ಯತಿ ಸ್ವಂತೀ -256


13-09-2018
ಅವರಂತೆಯೇ ಕಪ್ಪು ಪ್ಯಾಂಟ್, ಬಿಳಿಯ ಷರಟು ಧರಿಸಿ ಆಫೀಸಿಗೆ ಬರತೊಡಗಿದ್ದೆ. ಅನೇಕರು ನನ್ನನ್ನು ಬೆನ್ನ ಹಿಂದಿನಿಂದ ತಟ್ಟಿ, ನನ್ನ ಬಾಸ್ ಹೆಸರು ಕರೆದು, ನಾನು ತಿರುಗಿ ನೋಡಿದಾಗ ‘ಓ ನೀವಾ?’ ಎಂದು ಅಚ್ಚರಿ ಪಟ್ಟವರೂ ಉಂಟು.
‘ನೀವೇನೂ ಹೆದರಬೇಡ್ರೀ. ಯಾರನ್ನ ಬೇಕಾದರೂ ದಬಾಯಿಸಿ. ನಮ್ಮ ಕೆಲಸ ಏನು? ಗ್ರಾಹಕರ ಸಂತೃಪ್ತಿ. ಅದಕ್ಕೆ ಏನು ಬೇಕಾದ್ರೂ ಮಾಡಿ. ನಿಮ್ಮ ಹಿಂದೆ ನಾನಿದ್ದೇನೆ’ ಎನ್ನುತ್ತಿದ್ದರು ಬಾಸ್. ಇನ್ನೇನು ಬೇಕಿತ್ತು ಒಬ್ಬ ಜ್ಯೂನಿಯರ್‍ಗೆ?
ಅವರು ಹೇಳುತ್ತಿದ್ದರು. ನಿಮ್ಮ ಕೆಲಸವನ್ನು ನಿಮ್ಮ ಬಾಸ್ ಮೆಚ್ಚಿಕೊಂಡರೆ ಇಡೀ ಕಂಪೆನಿಯೇ ನಿಮ್ಮ ಎದುರುಬಿದ್ದರೂ ಕಾಪಾಡುತ್ತಾನೆ. ಅದೇ, ನೀವು ಆತನಿಗೆ ಇಷ್ಟ ಆಗದಿದ್ದರೆ ಇಡೀ ಕಂಪೆನಿಯೇ ನಿಮ್ಮ ಬೆಂಬಲಕ್ಕಿದ್ದರೂ ನೀವು ಏಗಲಾರಿರಿ ಅಂತ.
ಹಿಂದೊಮ್ಮೆ ಆಗಿದ್ದ ಘಟನೆ ಇಲ್ಲಿ ಹೇಳಬೇಕು. ಈ ಬಾಸ್ ಬರುವ ಮುಂಚಿನ ಕಥೆ.
ಒಮ್ಮೆ ಪುಣೆಯ ನನ್ನ ಜಿಗಣೆ ಗ್ರಾಹಕರು ಎರಡು ಸ್ಪೆಷಲ್ ಜನರೇಟರ್ ಕೇಳಿದರು. ಯಾವುದೋ ಜ್ಞಾನ, ನನ್ನ ಉತ್ಸಾಹದಲ್ಲಿ ಮಾಮೂಲೀ ಜನರೇಟರುಗಳೆರಡನ್ನು ಇಲ್ಲಿಂದ ಪುಣೆಗೆ ಡಿಸ್ಪ್ಯಾಚ್ ಮಾಡಿಸಿಬಿಟ್ಟೆ!
ನನಗೆ ಅದು ತಿಳಿದುಬಂದಿದ್ದು ಬಾಸ್‍ನಿಂದ. ಪುಣೆಯಿಂದ ಅವರಿಗೆ ಕರೆ ಬಂದಿತ್ತು. ನನ್ನನ್ನು ಕರೆದು ಬೆಂಡ್ ಎತ್ತಿದರು.
