ಯತಿ ಸ್ವಂತೀ -253
10-09-2018
ದಿನವೂ ಬೆಳಗ್ಗೆ ಒಂಬತ್ತು ಗಂಟೆಗೆ ನಾನೆಲ್ಲಿದ್ದರೂ ನನ್ನ ಸೀಟಿಗೆ ಬರಬೇಕು. ಅಲ್ಲಿ ನಾನು ಪುಣೆಯಿಂದ ಬರುವ ಕರೆಯನ್ನು ಸ್ವೀಕರಿಸಬೇಕು. ನಿನ್ನೆ ಯಾವ ಯಾವ ಜನರೇಟರ್ ಹೋಗಿದೆ ಅವರಿಗೆ ಎಂದು ಹೇಳಬೇಕು. ಇಂದು ಯಾವುದು ಹೋಗುವುದು ಎಂದು ಹೇಳಿ, ಮತ್ತೆ ಮರುದಿನ ಏನೇನು ಸಿದ್ಧ ಆಗಬಹುದು ಎಂದು ಕೂಡ ಹೇಳಬೇಕು. ಈ ಕರೆಗೆ ಎಫ್.ಟಿ.ಸಿ. ಎಂದು ಹೆಸರು. ಅಂದರೆ ಫಿಕ್ಸೆಡ್ ಟೈಂ ಕಾಲ್. ಇದೊಂದು ರೀತಿಯ ತಲೆನೋವು ನನಗೆ. ಈ ಕಂಪೆನಿ ಒಂದೇ ಅಲ್ಲ ನನ್ನ ಗ್ರಾಹಕ. ಅನೇಕ ಕಂಪೆನಿಯವರು ಇದೇ ಸೈಜಿನ ಜನರೇಟರ್ ಕೇಳುತ್ತಿದ್ದರು. ಎಲ್ಲರನ್ನೂ ಖುಷಿ ಪಡಿಸುವ ಒಂದು ವಿಶಿಷ್ಟ ಕೆಲಸ ನನ್ನದು!
ಒಂದು ಸಲವಂತೂ ನನಗೆ ಅವರ ಕರೆ ತೆಗೆದುಕೊಳ್ಳಲು ಚಿಟ್ಟು ಹಿಡಿದಿತ್ತು. ಇನ್ನೊಂದು ವಿಷಯ. ಗುರುವಾರ ಪುಣೆಗೆ ರಜೆ. ನಮಗೆ ಭಾನುವಾರ ರಜೆ. ಅಬ್ಬಾ! ವಾರದಲ್ಲಿ ಐದೇ ದಿನ ಈ ಕರೆಯನ್ನು ಸ್ವೀಕರಿಸಬೇಕಾಗಿರುವುದು ಎನ್ನುವ ನಿರಾಳ ಭಾವವೂ ಇತ್ತು.
ಸರಿ, ಒಂದು ದಿನ ಆ ಕರೆ ಬಂದಾಗ ನಾನು ನನ್ನ ಸೀಟಿನ ಎದುರು ಕುರ್ಚಿಯ ಮೇಲೆ ಕೂತೆ. ಕರೆ ಬಂದಿತು. ನನ್ನ ಶಿಷ್ಯ ಫೋನೆತ್ತಿ, ‘ಅವನು ಅವನ ಸೀಟಿನಲ್ಲಿಲ್ಲ’ ಎಂಬ ಸತ್ಯ ಹೇಳಿದ. ನಮಗೆಲ್ಲಾ ನಗುವೋ ನಗು.
ಅಲ್ಲಿಂದ ಒಮ್ಮೆ ಆ ಮನುಷ್ಯ ನಮ್ಮ ಆಫೀಸಿಗೆ ಬಂದ. ಅದೇ... ದಿನವೂ ನನಗೆ ಫೋನ್ ಮಾಡುತ್ತಿದ್ದಾತ. ನೋಡಿದರೆ ನನಗಿಂತ ಚಿಕ್ಕವನು. ಒಮ್ಮೆ ಮುಖ ನೋಡಿದ ನಂತರ ಒಂದಿಷ್ಟು ಗೆಳೆತನ ಬೆಳೆಯಿತು. ಅವನೊಂದಿಗೆ ಮಧ್ಯಾಹ್ನದ ಊಟಕ್ಕೆ ಹೋದೆ. ಅವನು ತನ್ನ ಪುಟ್ಟ ಮಗಳಿಗೆ ಗೊಂಬೆ, ಫ್ರಾಕ್ ಕೊಳ್ಳಬೇಕೆಂದ. ಅವನನ್ನು ಕೆಂಪೇಗೌಡ ರಸ್ತೆಯ ಕಿಡ್ಸ್‍ಕೆಂಪ್‍ಗೆ ಕರೆದೊಯ್ದ ನೆನಪು.
ಒಂದು ಸಲ ಅಂದರೆ ಒಂದು ವರ್ಷದ ನಂತರ ಅವರ ಕಂಪೆನಿಗೆ ಹೋಗಿ ಲೆಕ್ಚರ್ ಕೊಟ್ಟಿದ್ದೆ ಒಂದು ವಾರ. ಅದರ ಕಥೆ ಆಮೇಲೆ.
ಇನ್ನೂ ಅನೇಕ ಗ್ರಾಹಕರು ಬಂದರು. ಕೆಲವರು ಇಲ್ಲಿ ಇರೋ ಸೀನಿಯರ್ ಇಂಜಿನಿಯರ್ ಎಂದು ಬಂದರು. ಕೆಲವರು ನನ್ನ ಹೆಸರು ಕೇಳಿಕೊಂಡೇ ಬಂದರು.
ನನ್ನನ್ನು ಕೆಲಸದಿಂದ ತೆಗೆದು ಹಾಕಬಹುದಾಗಿದ್ದ ಸನ್ನಿವೇಶ ಸೃಷ್ಟಿಸಿದ್ದ ಆ ಇನ್ಸ್‍ಪೆಕ್ಟರ್ ತನ್ನ ಜನರೇಟರನ್ನು ಫೈನಲ್ಲಾಗಿ ಟೆಸ್ಟ್ ಮಾಡಲು ಬರುವ ವೇಳೆಗೆ ನನಗೆ ವರ್ಗವಾಗಿಬಿಟ್ಟಿತ್ತು. ಅದರ ಕಥೆ ನಂತರ.
ಆ ಇನ್ಸ್‍ಪೆಕ್ಟರ್ ನನ್ನನ್ನು ನನ್ನ ಹೊಸ ಡಿಪಾರ್ಟ್‍ಮೆಂಟಿಗೆ ಹುಡುಕಿಕೊಂಡು ಬಂದು ಥ್ಯಾಂಕ್ಸ್ ಹೇಳಿ ಹೋದರು.
ಇದು, ನನ್ನ ಮೇಲೆ ಅವರಿಗಿದ್ದ ನಿಜವಾದ ಅಂತಃಕರಣ. ಏಕೆಂದರೆ ನಾನು ಅವರಿಗೆ ವಾಗ್ದಾನ ನೀಡಿದ್ದಂತೆ ಅದನ್ನು ಸಿದ್ಧಗೊಳಿಸಿದ್ದೆ.
ನನ್ನ ಅನೇಕ ಕೆಲಸಗಳು ನನ್ನನ್ನು ಫಜೀತಿಗೆ ಗುರಿ ಮಾಡಿ, ಕಂಪೆನಿಗೆ ಒಳ್ಳೆಯದು ಮಾಡಿದ್ದೂ ಉಂಟು! ಅದರ ಬಗ್ಗೆ ಆಮೇಲೆ...
Comments
Post a Comment