ಯತಿ ಸ್ವಂತೀ -254


11-09-2018
ಯಾಕೋ ಈವತ್ತು ಸುಮಾರು ಹದಿನೆಂಟು ವರ್ಷಗಳ ಹಿಂದಕ್ಕೆ ಹೋಗೋಣ ಎನ್ನಿಸುತ್ತಿದೆ. ಎಂತಹ ದುರಂತ ನಡೆದಿತ್ತು ಈ ದಿನ ಹದಿನೇಳು ವರ್ಷಗಳ ಕೆಳಗೆ!
ಹದಿನೆಂಟು ವರ್ಷಗಳ ಕೆಳಗೆ ಜುಲೈ 8.11.2000ದಂದು ನಾನು, ನನ್ನ ಗೆಳೆಯ/ಸಹೋದ್ಯೋಗಿ ಪ್ರಸಾದ್ ಮತ್ತು ಆತನ ಚಿಕ್ಕಪ್ಪನ ಮೊಮ್ಮಗಳು ಲಕ್ಷ್ಮಿ ಒಂದು ಟೂರ್ ಹೋಗಿದ್ದೆವು. ಎಲ್ಲಿಗೆ?
ನ್ಯೂಯಾರ್ಕ್ ಸಿಟಿಯಲ್ಲಿ ನಮ್ಮದು ಅಂದು ಟೂರ್ ಇತ್ತು.
ಹೌದು, 2000 ಇಸವಿಯಲ್ಲಿ ನಾನು ಕೆಲಸದ ನಿಮಿತ್ತ ವಾಷಿಂಗ್‍ಟನ್‍ಗೆ ಹೋಗಿದ್ದೆ. ಆಗ ಬಂದ ಮುಂದಿನ ವಾರಾಂತ್ಯದಲ್ಲಿ ನ್ಯೂಯಾರ್ಕ್ ನಗರಕ್ಕೆ ಹೋದೆವು.
ವಾಷಿಂಗ್‍ಟನ್‍ನ ಸಿಲ್ವರ್ ಸ್ಪ್ರಿಂಗ್ಸ್‍ನಲ್ಲಿ ಬಸ್ ಹತ್ತಿ ಬೆಳಗ್ಗೆ ಆರಕ್ಕೆ ಹೊರಟೆವು. ಸುಮಾರು ಹತ್ತೂವರೆಗೆ ನ್ಯೂಯಾರ್ಕ್‍ನ ಪೋರ್ಟ್ ಅಥಾರಿಟಿಯಲ್ಲಿದ್ದೆವು. ಹೊರಗೆ ಬಂದರೆ ಏನೋ ಭಯ. ಮ್ಯಾನ್‍ಹಟನ್‍ನ ಪ್ರತಿಯೊಂದು ಕಟ್ಟಡವೂ ನಮ್ಮನ್ನು ಬಾಗಿ ನೋಡುತ್ತಿವೆಯೇನೋ ಎಂಬ ಕ್ರೀಪೀ ಭಾವನೆ.
ಬೇರೆ ಎಲ್ಲ ವಿಷಯ ಆಮೇಲೆ ಹೇಳುವೆ. ಆದರೆ ಟಾಪ್‍ಲೆಸ್ ಡಬ್ಬಲ್‍ಡೆಕ್ಕರ್ ಬಸ್ ಹತ್ತಿ ಎಂಪೈರ್ ಸ್ಟೇಟ್ ಬಿಳ್ಡಿಂಗ್ ಬಳಿ ಇಳಿದೆವು. ವಿಪರೀತ ಜನಸಂದಣಿ ಇತ್ತು ಮೇಲೆ ಹೋಗೋಕ್ಕೆ. ಆಕಾಶ ನೋಡೋಕ್ಕೆ ನೂಕು ನುಗ್ಗಲಾ ಎನ್ನಿಸದಿರಲಿಲ್ಲ. ಹೋಗಲಿ ಬಿಡಿ, ನಾವು ವರ್ಲ್ಡ್ ಟ್ರೇಡ್ ಸೆಂಟರ್‍ಗೆ ಹೋಗೋಣ ಎಂದರು ನಮ್ಮೊಂದಿಗೆ ಬಂದ ಲಕ್ಷ್ಮಿ, ನಮ್ಮ ನಿರಾಶಾವದನಗಳನ್ನು ಕಂಡು.
