ಯತಿ ಸ್ವಂತೀ -258
15-09-2018
ನಮ್ಮ ಜಿಎಂ ಮತ್ತು ಅವರ ಮನೆಯ ಅನೇಕ ಸದಸ್ಯರು ಒಂದು ಅಪಘಾತದಲ್ಲಿ ಮಡಿದರು. ಅಬ್ಬಾ, ಭಯಾನಕ ಸಾವು! ನಾಲ್ಕು ಶವಗಳನ್ನು ಮಲಗಿಸಿದ್ದುದು ನೋಡಿ ಅನೇಕ ದಿನಗಳ ಕಾಲ ನಿದ್ರೆ ಮಾಡಿರಲಿಲ್ಲ ನಾನು.
ಅವರ ನಿರ್ಗಮನದಿಂದ ನಮ್ಮ ಮೋಟರ್ ಡಿಸೈನ್ ಬಾಸ್ ಈಗ ಜನರೇಟರ್ ಡಿಸೈನ್‍ಗೂ ಬಾಸ್ ಆದರು. ನನಗೆ ಮೊದಲಿನಿಂದ ನನ್ನ ಕೆಲಸ ಆಗುವ ವರೆಗೂ ಸಾಕಷ್ಟು ಘರ್ಷಣೆ ಉಂಟುಮಾಡುತ್ತಿದ್ದೆ.
ಕೆಲವು ಸಲ ನಾನು ಜಗಳವಾಡಿ ನನ್ನ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಳ್ಳುತ್ತಿದ್ದೆ.
ಒಮ್ಮೆ ಹಾಲಿಡೇ ಇನ್ ಒ ಇ ಎಂ ಮೀಟ್‍ನಲ್ಲಿ ಕಸ್ಟಮರ್ ನಮ್ಮ ಮೂವರು ಬಾಸ್‍ಗಳನ್ನೂ ಅವನ ಜನರೇಟರುಗಳ ಬಗ್ಗೆ ಕೇಳಿದ. ಅವು ವಿಶೇಷ ಯಂತ್ರಗಳು. ಇಂದೇ ಹೋಗಬೇಕೆಂದರು ಬಾಸ್‍ಗಳು. ಏಕೆಂದರೆ ಎದುರಿಗೆ ಕಸ್ಟಮರ್ ಇದ್ದನಲ್ಲ!
ನನ್ನೆದೆ ಧಸಕ್ಕೆಂದಿತು. ಅವು ಸಿದ್ಧವೇ ಆಗಿರಲಿಲ್ಲ. ನನ್ನ ಲೆಕ್ಚರ್ ಮುಗಿಸಿ ಹತ್ತು ಗಂಟೆಗೆ ಆಫೀಸಿಗೆ ಹಿಂದಿರುಗಿದೆ. ಮೊದಲು ಅವುಗಳ ‘ಬಾಡಿ’ಗಳನ್ನು ಸಿದ್ಧಮಾಡಲು ಶಾಪ್‍ನವರ ಬಳಿ ದುಂಬಾಲು ಬಿದ್ದೆ. ನಾನು ಜಗಳ ಆಡಿದರೂ ಅವರೇನೂ ತಪ್ಪು ತಿಳಿಯುತ್ತಿರಲಿಲ್ಲ. ಏಕೆಂದರೆ ನನ್ನ ಜಗಳವೇನಿದ್ದರೂ ಕೆಲಸ ಆಗಲೆಂದು.
ಅಲ್ಲಿ ಅವು ಸಿದ್ಧ ಆದ ಮೇಲೆ ಅವಕ್ಕೆ ರೋಟರ್ ಕೂಡ ರೆಡಿ ಮಾಡಿಸಿ, ಅವನ್ನು ಅಸೆಂಬಲ್ ಮಾಡಿಸಿ ನಂತರ ಟೆಸ್ಟ್ ಮಾಡಿಸಿದೆ. ಎಲ್ಲವೂ ಆಗಿ ಪೆಯಿಂಟ್ ಆಗಿ ಜನರೇಟರುಗಳು ಸಂಜೆ ಸಿದ್ಧವಾದವು. ಡಿಸ್ಪ್ಯಾಚ್‍ನಲ್ಲಿ ಒಂದು ಸಮಸ್ಯೆ ಬಂದಿತು. ಕಸ್ಟಮರ್ ಅವನ ಸಾರಿಗೆ ವಾಹನದಲ್ಲೇ ಹೋಗಬೇಕೆಂದ. ಅದು ನಮ್ಮ ಕಂಪೆನಿಯ ರೆಗ್ಯುಲರ್ ವಾಹನ ಕಂಪೆನಿ ಅಲ್ಲ. ಸೋ, ಅದಕ್ಕೂ ನಾನೇ ಮಾತಾಡಬೇಕಾಯಿತು. ಸಾರಿಗೆಯವನಿಗೂ ಅದು ಬೇಕಿರಲಿಲ್ಲ. ಏಕೆಂದರೆ ಅದು ಫುಲ್ ಲೋಡ್ ಅಲ್ಲ. ಅಂದರೆ ಹೆಚ್ಚು ಹಣ ಸಿಗಲಾರದು.
ಇದು ಸಾಲದೆಂಬಂತೆ ಜನರೇಟರ್ ಅರ್ಜೆಂಟ್ ಎಂದು ಒಬ್ಬ ಜಿಗಣೆಯಂತಹ ಅವರ ಕಡೆಯ ಮನುಷ್ಯನನ್ನು ನನ್ನ ಸೀಟಿನ ಮುಂದೆ ಕೂರಿಸಿದ್ದ ಕಸ್ಟಮರ್. ಮೊದಲ ಸಲ ನಾನು ಅವನ ಮೇಲೆ ಕೂಗಾಡಿದೆ. ಅವನೂ ತಬ್ಬಿಬ್ಬು. ನನ್ನ ಟೆನ್ಷನ್ ಅಷ್ಟಿತ್ತು.
ಕೊನೆಗೂ ಲಾರಿ ಬಂತು. ಜನರೇಟರುಗಳು ಆರು ಗಂಟೆಗೆ ಹೊರಟವು.
ಮರುದಿನ ಬೆಳಗ್ಗೆ ನಾನು ಮತ್ತೆ ಹಾಲಿಡೇ ಇನ್‍ಗೆ ಹೋದಾಗ ನಮ್ಮ ದೊಡ್ಡ ಬಾಸ್, ನಮ್ಮ ಬಾಸ್‍ಗೆ, ನಮ್ಮ ಬಾಸ್ ನನಗೆ ಒಂದು ಚೀಟಿಯನ್ನು ಕಳಿಸಿದರು. ಮಾತಾಡುವಂತಿಲ್ಲವಲ್ಲ! ಮೀಟಿಂಗು!
‘ಜನರೇಟರ್ಸ್ ಗಾನ್?’ ಅಷ್ಟೇ ಇದ್ದಿದ್ದು ಆ ಚೀಟಿಯಲ್ಲಿ. ‘ಗಾನ್’ ಎಂದು ಬರೆದೆ. ಆ ನಾಲ್ಕು ಅಕ್ಷರಗಳನ್ನು ಬರೆಯಲು ನಾನು ಹಿಂದಿನ ದಿನ ಪಟ್ಟ ಕಷ್ಟ ನನಗೇ ಗೊತ್ತು. ಹೌದು, ಅದು ನನ್ನ ಕರ್ತವ್ಯವೇ. ಆದರೂ ಆ ಟೆನ್ಷನ್...ಅಬ್ಬಾ! ಇಂಥವು ಎಷ್ಟೋ ಕೇಸ್‍ಗಳು!
Comments
Post a Comment