ಯತಿ ಸ್ವಂತೀ -257
14-09-2018
ಹೌದು, ಅವರ ಸವಾಲ್ ಚೆನ್ನಾಗಿತ್ತು. ಇದ್ದಕ್ಕಿದ್ದಂತೆ ನೀವು ಇಷ್ಟು ದಿನ ಇಲ್ಲದ್ದು ಈಗ ನಿಮ್ಮ ಜನರೇಟರ್ ಸಾಮರ್ಥ್ಯ ಹೆಚ್ಚಿಸಿದ್ದೀರಿ. ಅದಕ್ಕೆ ನಮಗೆ ಪುರಾವೆ ಬೇಕು. ನೀವೇಕೆ ಇದನ್ನು .... ಕಂಪೆನಿಯಿಂದ ಪ್ರಮಾಣೀಕರಿಸಬಾರದು? ಎಂದರು.
ಈಗ ನನಗೆ ಪೀಕಲಾಟಕ್ಕೆ ಬಂದಿತು. ನನ್ನ ಬಾಸ್ ಗುರ್ ಎಂದರೂ, ಆಯಿತು ಅವರನ್ನು ಕರೆದು ತಾ ಎಂದರು. ಸಾರಕ್ಕಿಯಲ್ಲೆಲ್ಲೋ ಇದ್ದರು ಆ ಇನ್ಸ್‍ಪೆಕ್ಟರ್.
ಅವರನ್ನು ಆಫೀಸಿಗೆ ಕರೆತಂದೆ.
ಅವರ ಕಂಪೆನಿ ನಮ್ಮ ಜನರೇಟರುಗಳನ್ನು ಪರೀಕ್ಷಿಸಲು ಒಪ್ಪಿತು. ಸರಿ, ಸುಮಾರು ದಿನಗಳ ಕಾಲ ಟೆಸ್ಟ್‍ಗಳು ನಡೆದವು. ಜನರೇಟರ್‍ಗೆ ಬಹು ಮುಖ್ಯವಾಗಿ ಹೀಟ್‍ರನ್ ಟೆಸ್ಟ್ ಮಾಡಬೇಕು. ಅಂದರೆ ಒಂದೇ ಸಮನೆ ಕೆಲವು ಗಂಟೆಗಳ ಕಾಲ ಒಂದೇ ರೀತಿಯ ಲೋಡ್ ಜೊತೆ ಓಡಬೇಕು. ಆಗ ಅದರ ಮೇಲ್ಮೈ ಶಾಖ ಹೆಚ್ಚಾಗಕೂಡದು. ಈಗೆಲ್ಲಾ ನಮ್ಮ ಉಪಕರಣಗಳ ಮೇಲೆ 24 ಬೈ 7 ಬೈ 365 ಅಂತ ಬರೆಯೋಲ್ವೇ? ಹಾಗೆ!
ಟೆಸ್ಟಿಂಗ್ ಮುಗಿಯುವ ವೇಳೆಗೆ ಆ ಇನ್ಸ್‍ಪೆಕ್ಟರ್ ಕೂಡ ನನಗೆ ಸಾಕಷ್ಟು ಪರಿಚಿತರಾದರು. ಹೊರಗಡೆ ಯಾವುದೋ ಅಂಗಡಿಯಲ್ಲಿ ಕಂಡಾಗ ಗುರುತು ಹಿಡಿಯುವಷ್ಟು!
ಅಂತೂ ಟೆಸ್ಟ್‍ನಲ್ಲಿ ಪಾಸಾಗಿದ್ದವು ನಮ್ಮ ಜನರೇಟರುಗಳು.
ಈ ವಿಷಯವೆಲ್ಲಾ ನನ್ನ ಸಹೋದ್ಯೋಗಿಗಳಿಗೆ ತಿಳಿದೇ ಇತ್ತು. ನಾನು ಮೊದಲೇ ಬಾಯಿಬಡುಕ. ಎಲ್ಲರಿಗೂ ಇದನ್ನೂ ಜೋಕ್‍ನಂತೆ ಹೇಳಿದ್ದೆ.
