ಯತಿ ಸ್ವಂತೀ -250
07-09-2018
ನನಗೆ ಉರಿದುಹೋಯಿತು. ನನಗೆ ಖುಷಿ ಆಯಿತು. ಇದನ್ನು ಸೆಲೆಬ್ರೇಟ್ ಮಾಡಬೇಕಾ ಅಥವಾ ಆ ನೋಟೀಸಿಗೆ ಸಿಟ್ಟು ಮಾಡಿಕೊಳ್ಳಬೇಕಾ ಎನ್ನುವ ದ್ವಂದ್ವದಲ್ಲಿ ಬಿದ್ದೆ. ಆಗ ಬಡ್ತಿ ಪಡೆದವರೆಲ್ಲ ಎಲ್ಲರಿಗೂ ಸಿಹಿ ಹಂಚಿದರು. ನಾನು ಯಾರಿಗೂ ಸ್ವೀಟು ಕೊಡಲಿಲ್ಲ.
ವಿಷಯ ನಡೆದಿದ್ದು ಇದು.
ನಾನು ಕೊಡೈಕೆನಾಲ್‍ಗೆ ಹೋದ ಸಮಯದಲ್ಲಿ ಗ್ರಾಹಕನೊಬ್ಬ ನಮ್ಮ ಬಾಸ್‍ನ ನೋಡಲು ಬಂದಿದ್ದಾನೆ. ಅವನದು ಒಂದು ವಿಶೇಷ ಜನರೇಟರ್. ಅಷ್ಟು ದಿನ ನಮ್ಮ ಕಾರ್ಖಾನೆಯಲ್ಲೇ ತಯಾರಾಗುತ್ತಿದ್ದಾಗ ನನಗೆ ಸುಲಭವಾಗಿ ಕೆಲಸ ಆಗುತ್ತಿತ್ತು. ಏಕೆಂದರೆ ನನ್ನ ಒಳ್ಳೆಯ ಸಂವಹನವಿತ್ತು ಇಡೀ ಫ್ಯಾಕ್ಟರಿಯಲ್ಲಿ. ಈ ಲೇಖನ ಓದುವ ಯಾವ ಕಿರ್ಲೋಸ್ಕರ್ ಸಹೋದ್ಯೋಗಿಯಾದರೂ ಇದಕ್ಕೆ ವೌಚ್ ಮಾಡಬಲ್ಲರು.
ಆದರೆ ಈ ನಿರ್ದಿಷ್ಟ ಸೈಜಿನ ಜನರೇಟರನ್ನು ನಮ್ಮ ಪೀಣ್ಯ ಯೂನಿಟ್ಟಿಗೆ ವರ್ಗಾಯಿಸಿದ್ದರು. ಅಲ್ಲಿ ನಮ್ಮ ನಿಯಂತ್ರಣವಿರಲಿಲ್ಲ. ಅಲ್ಲಿನ ಜನಕ್ಕೆ ನಮ್ಮ ಉತ್ಪನ್ನ ಮಲಮಗುವಿನ ತರಹ ಆಗಿತ್ತು.
ಈ ಹಂತ ಹಂತದ ಚೆಕ್ ಮಾಡುವುದು ಅಷ್ಟು ಸುಲಭವಿರಲಿಲ್ಲ. ಎಂತಹ ಇಕ್ಕಟ್ಟಿನ ಪರಿಸ್ಥಿತಿ ಆ ಜನರೇಟರ್‍ದು. ಅದಕ್ಕಿಂತ ಇರುಕಿನ ಸ್ಥಿತಿಗೆ ಈಗ ನಾನು ಸಿಕ್ಕಿಕೊಂಡಿದ್ದೆ ಇದರಿಂದಾಗಿ.
ಇದಾಗಿ ಒಂದು ವಾರದಲ್ಲಿ ಆ ಜನರೇಟರ್ ಕೊಳ್ಳುವ ಷಿಪ್ಪಿಂಗ್ ಯಾರ್ಡ್‍ನ ಛೀಫ್ ನಮ್ಮ ಅತಿ ದೊಡ್ಡ ಬಾಸ್ ಅವರನ್ನು ಕಾಣಲು ಬರುತ್ತಿದ್ದಾರೆ ಎಂಬ ಸುದ್ದಿ ಬಂತು.
