ಯತಿ ಸ್ವಂತೀ -251
08-09-2018
ಯಾರನ್ನೂ ಡಿಸ್ಟರ್ಬ್ ಮಾಡಕೂಡದು ಎಂದ ದೊಡ್ಡ ಬಾಸ್ ನನ್ನನ್ನು ಅವರ ಆಫೀಸಿಗೇ ಕರೆಸಿದ್ದರು. ಇದೊಂದು ರೀತಿಯ ವಿಪರ್ಯಾಸ. ಬಹುಶಃ ನಾನು ಹೊಸ ಕೆಲಸ ಹುಡುಕಿಕೊಳ್ಳಬೇಕು ಎಂದುಕೊಂಡೆ. ನಾನು ಸಕ್ಕರೆ ಮೂಟೆಯ ಇರುವೆಯಂತಾಗಿದ್ದೆ. ಇದೇ ನನ್ನ ಬದುಕು. ಇಲ್ಲೇ ರಿಟೈರ್ ಆಗೋಣ ಎಂದೆಲ್ಲಾ ಕನಸು ಕಾಣುತ್ತಿದ್ದುದು ನೆನೆದು ನಗು ಬಂದಿತು. ಆದರೆ ವಿಷಾದವೂ ಇತ್ತು.
ಅವರ ಆಫೀಸಿನೊಳಗೆ ಹೋದೆ. ಅವರ ಸೆಕ್ರೆಟರಿ ಇದ್ದರು. ‘ಯತಿರಾಜ್, ಬಾಸ್ ಇಲ್ಲಿಲ್ಲ. ಅಲ್ಲಿದ್ದಾರೆ’ ಎಂದು ಎಲ್ಲಿದ್ದಾರೆಂದು ಹೇಳಿದರು.
ಅಂದರೆ ನನಗೆ ಡಬ್ಬಲ್ ಷಾಕ್! ನಮ್ಮ ಬಾಸ್‍ನ ಬಾಸ್ ಬಳಿ ನಮ್ಮ ಬಾಸ್‍ನ ಬಾಸ್‍ನ ಬಾಸ್ ಕೂತಿದ್ದಾರೆ!
ಮುಗಿಯಿತು ನನ್ನ ಕತೆ ಎಂದುಕೊಂಡು ತಕ್ಷಣದ ಸಮಸ್ಯೆಯನ್ನು ನೋಡಲು ಆ ಷಿಪ್ಪಿಂಗ್ ಯಾರ್ಡ್ ಛೀಫ್‍ನ ಮಾತಾಡಿಸಿದೆ.
ಅವರ ಕಾಫಿ ಸೇವನೆ ಆಗಿತ್ತು.
‘ನಮಸ್ಕಾರ ಸರ್. ಈ ಎಲ್ಲ ಸಮಸ್ಯೆಗಳಿಗೂ ನಾನೇ ಕಾರಣ. ಇನ್ನೊಂದು ಸ್ವಲ್ಪ ದಿನ ಅವಕಾಶ ಕೊಡಿ. ಎಲ್ಲವನ್ನೂ ನಾನು ಸರಿ ಮಾಡುತ್ತೇನೆ’ ಎಂದೆ ಬಲು ಧೈರ್ಯವಾಗಿ. ಹೇಗೆ ಎಂಬುದು ಆಗಿನ್ನೂ ನನಗೆ ತಿಳಿಯದು. ಆದರೆ ಗ್ರಾಹಕರಿಗೆ ಭರವಸೆ ನೀಡುವುದು ಎಲ್ಲಕ್ಕಿಂತ ಮುಖ್ಯ ಎಂಬುದನ್ನು ಅರಿತಿದ್ದೆ.
‘ಸರಿ’ ಎಂದು ಅವರು ನಕ್ಕರು.
ಅವರನ್ನು ಕರೆದೊಯ್ದು ನಮ್ಮ ಮಾರ್ಕೆಟಿಂಗ್ ಇಲಾಖೆಯ ಬಾಸ್‍ನ ಬಾಸ್ ರೂಮಲ್ಲಿ ಕೂರಿಸಿ, ಕಾನ್ಫರೆನ್ಸ್ ಹಾಲ್‍ಗೆ ಹೋದೆ. ಹೋಗಿ ಇವರು ಬಂದಿರುವ ವರದಿ ಮಾಡಿದೆ.
