ಯತಿ ಸ್ವಂತೀ -252
09-09-2018
ನಾನು ಏನೂ ಮಾತಾಡಲಿಲ್ಲ. ಅವರೇ ನಾನು ಮಿನಿಟ್ಸ್ ಆಫ್ ಮೀಟಿಂಗ್ ಫೈಲ್ ಮಾಡಿದ್ದ ಬಾಕ್ಸ್ ಫೈಲ್ ತರಿಸಿ, ನನ್ನನ್ನು ಕರೆದು, ‘ಪಾರ್ಟ್‍ಲೀ ಪ್ರೆಸೆಂಟ್ ಅಂತ ಬರೀರಿ ವಿ.ಪಿ.ಗಳ ಬಗ್ಗೆ’ ಎಂದರು.
ಅಲ್ಲಿಗೆ ಆ ಕಥೆ ಮುಗಿಯಿತು.
ಈ ಬಾಸ್ ಬಗ್ಗೆ ಮತ್ತೊಂದು ವಿಷಯ ಹೇಳಬೇಕು. ನನ್ನ ಕಂಡರೆ ಅವರಿಗೆ ಬಹಳ ಇಷ್ಟ. ನಾನು ಮದುವೆಯಾದ ಒಂದು ವರ್ಷದಲ್ಲಿ ಬಸವಣ್ಣನ ಗುಡಿ ರಸ್ತೆಗೆ ವಾಸ್ತವ್ಯ ಬದಲಾಯಿಸಿದ್ದು ಸರಿಯಷ್ಟೆ. ಅವರಿದ್ದುದು ಹನುಮಂತನಗರದಲ್ಲಿ. ದಿನವೂ ಸ್ಕೂಟರ್ ಅಥವಾ ಕಾರಿನಲ್ಲಿ ಆಫೀಸಿಗೆ ಹೋಗುತ್ತಿದ್ದರು. ನನ್ನನ್ನು ಅವರೊಂದಿಗೆ ಬಾ ಎನ್ನುತ್ತಿದ್ದರು. ನಾನು, ನನ್ನ ಪತ್ನಿ ಇಬ್ಬರೂ ಬುಲ್‍ಟೆಂಪಲ್ ರಸ್ತೆಯ ಸಾಯಿರಂಗ ಕಲ್ಯಾಣ ಮಂಟಪದ(ಈಗ ಇಲ್ಲ) ಕಾಂಪೌಂಡಿನ ಬಳಿ ಮಾತಾಡುತ್ತಾ ನಿಲ್ಲುತಿದ್ದೆವು ಅವರು ಬಂದು ನನ್ನನ್ನು ಕರೆದುಕೊಂಡು ಹೋಗುವ ವರೆಗೂ.
ಅವರು ಬಸ್‍ನಲ್ಲಿ ಬಂದಾಗ ಇಬ್ಬರೂ ಬಸ್‍ನಲ್ಲಿ ಹೋದ ದಿನಗಳೂ ಇವೆ.
ಅವರೊಂದಿಗೇ ಬರುವುದು, ಅವರ ಕೆಲಸವಾದೊಡನೆ ‘ಯತಿರಾಜ್’ ಎನ್ನುತ್ತಿದ್ದರು. ಇದ್ದಿದ್ದು ಇದ್ದ ಹಾಗೇ ಬಿಟ್ಟು ಹೋಗುವ ಪರಿಸ್ಥಿತಿ ನನಗೆ ಎದುರಾಯಿತು. ನನ್ನ ಸ್ಕೂಟರ್ ಕೊಳ್ಳುವೆನೆಂದಾಗ ‘ಸೈಟ್ ಕೊಂಡುಕೊಳ್ರೀ. ಮನೆ ಕಟ್ರೀ. ಅದು ಮುಖ್ಯ. ನಾನು ನಿಮ್ಮನ್ನ ಕರಕೊಂಡು ಹೋಗ್ತೀನಿ’ ಎನ್ನುತ್ತಿದ್ದರು.
ನನ್ನ ಪೇಪರುಗಳ ಹೊರೆ ಜಾಸ್ತಿಯಾದ ಸಮಯ. ಏನು ಮಾಡಲೂ ತೋಚದ ಪರಿಸ್ಥಿತಿ. ಆಗ ನನ್ನ ಸೋದರತ್ತೆಯ ಮನೆಯಲ್ಲಿ ಇರಬೇಕಾದ ಅನಿವಾರ್ಯ ಬಂದಿತು.