‘ಯತೀ, ನಿನಗೆ ಕಂಪೆನಿಯಿಂದ ಅವಾರ್ಡ್ ಗ್ಯಾರಂಟಿ’ ಎನ್ನುತ್ತಿದ್ದರು ಕೆಲವರು. ನಾನು ಸುಮ್ಮನೆ ನಗುತ್ತಿದ್ದೆ.
ನನ್ನ ಮನದಲ್ಲಿ ಒಂದು ಕತೆ ಓಡುತ್ತಿತ್ತು.
ಕೇಳಿರುತ್ತೀರಿ ನೀವು ಕೂಡ.
ಒಬ್ಬ ಕಾವಲುಗಾರನನ್ನು ತನ್ನ ಸಿಂಹಾಸನವನ್ನು ಕಾಯಲು ರಾಜ ನೇಮಿಸಿರುತ್ತಾನೆ. ಒಂದು ದಿನ ಆ ಕಾವಲುಗಾರ ಬಂದು, ರಾಜಾ, ನಿಮ್ಮ ಸಿಂಹಾಸನವನ್ನು ಕಾಯುತ್ತಿದ್ದಾಗ ನನಗೊಂದು ಕನಸು ಬಿತ್ತು. ನಿಮ್ಮ ಸಿಂಹಾಸನದ ಕೆಳಗೆ ಒಂದು ಕೊಪ್ಪರಿಗೆ ಹಣ ಇದೆ ಅಂತ ಎನ್ನುತ್ತಾನೆ. ರಾಜ ಅಲ್ಲಿ ಕೆತ್ತಿಸಿದಾಗ ಅವನಿಗೆ ಒಂದು ಕೊಪ್ಪರಿಗೆ ಹಣ ಸಿಗುತ್ತದೆ. ಕಾವಲುಗಾರ ಫುಲ್ ಖುಷ್. ಇನ್ನು ತನಗೆ ದೊಡ್ಡ ದೊಡ್ಡ ಬಹುಮಾನ ಖಚಿತ ಅಂತ. ಆದರೆ ರಾಜ ಅವನನ್ನು ಕೆಲಸದಿಂದ ಒದ್ದೋಡಿಸುತ್ತಾನೆ. ಯಾಕೆ? ‘ನೀನು ಕಾವಲು ಕಾಯುವಾಗ ಕನಸು ಕಂಡೆ ಎಂದರೆ ನೀನು ಸಿಂಹಾಸನದ ರಕ್ಷಣೆ ಮಾಡುತ್ತಿರಲಿಲ್ಲ ಅಂತಾಯ್ತು. ಅದರಿಂದ ನೀನು ಡಿಸ್‍ಮಿಸ್’ ಎಂದು ಓಡಿಸಿಬಿಡುತ್ತಾನೆ.
ನನ್ನ ಕೆಲಸವೂ ಹೆಚ್ಚು ಕಮ್ಮಿ ಅಂತಹದ್ದೇ. ನನ್ನ ನಿರ್ಲಕ್ಷ್ಯದಿಂದ ತಪ್ಪು ಜನರೇಟರ್‍ಗಳು ಹೋದವು. ಅದನ್ನು ಮುಚ್ಚಿಟ್ಟುಕೊಳ್ಳಲು ನಾವು ಈ ಟೆಸ್ಟ್ ಮಾಡಿಸಿದೆವು. ಆದ್ದರಿಂದ ನನ್ನನ್ನು ಕೆಲಸದಲ್ಲಿ ಉಳಿಸಿದ್ದೇ ಹೆಚ್ಚು!
ಮತ್ತೊಂದು ಆಘಾತ ಎಂದರೆ ನಮ್ಮ ಜನರೇಟರ್ ಡಿಸೈನ್ ಜಿ.ಎಂ. ಅವರ ಮನೆಯವರನೇಕರೊಂದಿಗೆ ಭೀಕರ ಅಪಘಾತದಲ್ಲಿ ಮರಣಿಸಿದ್ದು. ಅದು ನನ್ನ ಮೇಲೂ ಪರಿಣಾಮ ಬೀರಿತ್ತು...
Comments
Post a Comment