ಯತಿ ಸ್ವಂತೀ -264
22-09-2018
ಗುರುವಾರ ರಾತ್ರಿಗಳದು ಮತ್ತೊಂದು ರೊಟೀನ್. ಪ್ರವೀಣ್ ಬಹಳ ಗೆಳೆಯರನ್ನು ಹೊಂದಿದ್ದ. ಕಾರು ತೆಗೆದುಕೊಂಡು ಹೊರಗೆ ಹೋಗುತ್ತಿದ್ದ. ಕಾರಿಲ್ಲದ ನಾನು, ಸುರೇಶ್ ಮನೆಯಲ್ಲಿ ಬಂದಿಗಳು. ಸುರೇಶ್ ವೀಡಿಯೋ ಕ್ಯಾಸೆಟ್‌ಗಳನ್ನು ತರುತ್ತಿದ್ದ. ನನಗೆ ಎಂತಹ ಸಿನಿಮಾ ಆದರೂ ಓಕೆ. ಆದರೆ ಹಾರರ್ ಚಿತ್ರ ಅಂದರೆ ಆಗದು. ನನಗೆ ರಾತ್ರಿ ನಿದ್ದೆ ಬರುವುದಿಲ್ಲ! ಆದರೆ ವಿಧಿಯೆಣಿಕೆ ಬೇರಿತ್ತು. ನನ್ನ ಒಬ್ಬನೇ ಫ್ಲ್ಯಾಟ್ ಮೇಟ್ ಸುರೇಶ್ ಹೆಚ್ಚಾಗಿ ಹಾರರ್ ಸಿನಿಮಾ ನೋಡುತ್ತಿದ್ದ. ವಿಧಿಯಿಲ್ಲದೇ ನೋಡತೊಡಗಿದೆ. ರೆಸಿಡೆಂಟ್ ಈವಿಲ್ ಇವತ್ತು ನೆನೆದರೆ ಕೂಡ ಮೈ ಝುಮ್ಮೆನ್ನುತ್ತದೆ. ಮತ್ತೊಂದು ಡಾಕ್ಯುಮೆಂಟರಿ ಸಾವಿನ ಬಗ್ಗೆ. ಜೀವಂತ ಕುರಿಯ ಚರ್ಮ ಸುರಿಯುವ ದೃಶ್ಯ... ಜೀವಂತ ಕೋತಿ ತಲೆ ಒಡೆದು ಮೆದುಳು ತಿನ್ನುವುದು... ಮನುಷ್ಯನ ತಲೆ ಕತ್ತರಿಸುವುದು.. ಗ್ರಾಫಿಕ್ಸ್ ಅಲ್ಲ.. ನಿಜವಾದವು. ಭೀಭತ್ಸ ಎಂದರೆ ಆ ಚಿತ್ರ. ಕೆಲವೊಮ್ಮೆ ಕೃಷ್ಣನ ಗುಡಿಗೆ ಹೋಗುತ್ತಿದ್ದೆವು. ಸಿನಿಮಾ ಕೂಡ ಕೆಲವು ಸಲ. ಎಲ್ಲ ಸಿನಿಮಾಗಳೂ ಸಬ್ ಟೈಟಲ್ ಅರಾಬಿಕ್ ಭಾಷೆಯಲ್ಲಿ ಹೊಂದಿರುತ್ತಿದ್ದವು. ಅಬ್ಜೆಕ್ಶನಬಲ್ ದೃಶ್ಯದ ಮೇಲೆ ಕರಿಬಣ್ಣ. ಸಿನಿಮಾ ಪತ್ರಿಕೆಗಳಲ್ಲಿ ಕೂಡ ತಾರೆಯರ ಮುಖ ಬಿಟ್ಟು ದೇಹದ ಬೇರೆ ಯಾವ ಭಾಗ ಕಾಣಿಸಿದರೂ ಕಪ್ಪು ಬಣ್ಣ ಬಳಿಯಲ್ಪಡುತ್ತಿತ್ತು. ಸಂಬಳ ಬಂದಾಗ ಆಫೀಸ್ ಹತ್ತಿರವೇ ಇದ್ದ ನ್ಯಾಶನಲ್ ಬ್ಯಾಂಕ್ ಆಫ್ ಒಮಾನ್‌ಗೆ ಹೋದೆ. ನನ್ನ ಸಹಿ ಬಗ್ಗೆ ಅನುಮಾನ ಇತ್ತು ಅವರಿಗೆ. ಬೆಂಗಳೂರು ಮೈಸೂರು ನಗರಗಳಲ್ಲಿ ನಮ್ಮ ಸಹಿಯ ಕಾರ್ಡ್ ಇರುತ್ತಿತ್ತು ಆಗ. ಇಲ್ಲಿ ಪ್ರಥಮ ಬಾರಿಗೆ ಕಂಪ್ಯೂಟರಿನಲ್ಲಿ ನನ್ನ ಸಹಿ ನೋಡಿದೆ. ನನ್ನ ಫೋಟೋ ನೋಡಿ, ನಂತರ ನನ್ನ ನೋಡಿ, ಮತ್ತೆ ಫೋಟೋ ನೋಡಿದಳು ಆ ಬ್ಯಾಂಕ್ ಉದ್ಯೋಗಿ. ಆಗ ನನಗೆ ವಿಷಯ ಅರ್ಥವಾಗಿ ತಕ್ಷಣವೇ ನನ್ನ ಮೇಲ್ದುಟಿಯ ಮೇಲ್ಭಾಗದಲ್ಲಿ ಅಡ್ಡಡ್ಡಲಾಗಿ ತೋರುಬೆರಳು ಇಟ್ಟುಕೊಂಡೆ. ಆಕೆಯೊಂದಿಗೆ ನಾನೂ ಈಗ ನಕ್ಕೆ. ಬ್ಯಾಂಕ್ ಬಳಿ ಇದ್ದ ನನ್ನ ಫೋಟೋದಲ್ಲಿ ನನಗೆ ಮೀಸೆ ಇರಲಿಲ್ಲ. ಈಗ ಇತ್ತು. ಅದನ್ನು ಮುಚ್ಚಿಕೊಂಡಾಗ ಆಕೆಗೆ ನನ್ನ ಗುರುತು ಹತ್ತಿತ್ತು!
Comments
Post a Comment