ಯತಿ ಸ್ವಂತೀ -259
16-09-2018
ಪುಣೆಗೆ ಹೋಗೆಂದರು ನಮ್ಮ ಬಾಸ್. ನನ್ನ ಜೊತೆ ನನ್ನ ಮಾರ್ಗದರ್ಶಿ ಸಮಾನರಾದ ಶ್ರೀ ವಿಠಲ್ ಪ್ರಭು ಕೂಡ ಇದ್ದರು. ಇಬ್ಬರೂ ಮುಂಬೈಗೆ ವಿಮಾನದಲ್ಲಿ ಹೋಗಿ, ಅಲ್ಲಿಂದ ಏಷಿಯಾಡ್ ಬಸ್ ಹತ್ತಿ ಪುಣೆ ತಲುಪದೆವು.
ನನಗೆ ಪ್ರಭು ಅವರೆಂದರೆ ಫ್ರೆಂಡ್, ಫಿಲಾಸಫರ್ ಮತ್ತು ಗೈಡ್ ಆಗಿದ್ದರು. (ಭೂತಕಾಲ ಏಕೆಂದರೆ ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ)
ಅವರೊಂದಿಗೆ ಪುಣೆಯ ಕಂಪೆನಿಯೊಂದರಲ್ಲಿ ಮೂರು ದಿನಗಳ ಕಾಲ ಲೆಕ್ಚರ್ ನೀಡಿದೆ.
ಒಂದು ದಿನ ಅನಿರೀಕ್ಷಿತವಾಗಿ ನಾನಿರುವೆಡೆಯಲ್ಲಿಗೆ ನನ್ನ ಬಾಸ್ ಬಂದರು!
ನನ್ನನ್ನು ಒಂದು ರೀತಿ ನೋಡಿ ಪ್ರಭು ಅವರನ್ನು ನಾನೆಲ್ಲಿದ್ದೆ ಈ ಮೂರು ದಿನ ಎಂದು ಕೇಳಿದರಂತೆ.
ನಂತರ ಅವರು ಹೊರಟುಹೊದರು. ನಾನು, ಪ್ರಭು ಮರುದಿನ ಮುಂಬೈ ಮೂಲಕ ಬೆಂಗಳೂರು ತಲುಪಿದೆವು.
ಮರುದಿನ ನನ್ನ ಟೂರ್ ಬಿಲ್ ಸಿದ್ಧಗೊಳಿಸಿ ನನ್ನ ಬಾಸ್ ಬಳಿಗೆ ಒಯ್ದೆ.
ಅದನ್ನು ರೊಯ್ಯನೆ ಬಿಸಾಡಿ, ‘ನೀನು ಮೂರು ದಿನ ಮಜಾ ಮಾಡೋಕ್ಕಲ್ಲ ಕಳಿಸಿದ್ದು. ಇನ್ನೂ ಉಳಿದ ಕಸ್ಟಮರುಗಳನ್ನು ಭೇಟಿ ಆಗಬೇಕಿತ್ತು’ ಎಂದರು.
ನಾನು ಹೊರಟಿದ್ದು ಯುಗಾದಿಯ ದಿನ. ಮನೆಯಲ್ಲಿ ಹಬ್ಬದ ದಿನ ಹೊರಟಿದ್ದಕ್ಕೆ ಬೈಯುತ್ತಲೇ ಇದ್ದರು ಅಮ್ಮ, ಹೆಂಡತಿ. ಹಾಗೆ ಹೋಗಿ, ಕೆಲಸ ಮುಗಿಸಿ ಬಂದರೆ ಈ ರೀತಿಯ ಟ್ರೀಟ್‍ಮೆಂಟ್!
ನನಗೂ ರೇಗಿತು. ಆ ಪೇಪರುಗಳನ್ನು ತಂದು ನನ್ನ ಟೇಬಲ್ ಮೇಲೆ ಪೇರಿಸಲ್ಪಟ್ಟಿದ್ದ ಇನ್ನೂ ಉತ್ತರ ಬರೆಯದ ಪೇಪರುಗಳ ಅಡಿಗೆ ಇಟ್ಟುಬಿಟ್ಟೆ.