ಅಲ್ಲಿಂದ ಮತ್ತೆ ಬಸ್ ಹತ್ತಿದೆವು. ಒಮ್ಮೆ ಟಿಕೆಟ್ ತೆಗೆದುಕೊಂಡರೆ ಸಾಕು, ಯಾವಾಗ ಎಲ್ಲಿ ಬೇಕಾದರೂ ಆ ಬಸ್ ಹತ್ತಬಹುದಿತ್ತು.
ವರ್ಲ್ಡ್ ಟ್ರೇಡ್ ಸೆಂಟರ್ ಬಳಿಗೆ ಬಂದೆವು. ಸಾಲಾಗಿ ಕ್ಯೂ ನಿಂತೆವು. ನಿಮ್ಮ ಬಳಿ ಇರುವ ವಸ್ತುಗಳನ್ನು ತೋರಿಸಿ ಎಂದರು. ನಾನು ಕ್ಯಾಮೆರಾ ತೋರಿಸಿದೆ. ಅದರ ಬಗ್ಗೆ ಅವರಿಗೆ ಲಕ್ಷ್ಯವಿರಲಿಲ್ಲ. ಮೇಲೆ ಹೋಗುವ ಮುಂಚೆ ಅಲ್ಲೊಬ್ಬ ನಮ್ಮ ಫೋಟೋ ತೆಗೆದ. ನಮ್ಮ ದಸರಾ ಎಕ್ಸಿಬಿಷನ್‍ನಲ್ಲಿ ರಟ್ಟಿನ ತಾಜ್‍ಮಹಲ್ ಮುಂದೆ ತೆಗೆಸಿಕೊಂಡಂತೆ!
ಸುಮಾರು 58 ಸೆಕೆಂಡುಗಳ ಪ್ರಯಾಣ. 102 ಮಹಡಿಗಳು. ಸುಮಾರು 8 ಬೈ 16 ಅಡಿಗಳ ಎರಡು ಲಿಫ್ಟ್‍ಗಳು. ಜುಂಯ್ ಅಂತ ಮೇಲೆ ಹೋಗುವಾಗ ಏರೋಪ್ಲೇನ್‍ನಲ್ಲಿ ಹೋದಂತಹ ಅನುಭೂತಿ.
ಮೇಲೆ ಹತ್ತಿದಾಗ ಏನೋ ಒಂಥರಾ ಸುಪ್ರೀಂ ಫೀಲಿಂಗ್. ಎಲ್ಲೋ ಪ್ರಪಂಚದ ಅತ್ಯಂತ ಎತ್ತರದಲ್ಲಿದ್ದಂತೆ. ಕೆಳಗೆ ಹಡ್ಸನ್ ನದಿ. ದೂರದಲ್ಲಿ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಕಾಣುತ್ತಿತ್ತು. ಒಂದು ಮಹಡಿ ಕೆಳಗೆ ಬಂದಾಗ ಅಲ್ಲೊಂದು ರೆಸ್ಟುರಾ. ಅಲ್ಲಿ ಏನೋ ತಿಂದ ನೆನಪು. ಮತ್ತೆ ಅಲ್ಲಿತ್ತು ನಮ್ಮ ಪಟ. ಹತ್ತು ಡಾಲರ್ ಎಂದ. ಅಬ್ಬಾ... ಎಂದು ಅಲ್ಲೇ ಬಿಟ್ಟುಬಿಟ್ಟೆವೆಂದು ಜ್ಞಾಪಕ.
ಹತ್ತು ಡಾಲರ್‍ನಲ್ಲಿ ಹತ್ತು ದಿನ ಊಟ ಮಾಡಬಹುದಾಗಿತ್ತು ಆಗೆಲ್ಲಾ!
ಮರುವರ್ಷ ಗೋಕುಲಾಷ್ಟಮಿಗೆ ಆ ರಾತ್ರಿ ನಮ್ಮ ಮನೆಯ ತುಂಬಾ ಗೆಳೆಯರು. ಆಗ ಬಂದಿತ್ತು ಸುದ್ದಿ. ವರ್ಲ್ಡ್ ಟ್ರೇಡ್ ಸೆಂಟರ್‍ನ ಎರಡೂ ಕಟ್ಟಡಗಳಿಗೆ ವಿಮಾನಗಳು ಗುದ್ದಿ ಅವು ನೆಲಕ್ಕೆ ಕುಸಿದುವೆಂಬ ದುರಂತದ ಸುದ್ದಿ.

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102