡಿದೆ. ರಿವರ್ಸ್ ಮಾಡಿ ಕಾರು ಹೊರ ತೆಗೆಯಬೇಕಿತ್ತು. ಹಿಂದಕ್ಕೆ ಬಂದೆ. ಕೆಲವು ಇಂಚುಗಳ ಮೊದಲೇ ತಿರುಗಿಸಿದ್ದೆ. ಟಕ್ ಎನ್ನುವ ನನ್ನ ಎದೆ ಒಡೆಯುವ ಸದ್ದು ಬಂದಿತು! ನನ್ನ ಕಾರು ಪಕ್ಕದ ಟೊಯೋಟಾ ಕಾರಿನ ಟೆಯಿಲ್ ಲೈಟ್ ಒಡೆದಿತ್ತು. ನನ್ನ ಕಾರಿನ ಫ್ರಂಟ್ ಸೈಡ್ ಲೈಟ್ ಒಡೆಯಿತು. ಏನು ಮಾಡುವುದು ಎಂದು ಯೋಚಿಸುವಷ್ಟರಲ್ಲಿ ಇದ್ದಕ್ಕಿದ್ದಂತೆ ಅಲ್ಲಿ ಪ್ರತ್ಯಕ್ಷನಾದ ಪಾರ್ಕಿಂಗ್ ಸೆಕ್ಯುರಿಟಿ ಪೊಲೀಸ್‌ಗೆ ಫೋನ್ ಮಾಡಿಬಿಟ್ಟ!
Comments
Post a Comment