ಆಗೆಲ್ಲಾ ನಾನು ಬೇಗನೆ ಊಟ ಮಾಡಿ ಬಂದು ನನ್ನ ಸೀಟಿನಲ್ಲಿರುತ್ತಿದ್ದೆ. ವಿಪರೀತ ಕೆಲಸ. ಒಂದು ರಾಸಿ ಪೇಪರ್‍ಗಳನ್ನು ಕ್ಲಿಯರ್ ಮಾಡಬೇಕಿತ್ತು. ದಿನಕ್ಕೆ ಒಂದು – ಎರಡು ಇಂಚು ಎತ್ತರದ ಪೇಪರುಗಳು ಬರುತ್ತಿದ್ದವು ಅಂಚೆಯಲ್ಲಿ. ಆಗೆಲ್ಲಾ ಈ ಮೆಯ್ಲ್ ಇನ್ನೂ ಇರಲಿಲ್ಲ.
ನಮ್ಮ ಇಮ್ಮೀಡಿಯೇಟ್ ಬಾಸ್ ಕೂಡ ಸೀಟಿನಲ್ಲೇ ಊಟ ಮಾಡಿ, ಹತ್ತು ನಿಮಿಷ ಪವರ್ ನ್ಯಾಪ್ ಮಾಡಿ ಎದ್ದು ಕೂತು ಕೆಲಸ ಮುಂದುವರಿಸುತ್ತಿದ್ದರು. ಅರ್ಧಗಂಟೆಯ ಬ್ರೇಕ್ ಇರುತ್ತಿತ್ತು ನಮಗೆ.
ನನ್ನ ಸೀಟಿನ ಬಳಿ ಬಂದರು ಬಾಸ್.
‘ನೋಡು, ಮುಂದಿನ ಸೋಮವಾರ ಆ ಛೀಫ್ ಬರುತ್ತಿದ್ದಾರೆ. ನಾನು ಬೇಕೆಂದೇ ಒಂದು ದಿನದ ಟ್ರಿಪ್ ಹಾಕ್ಕೊಂಡು ಬಾಂಬೆಗೆ ಹೋಗ್ತಿದ್ದೀನಿ. ನಾನ್ಯಾಕೆ ಬೈಸಿಕೊಳ್ಳಲಿ. ನೀನು ಬೈಸಿಕೋ. ಅವರೇನು ಶಿಕ್ಷೆ ಕೊಟ್ಟರೆ ಅನುಭವಿಸು. ಇಟ್ಸ್ ಯುವರ್ ಫ್ಯೂನರಲ್!’ ಎಂದುಬಿಟ್ಟರು.
ನನಗೆ ತಬ್ಬಿಬ್ಬಾಯಿತು. ಗಾಬರಿಯಾಯಿತು. ಬಾಸ್‍ನ ಬಾಸ್ ಕೋಪಿಷ್ಠರು. ಅವರ ಬಾಸ್ ಇನ್ನೂ ಅಪಾಯಕಾರಿ. ಸಿಟ್ಟು ಬಂದರೆ ಕೆಲಸದಿಂದ ಒದ್ದೋಡಿಸುವರೆಂದೇ ಕೇಳಿದ್ದೆ.
ಈಗ ನಾನೇನು ಮಾಡಲಿ? ಸಂಸಾರ ಇದೆ. ಮದುವೆ ಆಗಿದೆ. ಅಪ್ಪನಿಗೆ ಮೈಯಲ್ಲಿ ಚೆನ್ನಾಗಿಲ್ಲ. ಈಗೇನು ಮಾಡಲಿ ಎಂದು ಪರದಾಡಿದೆ.
ಆದರೇನು ಮಾಡುವುದು? ಯಾವ ಕೆಲಸವೂ ನಿಲ್ಲುವಂತಿಲ್ಲ.
ನನಗೆ ಆಗ ಒಂದು ಟ್ರೈನಿಂಗ್ ಹಾಕಿದ್ದರು. ಆ ಟ್ರೈನಿಂಗ್‍ನಿಂದ ಯಾರನ್ನೂ ಹೊರಗೆ ಬಿಡಬಾರದು ಎಂದಿದ್ದರು ನಮ್ಮ ಬಾಸ್‍ನ ಬಾಸ್‍ನ ಬಾಸ್. ಆದರೆ ನನಗೆ ಅವರ ಕಛೇರಿಯಿಂದಲೇ ಕರೆ ಬಂದಿತು. ಇದಲ್ಲವೇ ವಿಪರ್ಯಾಸ? ಈಗ ಆ ಛೀಫ್ ಅನ್ನು ನಾನು ಮುಖಾಮುಖಿ ಮಾಡಬೇಕು. ಆಯಿತು. ಇದು ನನ್ನ ಕೊನೆಯ ದಿನ ಈ ಕಂಪೆನಿಯಲ್ಲಿ ಎಂದುಕೊಂಡೇ ಅವರ ಆಫೀಸಿನತ್ತ ನಡೆದೆ.
Comments
Post a Comment