ಯತಿ ಸ್ವಂತೀ - 262

ಸಲ್ತನತ್ ಆಫ್ ಒಮಾನ್ - 3
ಕೆಲವು ದಿನಗಳ ನಂತರ ನನ್ನನ್ನು ಕಂಪೆನಿಯ ಲೈಟಿಂಗ್ ಶೋ ರೂಂನಲ್ಲಿ ಕೆಲಸ ಮಾಡಲು ಕಳಿಸಿದರು. ಒಬ್ಬರು ಸರ್ದಾರ್ಜಿ ನನ್ನ ದೊಡ್ಡ ಬಾಸ್. ಮಹಾನ್ ಸಂಗೀತಗಾರ ಚೆಂಬೈ ವೈದ್ಯನಾಥ ಭಾಗವತರ್ ಅವರ ಮಗನ ಮಗ ನನ್ನ ಇಮ್ಮೀಡಿಯೇಟ್ ಬಾಸ್. ಒಬ್ಬ ಒಮಾನೀ ಹುಡುಗಿ ಸೇಲ್ಸ್ ಕೆಲಸಕ್ಕೆ. ಹೊನ್ನಾವರ ಹುಡುಗನೊಬ್ಬ ನಮ್ಮ ಅಸಿಸ್ಟೆಂಟ್. ಬೆಳಗ್ಗೆ ಎಂಟರಿಂದ ಮಧ್ಯಾಹ್ನ ಒಂದು ಗಂಟೆ. ಮತ್ತೆ ಸಂಜೆ ನಾಲ್ಕರಿಂದ ಎಂಟು ಗಂಟೆ. 'ನನ್ನ ಮನೆ'ಯಿಂದ ಸುಮಾರು ನಾಲ್ಕು ಕಿಮೀ ದೂರದಲ್ಲಿತ್ತು ಶೋರೂಂ. ಏಳಕ್ಕೆ ರೂಮು ಬಿಡಬೇಕು. ಐದೂವರೆ ಗಂಟೆಗೆ ಎದ್ದು ಸ್ನಾನ ಮುಗಿಸಿ ಏಳಕ್ಕೆ ನಡೆದು ಒಮಾನ್ ಎಕ್ಸ್‌ಪ್ರೆಸ್ ಹೊಟೇಲ್ ತಲುಪುತ್ತಿದ್ದೆ. ಇಡ್ಲಿ, ದೋಸೆ ಯಾವುದಾದರೂ ತಿಂದು ಅಲ್ಲಿಂದ ಎರಡು ಫರ್ಲಾಂಗ್ ದೂರದ ಶೋರೂಂಗೆ ಹೋಗುತ್ತಿದ್ದೆ. ಕೆಲವು ದಿನ ಬಹಳ ಜನ. ಸಲಾಂ ವಾಲೇಕುಂ ಅಂದಾಗ ವಾಲೇಕುಂ ಸಲಾಂ ಎನ್ನಲು ಕಲಿತೆ. ಸರ್ದಾರ್ಜಿ ಬಾಸ್ ಈ ವಯಸ್ಸಿನಲ್ಲಿ ಈ ದೇಶಕ್ಕೆ ಯಾಕೆ ಬರಕ್ಕೆ ಹೋದೆ ಎಂದರು. ಅಷ್ಟರಲ್ಲಿ ನಮ್ಮ ತಮಿಳ್ ಮಲಯಾಳಂ ಬಾಸ್ ವಯಸ್ಸು ಕೇಳಿ ತಿಳಿದುಕೊಂಡಿದ್ದೆ. ಈ ವಯಸ್ಸಿನಲ್ಲಿ ಅಂದರೆ? ನಾನು ಅವರಿಗಿಂತ ಚಿಕ್ಕೋನು ಎಂದೆ. ಯೇ ಸಚ್ ಬೋಲ್ ರಹಾ ಹೈ ಕ್ಯಾ ಎಂದು ಆತನನ್ನು ಗುಟ್ಟಾಗಿ ಜೋರಾಗಿ ಕೇಳಿದ್ದರಿಂದ ನನಗೂ ಕೇಳಿಸಿತ್ತು! ನನ್ನ ಬಿಳಿಯ ಗುಂಡನೆಯ ಮೀಸೆ ಇಲ್ಲದ ಮುಖ ರಿಟೈರ್ಡ್ ವಯಸ್ಸು ತೋರಿಸುತ್ತಿತ್ತೇನೋ... ಅಂದೇ ಮೀಸೆ ಬೆಳೆಸಲು ಆರಂಭಿಸಿದೆ. ಮಧ್ಯಾಹ್ನ ಒಂದು ಗಂಟೆಗೆ ಊಟ ಮಾಡಿ (ಅದೇ ಒಮಾನ್ ಎಕ್ಸ್‌ಪ್ರೆಸ್... ಮಂಗಳೂರು ಕಡೆಯ ವೆಜ್ ಹೊಟೇಲ್) ಮತ್ತೆ ಬಿಸಿಲಲ್ಲಿ ನಡೆದು ರೂಮ್ ಸೇರಿ ಬಿದ್ದುಕೊಂಡು ಮೂರಕ್ಕೆ ಮತ್ತೆ ಹೊರಟು ನಾಲ್ಕಕ್ಕೆ ಮೊದಲು ಶೋರೂಂ. ಹ್ಞಾಂ... ಮತ್ತೊಬ್ಬ ಅಸಿಸ್ಟೆಂಟ್ ಕುಮಟಾದಾತ. ಆತನಿಗೆ ಅರಾಬಿಕ್ ಭಾಷೆ ಬರುತ್ತಿತ್ತು. ವಾಕಿನ್ ಕಸ್ಟಮರುಗಳ ಜೊತೆ ಮಾತನಾಡುತ್ತಿದ್ದ. ನನಗೆ ಭಾಷೆಗಳ ಬಗ್ಗೆ ಆಸಕ್ತಿ ಇದ್ದರೂ ಅರಾಬಿಕ್ ಭಾಷೆ ಮೈಗೆ ಹತ್ತಲೇ ಇಲ್ಲ. ಆದರೆ ಮಲಯಾಳಂ ಸ್ವಲ್ಪ ಸ್ವಲ್ಪ ಅರ್ಥ ಆಗತೊಡಗಿತು. ಮೊದಮೊದಲು ನನ್ನ ಇಮ್ಮೀಡಿಯೇಟ್ ಬಾಸ್ ಮಾತನಾಡಿದರೆ ಅದರಲ್ಲಿ ಅರ್ಧ ಅರ್ಥ ಆಗ್ತಿತ್ತು!ಅವರು ತಮಿಳು ಮಲಯಾಳಂ ಬೆರೆಸಿ ಮಾತನಾಡುತ್ತಿದ್ದರು. ಪಾಲ್ಘಾಟ್ ಕಡೆಯ ಅಯ್ಯರ್ ಅವರು. ಅವರೊಂದಿಗೆ ಮಸ್ಕತ್‌ನಲ್ಲಿ ಕಾರಲ್ಲಿ ಓಡಾಡಿದೆ. ಅವರು ಸಿಗರೇಟು ಹಚ್ಚಿದರೆ ಏಸಿ ಆಫ್ ಮಾಡಿ ಕಿಟಕಿ ತೆಗೆದು ಬಂದು ಹೋಗುತ್ತಿದ್ದೆ. ಅವರನ್ನು ಸಂಗೀತ ಹಾಡಿ ಎಂದು ಬಲವಂತ ಮಾಡಿದರೆ ಮೂಡ್ ಇದ್ದರೆ ಹಾಡುತ್ತಿದ್ದರು. ಬಹಳ ಒಳ್ಳೆಯ ತರಬೇತಿ ಆಗಿತ್ತು. ಆದರೆ ಗಂಟಲು ಹಾಳಾಗಿತ್ತು. ದಿನಾ ರಾತ್ರಿ ಏಳೂ ಐವತ್ತೈದಕ್ಕೆ ಯಮುನಾ ಕಲ್ಯಾಣಿ ರಾಗದಲ್ಲಿ ಜೋರಾಗಿ ಹಾಡಿ, ಮಹಡಿಯ ಮೇಲೆ ಕೆಲಸ ಮಾಡುತ್ತಿದ್ದ ಹುಡುಗನನ್ನು ಸಂಗೀತಮಯವಾಗಿ ಜೋರಾಗಿ ಕರೆಯುತ್ತಿದ್ದರು. 'ಕೃಷ್ಣಾ ನೀ ಬೇಗನೆ ಬಾರೋ' ಎಂದು. ಅವನ ಹೆಸರು ಕೃಷ್ಣ. ಬೇಗ ಬೀಗ ಹಾಕಲಿ, ಇನ್ನು ಹೊರಡೋಣ ಅನ್ನೋಕ್ಕೆ ಆ ಹಾಡು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102