ಯತಿ ಸ್ವಂತೀ -248
05-05-2018
ಈಗ ಉದಯನ ಮದುವೆ ವಿಷಯಕ್ಕೆ ಬರೋಣ.
ಅವನ ಮದುವೆ ಆಗಿದ್ದು ಪ್ರೇಮಿಗಳ ದಿನದಂದು. ಯಶವಂತಪುರದ ತ್ರಿವೇಣಿ ರಸ್ತೆಯನ್ನು ನೋಡಿರದಿದ್ದರೆ ಅದರ ಬಗ್ಗೆ ಹೇಳುತ್ತೇನೆ. ಅತ್ಯಂತ ಕಿರಿದಾದ, ಆದರೆ ವಾಹನ ನಿಬಿಡ ರಸ್ತೆ ಅದು.
ನನ್ನ ಕಿರ್ಲೋಸ್ಕರ್ ದಿನಗಳಲ್ಲಿ ನಾನು ಎಲ್ಲ ಡಿಪಾರ್ಟ್‍ಮೆಂಟಿಗೂ ಓಡಾಡುತ್ತಿದ್ದುದರಿಂದ ಎಲ್ಲರ ಪರಿಚಯವೂ ಇತ್ತು. ನನಗೆ ತಿಳಿದ ಮಟ್ಟಿಗೆ ನನ್ನ ಸಹೋದ್ಯೋಗಿಗಳು ಮತ್ತು ಸ್ನೇಹಿತರ ಮದುವೆಗಳಲ್ಲಿ ನಾನು ಬಾಗಿಲಲ್ಲಿ ನಿಂತು ಎಲ್ಲರನ್ನೂ ಸ್ವಾಗತಿಸಿದ್ದೇ ನನ್ನ ಕೆಲಸವಾಗಿತ್ತು.
ಅದೇ ರೀತಿ ಉದಯನ ಮದುವೆಯಲ್ಲೂ ನಿಂತಿದ್ದೆ. ಸಂಜೆ ರಿಸೆಪ್ಷನ್. ಹಾಲ್ ಫುಲ್ ರಷ್ಷು. ಹೊರಗೆ ಆ ಕಿರಿದಾದ ತ್ರಿವೇಣಿ ರಸ್ತೆಯಲ್ಲಿ ಕಾರುಗಳ ಸಾಲು ಸಾಲು.
ನಾನು ಹೊರಗೆ ನಿಂತು ಮುಗುಳ್ನಗುತ್ತಾ ಎಲ್ಲರನ್ನೂ ಸ್ವಾಗತಿಸುತ್ತಿದ್ದೆ.
ಆಗ ಬಂದಿದ್ದರು ನಾಲ್ವರು ನಾಲ್ಕು ಬೈಕ್‍ಗಳಲ್ಲಿ. ಎಲ್ಲರೂ ನೇವಿ ಡ್ರೆಸ್‍ನಲ್ಲಿದ್ದರು.
ಹೊರಗೆ ನಿಂತಿದ್ದ ನನ್ನ ಬಳಿಗೆ ಬಂದು, “ಇನ್ನೇನು ರಾಜ್ಯಪಾಲರು ಬರ್ತಾರೆ. ಹುಡುಗಿಯ ತಂದೆಗೆ ಹೇಳಿಬಿಡು” ಎಂದು ನನಗೆ ಹೇಳಿ ಹೊರಟುಹೋದರು.
ನಾನು ಒಳಗೆ ಧಾವಿಸಿ ಹೋಗಿ ಉದಯನ ಮಾವನವರಿಗೆ ಹೇಳಿ ಹೊರಗೆ ಬಂದೆ.
ಇಲ್ಲಿ ರಾಮಕೃಷ್ಣ ಪರಮಹಂಸರ ಒಂದು ಕಥೆಯನ್ನು ನಿಮಗೆ ನಾನು ಹೇಳಬೇಕು.
ರಾಮಕೃಷ್ಣರು ಒಬ್ಬರ ಮನೆಯಲ್ಲಿ ಊಟಕ್ಕೆ ಹೋಗಿದ್ದರಂತೆ. ಅಲ್ಲಿ ಅವರಿಗೆ ಇನ್ನೇನೂ ತಿನ್ನಲಾಗದಷ್ಟು ತಿಂದಿದ್ದರಿಂದ ಇನ್ನೇನೂ ತಿನ್ನಲಾಗದು ಎಂದು ಬಡಿಸುವವರಿಗೆ ಹೇಳಿದರಂತೆ.