ಅದು ನಮ್ಮ ಕಾರ್ಖಾನೆಗೆ ವಾಕಬಲ್ ದೂರದಲ್ಲಿತ್ತು.
ಅಲ್ಲಿಗೆ ಶಿಫ್ಟ್ ಆಗಿಬಿಟ್ಟೆ. ದಿನವೂ ಅಲ್ಲಿಂದ ಬೇಗನೆ ಆಫೀಸ್ ತಲುಪಿ ನನ್ನ ಪೇಪರುಗಳನ್ನು ಕ್ಲಿಯರ್ ಮಾಡುತ್ತಿದ್ದೆ.
ಈ ನಡುವೆ ಒಂದೆರಡು ಕಾಮಿಡಿಗಳಾದವು.
ಒಂದು : ನಮ್ಮ ಕಂಪೆನಿಯ ಮುಂದಿನ ರಸ್ತೆಗೆ ಡಾಂಬರು ಹಾಕುತ್ತಿದ್ದುದರಿಂದ ನಮ್ಮ ದೊಡ್ಡ ಜನರೇಟರ್ ಒಂದು ಚಿಕ್ಕ ರಸ್ತೆಯಲ್ಲಿ ಹೋಗಲು ತೊಡಗಿ, ಅಲ್ಲಿ ಲಾರಿ ಮಗುಚಿಕೊಂಡು, ಜನರೇಟರ್ ಬಿದ್ದುಹೋಯಿತು.
ಕಸ್ಟಮರ್ ಗಲಾಟೆ ಮಾಡಿ ಫೋನ್ ಮಾಡಿದಾಗ ಅವನಿಗೆ ಸತ್ಯ ಸಂಗತಿ ತಿಳಿಸುವಂತಿರಲಿಲ್ಲ. ಆ ಜನರೇಟರ್ ಸಾಮಾನ್ಯವಾಗಿ ದೆಹಲಿ-ಉತ್ತರಪ್ರದೇಶದ ಗಡಿಯಲ್ಲಿನ ಒಂದು ಗೋಡೌನ್‍ಗೆ ಹೋಗಿ, ಯು.ಪಿ. ಪ್ರವೇಶಿಸಲು ಅನುಮತಿ ಪತ್ರ ಪಡೆದು ನಂತರ ಒಳಗೆ ಹೋಗಬೇಕಿತ್ತು (ಫಾರಂ 31).
ಗ್ರಾಹಕ ಫೋನ್ ಮಾಡಿದಾಗ ನನ್ನ ಬಾಸ್ ಒಬ್ಬರು ‘ಅದೆಲ್ಲೋ ಡೆಲ್ಲಿ ಯೂಪಿ ಬಾರ್ಡರ್‍ನಲ್ಲಿ ಬಿದ್ದಿರಬೇಕು(ಲೈಯಿಂಗ್)’ ಎನ್ನುತ್ತಾ ಕಿಟಕಿಯಿಂದ ಹೊರಗೆ ನೋಡುತ್ತಿದ್ದರು. ಆ ಜನರೇಟರ್ ಅಲ್ಲೇ ಅವರಿಗೆ ಕಾಣುವಂತೆ ಆ ಸಣ್ಣ ರಸ್ತೆಯಲ್ಲಿ ಬಿದ್ದಿತ್ತು. ನಮಗೆ ನಮ್ಮ ಎರಡನೇ ಮಹಡಿಯಿಂದ ಸ್ಪಷ್ಟವಾಗಿ ಕಾಣುತ್ತಿತ್ತು. ನಮಗೆಲ್ಲಾ ನಗುವೋ ನಗು!
ಇನ್ನೊಂದು ವಿಷಯ. ಪುಣೆಯ ಒಂದು ಕಂಪೆನಿ ನನ್ನನ್ನು ಅವರೊಂದಿಗೆ ದಿನವೂ ಮಾತಾಡುವ ಕರಾರು ಮಾಡಿಕೊಂಡಿತ್ತು. ಎಂತಹ ತಲೆನೋವಿನ ಕೆಲಸ ಅದು ಅಂತೀರಿ!
Comments
Post a Comment