ನನ್ನ ಒಂದು ಅಭ್ಯಾಸವಿತ್ತು. ಕಸ್ಟಮರುಗಳನ್ನು ನೋಡಿಕೊಳ್ಳುವುದು ನನ್ನ ಕೆಲಸದ ಭಾಗವಾದ್ದರಿಂದ, ಅವರುಗಳು ಟೆಸ್ಟಿಂಗ್ ಇಲಾಖೆಯಲ್ಲಿದ್ದಾಗ ಅನೇಕ ಸಲ ನಾನು ನನ್ನ ಸಮಯವನ್ನು ನಮ್ಮ ಡಿಸೈನ್ ಜನರಲ್ ಮ್ಯಾನೇಜರ್ ಬಳಿ ಕಳೆಯುತ್ತಿದ್ದೆ. ನಾವು ಮಾರಿದ ಅನೇಕ ಜನರೇಟರುಗಳ ಕಥೆಗಳನ್ನು ಅವರಿಗೆ ಹೇಳುತ್ತಿದ್ದೆ. ಅವರಿಗೂ ನನ್ನ ಹರಟೆ ಎಂದರೆ ಉತ್ಸಾಹವಿದ್ದೀತು. ಏಕೆಂದರೆ ಫೀಲ್ಡ್‍ನ ವಿಷಯಗಳನ್ನು ನಾನು ಮುಚ್ಚುಮರೆಯಿಲ್ಲದೇ ಒದರುತ್ತಿದ್ದೆ.
ಒಮ್ಮೆ ಅವರು ಹೇಳಿದ್ದರು. ಆ ನಿರ್ದಿಷ್ಟ ಜನರೇಟರ್‍ನಲ್ಲಿ ಮೂರು ಮಾಡೆಲ್‍ಗಳಿದ್ದವು. 250ರವರೆಗೆ ಒಂದು, 320ರವರೆಗೆ ಒಂದು, ಮುನ್ನೂರ ಎಂಬತ್ತರವರೆಗೆ ಒಂದು ಕೆಪ್ಯಾಸಿಟಿ ಇರುವಂಥದ್ದು. ನಾವು ಇವನ್ನು ಕಡಿಮೆ ಕ್ಯೆಪಾಸಿಟಿಯಲ್ಲಿ ಮಾರುತ್ತಿದ್ದೇವೆ ಎಂದಿದ್ದರು.
ಅದು ನನ್ನ ತಲೆಯಲ್ಲಿತ್ತು. ಈಗ ನಾನು ಕಳಿಸಿದ ಸಾಮಾನ್ಯ ಜನರೇಟರ್ ವಿಶೇಷಕ್ಕೆ ಮಾರ್ಪಡಿಸಬೇಕಿತ್ತು. ಅಂದರೆ ಅವನ್ನು ಮರಳಿ ತರಿಸಿ, ಬೇರೆ ಎರಡು ಕಳಿಸಬೇಕಿತ್ತು.
ನನಗೆ ನಮ್ಮ ಜಿ.ಎಂ. ಹೇಳಿದ ಮಾತು ನೆನಪಾಗಿ ‘ಬಾಸ್, ಇದಕ್ಕೇ ಆ ವಿಶೇಷ ಉಪಕರಣ ಅಳವಡಿಸಿದರೆ ಓಕೆ ಆಗುತ್ತಂತೆ. ಡಿಸೈನ್ ಜೀಯೆಂ ಹೇಳಿದ್ದಾರೆ’ ಅಂದೆ.
ಮಾಡೋದು ಮನೆಹಾಳು ಕೆಲಸ, ಅದರ ಮೇಲೆ ಜಸ್ಟಿಫಿಕೇಶನ್ ಎಂದು ಬೈದರು ನನ್ನ ಬಾಸ್. ಆದರೆ ಅವರ ಮನಸ್ಸಿನ ಮೂಲೆಯಲ್ಲಿ ಅದು ಕೆಲಸ ಮಾಡುವಂತಹ ಸ್ಕೀಂ ಎನ್ನಿಸಿರಬೇಕು.
ನಮ್ಮ ಪುಣೆಯ ಆಫೀಸಿನವರು ಹೋಗಿ ಆ ಎರಡು ಸ್ಟ್ಯಾಂಡರ್ಡ್ ಜನರೇಟರುಗಳನ್ನು ಸ್ಪೆಷಲ್ ಜನರೇಟರುಗಳಾಗಿ ಮಾರ್ಪಡಿಸಿದರು.
ಇದು ಪುಣೆಯ ಗ್ರಾಹಕರಿಗೆ ನುಂಗಲಾರದ ತುತ್ತಾಗಿತ್ತು ಎನಿಸುತ್ತದೆ. ಅವರು ನಮ್ಮ ಕಂಪೆನಿಯ ಮೇಲೆ ಸವಾಲೊಂದನ್ನು ಎಸೆದರು!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102