ಅಷ್ಟರಲ್ಲಿ ಅಲ್ಲಿಗೆ ಒಬ್ಬ ಜಿಲೇಬಿಗಳನ್ನು ತಂದನಂತೆ. ಎರಡು ಹಾಕಿ ಎಂದರಂತೆ ರಾಮಕೃಷ್ಣರು.
ಗುರೂಜೀ, ಈಗ ತಾನೇ ಜಾಗ ಇಲ್ಲ. ಕುತ್ತಿಗೆವರೆಗೆ ತಿಂದಾಗಿದೆ ಎಂದಿರಲ್ಲಾ ಎಂದಾಗ ರಾಮಕೃಷ್ಣರು ನಕ್ಕು, ಕಲ್ಕತ್ತಾದ ಟ್ರಾಫಿಕ್‍ಜ್ಯಾಮ್ ಬಗೆಗೆ ತಿಳಿಯದವರುಂಟೇ? ಆದರೂ ಗವರ್ನರರ ಕಾರು ಬಂದಾಗ ಇಡೀ ರಸ್ತೆ ಚೊಕ್ಕಟವಾದಂತೆ ಖಾಲಿಯಾಗುವುದಲ್ಲಾ, ಹಾಗೆಯೇ ಜಿಲೇಬಿ ಎಂದೊಡನೆ ನನ್ನ ಹೊಟ್ಟೆಯಲ್ಲಿ ಜಾಗ ಹುಟ್ಟಿಕೊಳ್ಳುತ್ತದೆ. ಜಿಲೇಬಿ ನನ್ನ ಪಾಲಿಗೆ ಗವರ್ನರರ ಕಾರು ಎಂದರಂತೆ.
ಈ ಕತೆಯನ್ನು ಬಹಳ ಹಿಂದೆ ಓದಿದ್ದರೂ, ಅನೇಕ ಬಾರಿ ಉದಹರಿಸಿದ್ದರೂ, ಇಂದು ಅದನ್ನು ಪ್ರತ್ಯಕ್ಷ ಕಂಡು ಬೆರಗಾದೆ.
ಸುಮಾರು ಹದಿನೈದು ನಿಮಿಷಗಳಲ್ಲಿ ಆ ತ್ರಿವೇಣಿ ರಸ್ತೆಯಲ್ಲಿದ್ದ ಎಲ್ಲ ಕಾರುಗಳೂ ಮಾಯವಾಗಿದ್ದವು.
ಈಗಿನ ಕಾಲದಲ್ಲಾದರೆ ಮೊಬೈಲ್ ಇದೆ. ಡ್ರೈವರ್ ಓಡಿಸಿಕೊಂಡು ಬಂದಿರುವ ಕಾರಾದರೆ ಅವರಿಗೆ ಫೋನ್ ಮಾಡಿ, ಓನರ್ ಡ್ರಿವನ್ ಕಾರಾದರೆ ಅವರನ್ನು ಸಂಪರ್ಕಿಸಿ, ಎಷ್ಟು ಸುಲಭದ ಕೆಲಸ ಅಲ್ಲವೇ?
ಆದರೆ 1988!
ಅದು ಹೇಗೆ ಹದಿನೈದು ನಿಮಿಷಗಳಲ್ಲಿ ಅಷ್ಟೂ ಜನ ಡ್ರೈವರುಗಳನ್ನು ಸಂಪರ್ಕಿಸಿ (ಅತಿಥಿಗಳು ತುಂಬಿ ಹೋಗಿದ್ದ ರಿಸೆಪ್ಷನ್ ಅದು!) ತ್ರಿವೇಣಿ ರಸ್ತೆಯನ್ನು ನೀಟಾಗಿ ಗುಡಿಸಿದಂತೆ ಖಾಲಿ ಮಾಡಿಸಿದ್ದರು.
ಆಮೇಲೆ ಬಂದಿತ್ತೊಂದು ಪುಷ್ಪಕ ವಿಮಾನದಂತಹ ಕಾರು. ಆ ರಸ್ತೆಯನ್ನು ತುಂಬಿಕೊಂಡುಬಿಟ್ಟಿತ್ತು ಅಗಲದಲ್ಲಿ.
ಹೊರಗೆ ಇಳಿದರು ರಾಜ್ಯಪಾಲರು!
Comments
Post a Comment