ಆಗ ಒಂದು ವಿಶೇಷ ನಡೆಯಿತು. ಇಂದಿಗೂ ಆ ಗೋಡೆಯನ್ನು ನೆನೆದು ಅದಕ್ಕೆ ನಮಿಸುತ್ತೇನೆ.
ಆ ಗೋಡೆಯ ಬದಿಯಲ್ಲಿ ನಾನು ನಿಂತಿದ್ದಾಗ ನನ್ನ ಬಾಸ್‍ನ ಬಾಸ್, ಅವರ ಬಾಸ್ ಇಬ್ಬರೂ ನನ್ನ ಬೆನ್ನ ಮೇಲೆ ಕೈಯಿಟ್ಟು, ‘ಅವರಿಗೆ ಏನು ಹೇಳೋಣ?’ ಎಂದರು!
ನನಗೆ ತಬ್ಬಿಬ್ಬು, ಸಂತೋಷ. ಕುಣಿಯುವಂತಾಗಿತ್ತು. ಹಾಗಾದರೆ ಈಗಲೇ ನಾನು ಇಲ್ಲಿಂದ ಓಡಿಸಲ್ಪಡುವುದಿಲ್ಲ ಎಂದುಕೊಂಡೆ!
‘ಬಿಡಿ ಸಾರ್. ನಾನವರಿಗೆ ಆಗಲೇ ಹೇಳಿ ಆಯ್ತು. ಅವರೂ ಒಪ್ಪಿಕೊಂಡಿದ್ದಾರೆ. ಆದಷ್ಟು ಬೇಗ ಕೊಡಿಸ್ತೇನೆ ಅಂತ ಹೇಳಿದ್ದೇನೆ. ನಿಮಗೇ ಗೊತ್ತಲ್ಲಾ ನಮ್ಮ ಪೀಣ್ಯ ಯೂನಿಟ್ ಸಮಸ್ಯೆ?’ ಎಂದೆ. ಅದೊಂದು ಬಾಂಬ್‍ನಂತರ ಮಾತೆಂದು ನನಗೆ ತಿಳಿದಿತ್ತು.
ತಕ್ಷಣವೇ ಇಬ್ಬರೂ ನನ್ನ ಜೊತೆ ಚೇಂಬರ್‍ಗೆ ಬಂದರು. ಅಪಾಲಜಿ ಕೇಳಿಕೊಂಡರು. ಮಿನಿಟ್ಸ್ ಆಫ್ ಮೀಟಿಂಗ್ ಮಾಡಿದೆ.
ಅವರು ಹೊರಟರು. ನಾನು ಮಿನಿಟ್ಸ್‍ನ ಬಾಸ್‍ಗಳ ಬಳಿ ತೋರಿಸಿ ಅವರ ಸಹಿ ಪಡೆದಿದ್ದೆ ಕೂಡ.
ಆ ಕಾಗದವನ್ನು ಆ ಜನರೇಟರ್ ಬಾಕ್ಸ್‍ಫೈಲಲ್ಲಿ ಹಾಕಿ ಸುಮ್ಮನಿದ್ದುಬಿಟ್ಟೆ.
ನನಗೆ ಆಗೆಲ್ಲಾ ಭಯಾನಕ ಮುಂಗೋಪ. ಆ ಕಾರಣದಿಂದ ನನ್ನ ಬಾಸ್ ಮೇಲೆ ಸಿಟ್ಟಿತ್ತು.
ಮರುದಿನ ಬೆಳಗ್ಗೆ ಅಲ್ಲಿಗೆ ಬಂದ ಬಾಸ್ ನನ್ನನ್ನು ಕಂಡು ಆಶ್ಚರ್ಯ ಪಟ್ಟಿರಬಹುದು. ಇವನನ್ನು ಓಡಿಸಲಿಲ್ವಾ ಎಂದು!
Comments
Post a Comment