ಕೆಲವು ದಿನಗಳು ಕಳೆದವು. ಆಗ ನಮ್ಮ ಆಫೀಸ್ ಆರ್ಥಿಕ ವರ್ಷ ಜೂನ್ 30ಕ್ಕೆ ಮುಗಿಯುತ್ತಿತ್ತೆಂಬ ಜ್ಞಾಪಕ.
ನನ್ನ ಆಫೀಸ್‍ಬಾಯ್ ನಾಗರಾಜ, “ಯತೀ, ಪೇಪರ್‍ಗಳನ್ನು ಕೊಡಬೇಕಂತೆ. ಗೋವಿಂದ್‍ರಾವ್ ಹೇಳಿದ್ರು” ಎಂದ. ಗೋವಿಂದ್‍ರಾವ್ ಹಣಕಾಸು ಡಿಪಾರ್ಟ್‍ಮೆಂಟಿನವರು.
ಅವರಿಗೆ ಲೆಕ್ಕ ಕ್ಲೋಸ್ ಮಾಡಬೇಕಾದ ಅನಿವಾರ್ಯ. ನನಗೊಂದು ಭಯಾನಕ ಐಡಿಯಾ ಬಂತು. “ನಾಗರಾಜ, ಗೋವಿಂದ್‍ರಾವ್ ಅವ್ರಿಗೆ ಹೇಳು, ನಮ್ಮ ಬಾಸ್ ಹತ್ರ ಕಂಪ್ಲೈನ್ ಮಾಡಕ್ಕೆ” ಎಂದೆ.
ಮೂಗು ಹಿಡಿದರೆ ಬಾಯಿ ಬಿಡುವುದು ಸಹಜವಲ್ಲವೇ? ಮರುಕ್ಷಣ ಆತನಿಂದ ಬಾಸ್‍ಗೆ ಫೋನ್ ಬಂದಿರಬೇಕು!
ತಕ್ಷಣವೇ ತಮ್ಮ ಟೇಬಲ್ಲಿನಲ್ಲಿದ್ದ ಕರೆಗಂಟೆ ಒತ್ತಿ ನಮ್ಮ ಗಮನ ಸೆಳೆದು, ಕಿಟಕಿಯಿಂದ ನನ್ನನ್ನು ಒಳಗೆ ಕರೆದರು.
“ಈಗಲೇ ಮಾಡೋ ಕೆಲಸ್ ಬಿಟ್ಟು ಆ ‘ಎ.ವಿ.ಪಿ’ ಹತ್ರ ಸೈನ್ ಹಾಕ್ಸು. ನಾಳೆ ನಮ್ ಎವಿಪಿ ಬಂದ್ರೆ ಇದನ್ನು ಕ್ವೆಶ್ಚನ್ ಮಾಡ್ತಾರೆ” ಎಂದರು.
ನನಗೆ ಒಳಗೇ ನಗು. ಏಕೆಂದರೆ ನಮ್ಮ ಬಾಸ್‍ನ ಬಾಸ್, ಇಂತಹ ಡಿಲೇಗಳನ್ನು ಒಪ್ಪರು. ಅವರು ಊರಲ್ಲಿರಲಿಲ್ಲ. ಇದೇ ಅವಕಾಶವಾಗಿ ಬಳಸಿಕೊಂಡು ನಮ್ಮ ಬಾಸ್, ಬೇರೆ ಡಿಪಾರ್ಟ್‍ಮೆಂಟಿನ ಎವಿಪಿ ಬಳಿ ಕಳಿಸಿದರು!
ಅವರು ಸೈನ್ ಹಾಕಲು ಮುಂದಾದವರು, ಇದ್ದಕ್ಕಿದ್ದಂತೆ, ಇದು ಹಳೆಯ ಬಿಲ್, ಸೈನ್ ಮಾಡಲ್ಲ ಅಂದರು!
ನನಗೆ ತಬ್ಬಿಬ್ಬು!!
Comments
Post a Comment